ದಯಾಮರಣಕ್ಕೆ ರಾಷ್ಟ್ರಪತಿಗೆ ಮೊರೆ!

| Published : Aug 15 2024, 01:47 AM IST

ಸಾರಾಂಶ

ಹಣ ಪಾವತಿಸಿದಲ್ಲಿ ಮಾತ್ರ ಮನೆ ವಾಪಸ್‌ ಕೊಡುವುದಾಗಿ ಹೇಳಿ, ಭದ್ರತಾ ಸಿಬ್ಬಂದಿ ನೇಮಿಸಿದ್ದಾರೆ

ಕನ್ನಡಪ್ರಭ ವಾರ್ತೆ ಗದಗ

ಸೊಸೆಯ ಕಿರುಕುಳದಿಂದ ಬೇಸತ್ತಿರುವ ಅತ್ತೆ ಹಾಗೂ ಮಗ ದಯಾ ಮರಣಕ್ಕಾಗಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮೊರೆಹೋದ ಘಟನೆ ಬುಧವಾರ ನಗರದಲ್ಲಿ ವರದಿಯಾಗಿದೆ.

ಇಲ್ಲಿನ ಆದಿತ್ಯ ನಗರದ ನಿವಾಸಿಯಾಗಿರುವ ಅನುಸೂಯಾ ಬಸವಂತಪ್ಪ ಕರಕಿಕಟ್ಟಿ ಹಾಗೂ ಅವರ ಪುತ್ರ ಶಿವಕುಮಾರ ದೂರು ಸಲ್ಲಿಸಿದ ವ್ಯಕ್ತಿಗಳಾಗಿದ್ದಾರೆ.

ನಮ್ಮ ಸೊಸೆ ಪಾರ್ವತೆವ್ವ ಹುನಗುಂದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ನಮಗೆ ತಿಳಿಯದಂತೆ ನಮ್ಮ ಮನೆಯ ಕಾಗದಪತ್ರವನ್ನು ಹುಬ್ಬಳ್ಳಿಯ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಅಡವಿಟ್ಟು ₹11 ಲಕ್ಷ ಸಾಲ ಪಡೆದುಕೊಂಡಿದ್ದಾರೆ. ಇದರ ಬಗ್ಗೆ ನನಗೆ ಹಾಗೂ ನನ್ನ ಪುತ್ರನಿಗೆ ಯಾವುದೇ ಮಾಹಿತಿ ಇಲ್ಲ. 6 ವರ್ಷಗಳಿಂದ ಕಂತು ಕಟ್ಟದೇ ಬಾಕಿ ಉಳಿಸಿಕೊಂಡಿದ್ದು, ಇತ್ತೀಚಿಗೆ ಬ್ಯಾಂಕ್‌ ಸಿಬ್ಬಂದಿ, ಪೊಲೀಸರು ಮನೆಗೆ ಬಂದಾಗಲೇ ನಮಗೆ ವಿಷಯ ಗೊತ್ತಾಗಿದೆ. ಬಳಿಕ ಬ್ಯಾಂಕಿನವರು ನಮ್ಮನ್ನು ಮನೆಯಿಂದ ಹೊರ ಹಾಕಿ ಬೀಗ ಜಡಿದಿದ್ದು, ಹಣ ಪಾವತಿಸಿದಲ್ಲಿ ಮಾತ್ರ ಮನೆ ವಾಪಸ್‌ ಕೊಡುವುದಾಗಿ ಹೇಳಿ, ಭದ್ರತಾ ಸಿಬ್ಬಂದಿ ನೇಮಿಸಿದ್ದಾರೆ. ನಾವೀಗ ಬೀದಿಯಲ್ಲಿ ವಾಸಿಸುವಂತಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಡಿಸಿ ಪತ್ರ ಬರೆದರೂ:

ನಮಗೆ ನ್ಯಾಯ ಕೊಡಿಸುವಂತೆ 29-07-2024 ರಂದು ಗದಗ ಎಸ್ಪಿಗೆ ಮನವಿ ಸಲ್ಲಿಸಿದ್ದು, ಅವರು ಸಂಬಂಧಿಸಿದ ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಿದ್ದರು. ಆದರೆ ಪೊಲೀಸರು ದೂರು ತೆಗೆದುಕೊಳ್ಳದಿದ್ದಾಗ ಹಿಂದಿನ ಜಿಲ್ಲಾಧಿಕಾರಿ ವೈಶಾಲಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದು, ನ್ಯಾಯ ಒದಗಿಸುವಂತೆ ಪತ್ರ ಸಹ ಬರೆದಿದ್ದಾರೆ. ಬೀಗ ಹಾಕಿರುವ ಮನೆಗೆ ನೋಟಿಸ್‌ ಸಹ ಅಂಟಿಸಲಾಗಿದೆ.

ಇಷ್ಟಾದರೂ ನಮಗೆ ನ್ಯಾಯ ದೊರಕದಿದ್ದಾಗ ಜನಪ್ರತಿನಿಧಿಗಳು, ಸಾಮಾಜಿಕ ಮುಖಂಡರು ಮತ್ತು ಮಹಿಳಾ ಸಂಘಟನೆಗಳನ್ನು ಭೇಟಿ ಮಾಡಿ ನ್ಯಾಯ ಒದಗಿಸುವಂತೆ ಕೋರಿದ್ದೇವೆ. ಯಾರೂ ಸ್ಪಂದಿಸುತ್ತಿಲ್ಲ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ನಮಗೆ ನ್ಯಾಯ ಸಿಕ್ಕಿಲ್ಲ, ಸಿಗುವ ಭರವಸೆಯೂ ಇಲ್ಲ. ಇವತ್ತಿಗೂ ಬೀದಿಯಲ್ಲಿ ಬದುಕು ಸಾಗಿಸುತ್ತಿದ್ದೇವೆ. ಬದುಕೇ ಬೇಸರವಾಗಿದೆ. ರಾಷ್ಟ್ರಪತಿಗಳು ನಮಗೆ ದಯಾಮರಣ ನೀಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.