ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಮಳೆ ಹಾನಿ ಹಾಗೂ ಪ್ರಾಕೃತಿಕ ವಿಕೋಪದಿಂದ ಪುತ್ತೂರು ತಾಲೂಕಿನಲ್ಲಿ ೮ ಕೋಟಿಗೂ ಅಧಿಕ ನಷ್ಟ ಉಂಟಾಗಿದ್ದು, ಪುತ್ತೂರಿಗೆ ೧೦ ಕೋಟಿ ರು. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಪುತ್ತೂರಿಗೆ ಮುಖ್ಯಮಂತ್ರಿಗಳು ಆಗಮಿಸಿ ವೀಕ್ಷಣೆ ನಡೆಸುವಂತೆ ವಿನಂತಿ ಮಾಡಿರುವುದಾಗಿ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಅವರು ಶಾಸಕರ ಕಚೇರಿಯಲ್ಲಿ ಶನಿವಾರ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಕೊಂಬೆಟ್ಟು ಹಾಸ್ಟೆಲ್, ಸಮುದಾಯ ಭವನ, ಉಪ್ಪಿನಂಗಡಿ ಜೂನಿಯರ್ ಕಾಲೇಜು, ಪುಳಿತ್ತಡಿಯಲ್ಲಿ ಕಾಳಜಿ ಕೇಂದ್ರಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಈತನಕ ಕಾಳಜಿ ಕೇಂದ್ರಗಳ ಅನಿವಾರ್ಯತೆ ಉಂಟಾಗಿಲ್ಲ ಎಂದರು.ನಷ್ಟ ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದ್ದು, ಕಂದಾಯ ಇಲಾಖೆಯ ಪ್ರಾಕೃತಿಕ ವಿಕೋಪ ನಿಧಿಯಲ್ಲಿ ೫೦ ಲಕ್ಷ ರು. ಹಣ ಲಭ್ಯವಿದೆ. ತುರ್ತು ಸ್ಪಂದನೆಯ ನಿಟ್ಟಿನಲ್ಲಿ ಗ್ರೇಡ್-೧ ಗ್ರಾ.ಪಂ.ಗಳಿಗೆ ೨೫ ಸಾವಿರ. ಗ್ರೇಡ್ -೨ ಗ್ರಾ.ಪಂ.ಗಳಿಗೆ ೧೫ ಸಾವಿರ ರು. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅಗತ್ಯಬಿದ್ದರೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
೭೬೦ ವಿದ್ಯುತ್ ಕಂಬಗಳಿಗೆ ಹಾನಿ: ಮಳೆ ಗಾಳಿಯಿಂದ ಮೆಸ್ಕಾಂನಲ್ಲಿ ೭೬೦ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ.10 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಒಟ್ಟು ೨ ಕೋಟಿ ಅಧಿಕ ನಷ್ಟವಾಗಿದೆ. ೩೮ ಕಿ.ಮೀ.ದೂರ ವಿದ್ಯುತ್ ಲೈನ್‌ಗಳಿಗೆ ಹಾನಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿ ಎಂ. ರಾಮಚಂದ್ರ ಸಭೆಯ ಗಮನಕ್ಕೆ ತಂದರು.ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿ ೨ ಕೋಟಿ, ಪಂಚಾಯತ್ ರಾಜ್ ವ್ಯಾಪ್ತಿಯಲ್ಲಿ ೩.೭ ಕೋಟಿಯಷ್ಟು ನಷ್ಟ ಉಂಟಾಗಿದ್ದು, ನಗರ ಸಭಾ ವ್ಯಾಪ್ತಿಯಲ್ಲಿ ೬ ಕಿ.ಮೀ. ರಸ್ತೆಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸುಮಾರು ೧೮೦ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ೪ ಮರಗಳನ್ನು ತೆರವುಗೊಳಿಸಲು ಕಾರಣಾಂತರಗಳಿಂದ ಬಾಕಿಯಾಗಿದೆ ಎಂದು ವಲಯಾರಣ್ಯಾಧಿಕಾರಿ ಕಿರಣ್ ಮಾಹಿತಿ ನೀಡಿದರು.ಶ್ರೀ ಮಹಾಲಿಂಗೇಶ್ವರ ದೇವಾಲಯ ಬಳಿ ೧೯ ಮನೆಗಳಿಗೆ ನೀರು ನುಗ್ಗಿದೆ. ಅಪಾಯಕಾರಿಯಾಗಿರುವ ಮನೆಗಳಿಗೆ ಸಂಬಂಧಿಸಿದಂತೆ ೧೬ ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ೫ ಮನೆಯವರನ್ನು ಸ್ಥಳಾಂತರಿಸಲಾಗಿದೆ ಎಂದು ಪೌರಾಯುಕ್ತ ಮಧು ಎಸ್. ಮನೋಹರ್ ತಿಳಿಸಿದರು.
ಖಾಸಗಿ ಗುಡ್ಡ ಕುಸಿತಕ್ಕೆ ಸರ್ಕಾರದಿಂದ ಪರಿಹಾರ ಇಲ್ಲ. ಹೀಗಾಗಿ ಯೋಗ್ಯ ಸ್ಥಳದಲ್ಲಿ ಮನೆ ಕಟ್ಟುವುದು ಸೂಕ್ತ. ಗುಡ್ಡಗಳನ್ನು ಕತ್ತರಿಸುವ ಸಂದರ್ಭದಲ್ಲಿ ಜಾಗೃತಿ ವಹಿಸಿದರೆ ಸಮಸ್ಯೆ ಉಂಟಾಗುವುದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಸಭೆಯಲ್ಲಿ ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ತಾಲೂಕು ಆರೋಗ್ಯಧಿಕಾರಿ ಡಾ. ದೀಪಕ್ ರೈ, ವಲಯ ಅರಣ್ಯಾಧಿಕಾರಿ ಕಿರಣ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜಾರಾಂ, ಮೆಸ್ಕಾಂ ಎಂಜಿಯರ್ ರಾಮಚಂದ್ರ, ಪಶು ವೈದ್ಯಾಧಿಕಾರಿ ಡಾ. ಧರ್ಮಪಾಲ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.