ಹಲವು ಸಮಸ್ಯೆಗಳ ಪರಿಹಾರಕ್ಕೆ ಸಚಿವರಿಗೆ ಮನವಿ: ಶ್ರೀನಿವಾಸ್

| Published : Jun 25 2024, 12:36 AM IST / Updated: Jun 25 2024, 12:37 AM IST

ಸಾರಾಂಶ

ನರಸಿಂಹರಾಜಪುರತಾಲೂಕಿನ ವ್ಯಾಪ್ತಿಯ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಮನವಿಸಲ್ಲಿಸಿದ್ದೇನೆ ಎಂದು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ವ್ಯಾಪ್ತಿಯ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಮನವಿಸಲ್ಲಿಸಿದ್ದೇನೆ ಎಂದು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ಪುಲಿಯನ್ (ಪೊಲಯನ್) ಜಾತಿಗೆ ಸೇರಿದ 100 ವರ್ಷಗಳ ಹಿಂದೆ ಕೇರಳದಿಂದ ವಲಸೆ ಬಂದು ಎನ್.ಆರ್.ಪುರ ತಾಲೂಕಿನ ವ್ಯಾಪ್ತಿ ಮತ್ತು ಸೂಸಲವಾನಿ ಗ್ರಾಮದಲ್ಲಿ ವಾಸವಾಗಿರುವ ಪುಲಿಯನ್ ಜಾತಿಯವರನ್ನು ಈ ಹಿಂದೆ ನಡೆದಿದ್ದ ಕರ್ನಾಟಕ ರಾಜ್ಯದ ಜಾತಿಗಳ ಪಟ್ಟಿಯಲ್ಲಿ ಹಿಂದೆ ಗಣಕೀಕರಣವಾಗುವ ಸಂದರ್ಭದಲ್ಲಿ ಕೈ ಬಿಟ್ಟು ಹೋಗಿರುತ್ತದೆ. ಸದರಿ ಜಾತಿಯವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ . ಹಾಗಾಗಿ ಪುಲಿಯನ್ ಜಾತಿಯನ್ನು ರಾಜ್ಯದ ಜಾತಿಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಮನವಿ ಮಾಡಲಾಗಿದೆ ಎಂದರು.

ಪಟ್ಟಣದಲ್ಲಿ ನೂತನವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲಾಗಿದ್ದು ಈ ವೃತ್ತದ ಅಭಿವೃದ್ಧಿ ಮತ್ತು ಪ್ರತಿಮೆ ನಿರ್ಮಾಣಕ್ಕೆ 1 ಕೋಟಿ, ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯ ಗಾಂಧಿ ಗ್ರಾಮದ ಪರಿಶಿಷ್ಟಜಾತಿ ಕಾಲೋನಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 40 ಲಕ್ಷ, ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಪರಿಶಿಷ್ಟ ಜಾತಿ ಕಾಲೋನಿಯ ಆಲ್ದರ–ಬೈರಾಪುರ ರಸ್ತೆ ಅಭಿವೃದ್ಧಿಗೆ 40 ಲಕ್ಷ, ತಾಲೂಕಿನ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ವಾಸಿಸುತ್ತಿರುವ ವಿವಿಧ ಕಾಲೋನಿಗಳಲ್ಲಿ ಹೈಮಾಸ್ಕ್ ಮತ್ತು ಸೋಲಾರ್ ದೀಪ ಅಳವಡಿಕೆಗೆ 60 ಲಕ್ಷ ಹಾಗೂ ತಾಲೂಕಿನಲ್ಲಿ ಪರಿಶಿಷ್ಟ ಸಮುದಾಯದವರು ವಾಸಿಸುತ್ತಿರುವ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಿಗುಡ್ಡ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ 30 ಲಕ್ಷ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಇದ್ದರು.