ಸಾರಾಂಶ
ಮಾನ್ವಿ ಬಸ್ ನಿಲ್ದಾಣದಿಂದ ತೀರ್ಥಕ್ಷೇತ್ರಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ವೀರಶೈವ ಲಿಂಗಾಯತ ಸಮಾಜದ ತಾಲೂಕು ಸಮಿತಿಯಿಂದ ಆಗ್ರಹಿಸಲಾಯಿತು. ಸಮಿತಿ ಪದಾಧಿಕಾರಿಗಳು, ಸದಸ್ಯರು ಘಟಕದ ಸೂಪರ್ ವೈಜರ್ ದಸ್ತಗೀರಿ ಅವರಿಗೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಮಾನ್ವಿ
ಇಲ್ಲಿನ ಬಸ್ ನಿಲ್ದಾಣದಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವ ವ್ಯವಸ್ಥೆಯನ್ನು ಆರಂಭಿಸಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ತಾಲೂಕು ಸಮಿತಿಯಿಂದ ಆಗ್ರಹಿಸಲಾಯಿತು.ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಗೆ ಆಗಮಿಸಿದ ಸಮಿತಿ ಪದಾಧಿಕಾರಿಗಳು, ಸದಸ್ಯರು ಘಟಕದ ಸೂಪರ್ ವೈಜರ್ ದಸ್ತಗೀರಿ ಅವರಿಗೆ ಮನವಿ ಮಾಡಿದರು. ಮಾನ್ವಿ ತಾಲೂಕಿನ ವಿವಿಧ ಗ್ರಾಮ ಹಾಗೂ ಪಟ್ಟಣದ ಜನರು ತಮ್ಮ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡುವುದಕ್ಕೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಮುಂಗಡ ಕಾಯ್ದಿರಿಸುವ ವ್ಯವಸ್ಥೆ ಇಲ್ಲದೆ ಇರುವುದರಿಂದ ದೂರದ ಊರುಗಳಿಗೆ ಪ್ರಾಯಾಣ ಮಾಡುವ ತಾಲೂಕಿನ ಜನರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಬಸ್ ನಿಲ್ದಾಣದಲ್ಲಿ ಮುಂಗಡ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಬೇಕು. ತಾಲೂಕಿನ ಜನರು ತೀರ್ಥ ಕ್ಷೇತ್ರಗಳಾದ ಶ್ರೀಶೈಲಕ್ಕೆ ಹೋಗುವುದಕ್ಕೆ ಮಾನ್ವಿ ಘಟಕದಿಂದ ನೇರವಾಗಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಸುತ್ತಮುತ್ತಲಿನ ಪುಣ್ಯ ಕ್ಷೇತ್ರಗಳಾದ ಉರುಕುಂದಿ ಈರಣ್ಣ, ಗುರುಗುಂಟ ಅಮರೇಶ್ವರ ದೇವಸ್ಥಾನ, ಮಂತ್ರಾಲಯ, ವಳಬಳ್ಳಾರಿ ಸೇರಿದಂತೆ ಇತರೆ ದೇವಸ್ಥಾನಗಳಿಗೂ ಕೂಡ ನೇರವಾಗಿ ಮಾನ್ವಿಯಿಂದ ಬಸ್ ವ್ಯವಸ್ಥೆ ಮಾಡಿದಲ್ಲಿ ಜನರಿಗೆ ಅನುಕೂಲವಾಗುತ್ತದೆ ಹಾಗೂ ಘಟಕಕ್ಕೆ ಕೂಡ ಹೆಚ್ಚಿನ ಅದಾಯ ಬರುತ್ತದೆ ಎಂದು ಒತ್ತಾಯಿಸಿದರು.ಸಂಘದ ತಾಲೂಕಾಧ್ಯಕ್ಷ ಹರಿಹಾರ ಪಾಟೀಲ್,ಕಾರ್ಯಧ್ಯಕ್ಷ ಶ್ರೀಧರಸ್ವಾಮಿ, ಪುರಸಭೆ ಸದಸ್ಯ ರೇವಣ ಸಿದ್ದಯ್ಯಸ್ವಾಮಿ, ಮುಖಂಡ ವೀರಣಗೌಡ ಸಂಗಪೂರ, ಶಿವಶಂಕ್ರಯ್ಯ ದೊಡ್ಡ ಬಸಪ್ಪ ಸೇರಿದಂತೆ ಇನ್ನಿತರರು ಇದ್ದರು.