ಕನ್ನಡಪ್ರಭ ವಾರ್ತೆ ಬೆಂಗಳೂರು
ಬಹುನಿರೀಕ್ಷಿತ ಡಾ.ಕೆ.ಶಿವರಾಮ ಕಾರಂತ ಬಡಾವಣೆ ವಸತಿ ನಿವೇಶನಗಳಿಗೆ ಆಗಸ್ಟ್ 5ರಂದು ಆನ್‌ಲೈನ್ ಅರ್ಜಿ ಆಹ್ವಾನಿಸುವ ಅಧಿಸೂಚನೆ ಹೊರಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ. ಹಾಗೆಯೇ ಅಂದೇ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರದ ನಿವೇಶನಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಂಕೇತಿಕವಾಗಿ ಹಂಚಿಕೆ ಮಾಡಲು ಯೋಜಿಸಲಾಗಿದೆ.ನಿವೇಶನಗಳ ಹಂಚಿಕೆಗೆ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬಿಡಿಎ ಆ.5ರಂದು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಿದೆ. ಪ್ರಸ್ತುತ ಸುಮಾರು 16 ಸಾವಿರಕ್ಕೂ ಹೆಚ್ಚು ಅರ್ಜಿಗಳು ಪ್ರಾಧಿಕಾರದ ಬಳಿಯಲ್ಲಿದ್ದು, ವಿವಿಧ ಬಡಾವಣೆಗಳಲ್ಲಿ ನಿವೇಶನ ಅಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬಹುದು. ನಿವೇಶನ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿರುವವರಿಗೆ ಈ ಹಿಂದೆ ಸಲ್ಲಿಸಿದ್ದ ಅರ್ಜಿಗಳ ಆಧಾರದಲ್ಲಿ ಹಿರಿತನದಡಿಯಲ್ಲಿ ನಿವೇಶನಗಳ ಹಂಚಿಕೆ ನಡೆಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.
ಕೈಗೆಟುಕದ ನಿವೇಶನ:ಬಿಡಿಎ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ವಸತಿ ನಿವೇಶನಗಳ (ಸೈಟ್‌ಗಳ) ಬೆಲೆಯನ್ನು ಪ್ರತಿ ಚದರ ಅಡಿಗೆ 6 ಸಾವಿರ ರು.ಗಳಿಗೆ ಹೆಚ್ಚಿಸಿದೆ. ಇದು ಸುಮಾರು ಮೂರು ವರ್ಷಗಳ ಹಿಂದೆ ಪ್ರಸ್ತಾಪಿಸಲಾಗಿದ್ದ ದರಕ್ಕಿಂತ ಪ್ರತಿ ಚದರ ಅಡಿಗೆ 1 ಸಾವಿರ ರು. ಹೆಚ್ಚಳವಾಗಿದೆ. ಸಾಮಾನ್ಯ ಮಧ್ಯಮ ವರ್ಗದ ಜನರಿಗೆ ಸೈಟ್ ತಲುಪಿಸುವ ಉದ್ದೇಶದಿಂದ ಸ್ಥಾಪನೆಯಾದ ಬಿಡಿಎಯ ಈ ನಿರ್ಧಾರದಿಂದಾಗಿ, ಇದೀಗ ಜಮೀನಿನ ಬೆಲೆಗಳು ಮಧ್ಯಮ ವರ್ಗದವರ ಕೈಗೆಟುಕದಂತಾಗಿದೆ. ದರ ಹೆಚ್ಚಳ ಸೂರಿಲ್ಲದವರಿಗೆ ಸೂರು ಒದಗಿಸಬೇಕೆಂಬ ಬಿಡಿಎಯ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂಬ ಆರೋಪ ಕೇಳಿಬಂದಿವೆ.
₹72 ಲಕ್ಷಕ್ಕೆ ಏರಿಕೆ:
2023ರಲ್ಲಿ ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಮಾರಾಟಕ್ಕೆ ಯೋಜಿಸಿದ್ದ ಬಿಡಿಎ ಪ್ರತಿ ಚದರ ಅಡಿಗೆ 4,900 ರು. ನಿಗದಿಪಡಿಸಿತ್ತು. ಅಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು, ಪ್ರತಿ ಚದರ ಅಡಿಗೆ 4,900 ರು. ನಿಗದಿಪಡಿಸಿ ಘೋಷಿಸಿದ್ದರು. ಈಗ ಹಳೆ ದರಕ್ಕಿಂತ 1100 ರು.ಗಳನ್ನು ಹೆಚ್ಚಿಸಿ ಪ್ರತಿ ಚದರ ಅಡಿಗೆ 6 ಸಾವಿರ ರು.ನಿಗದಿ ಮಾಡಲಾಗಿದೆ. ಇದರಿಂದಾಗಿ ಈ ಹಿಂದೆ 30x40 (1,200 ಚದರ ಅಡಿ) ಸೈಟ್ ಸುಮಾರು 59 ಲಕ್ಷ ರು.ಇದ್ದ ನಿವೇಶನದ ಬೆಲೆ ಈಗ ಪರಿಷ್ಕೃತ ದರದ ಪ್ರಕಾರ ಸುಮಾರು 72 ಲಕ್ಷ ರು.ತಲುಪಿದೆ.
ಈ ಬಡಾವಣೆಯಲ್ಲಿ 20x30 ನಿವೇಶನಗಳನ್ನು ಬಡಾವಣೆಗೆ ಭೂಮಿಕೊಟ್ಟ ಭೂಮಾಲೀಕರ ರೈತರಿಗೆ ಕೊಡಲು ಮೀಸಲು ಇಡಲಾಗಿದ್ದು ಒಟ್ಟು 18 ಸಾವಿರ ನಿವೇಶನಗಳು ರೈತರಿಗೆ ಹಂಚಿಕೆಯಾಗಲಿವೆ. ಕಂದಾಯ ನಿವೇಶನದಾರರಿಗೆ 3200 ಹಾಗೂ ಸಾರ್ವಜನಿಕರಿಗೆ 2500 ನಿವೇಶನಗಳನ್ನು ಹಂಚಲು ನಿರ್ಧರಿಸಲಾಗಿದೆ. ಉಳಿದಂತೆ 80 ಅಡಿ ಮತ್ತು 100 ಅಡಿ ರಸ್ತೆಯಲ್ಲಿರುವ 140 ನಿವೇಶನಗಳನ್ನು ಹರಾಜು ಮಾಡಲಾಗುವುದು. ಈ ಬಡಾವಣೆಯಲ್ಲಿ 40x60 ಮತ್ತು 50x80 ಅಳತೆಯ ಸೈಟ್‌ಗಳಿಗಿಂತ 30x40 ಅಳತೆಯ ಸೈಟ್‌ಗಳೇ ಹೆಚ್ಚಾಗಿವೆ.ಕಳೆದ ಮೂರು ವರ್ಷಗಳಿಂದ ಬಡಾವಣೆ ಸಿದ್ಧವಾಗಿದ್ದರೂ ರೈತರು ಮತ್ತು ಸಾರ್ವಜನಿಕರಿಗೆ ಹಂಚಿಕೆ ಮಾಡುವುದು ವಿಳಂಬವಾಗಿತ್ತು. ಈ ವಿಳಂಬದಿಂದ ಭಾರಿ ಆರ್ಥಿಕ ಹೊರೆಯಾಗಿದೆ. ಅದನ್ನು ಸರಿದೂಗಿಸಲು ಪ್ರತಿ ಚದರ ಅಡಿಗೆ ಈ ಹಿಂದೆ ನಿಗದಿಯಾಗಿದ್ದ ಮೊತ್ತಕ್ಕಿಂತ 1 ಸಾವಿರ ರು.ಹೆಚ್ಚಳ ಮಾಡಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಉತ್ತರ ಬೆಂಗಳೂರಿನ 3,069 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಬಡಾವಣೆ, ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ ನಂತರ ಬಿಡಿಎಯ ಅತಿದೊಡ್ಡ ವಸತಿ ಬಡಾವಣೆಯಾಗಿದೆ. ಈ ಬಡಾವಣೆಯಲ್ಲಿ ಒಟ್ಟು ಸುಮಾರು 34 ಸಾವಿರ ನಿವೇಶನಗಳನ್ನು ನಿರ್ಮಿಸಲಾಗಿದೆ. ಹಾರೋಹಳ್ಳಿ, ಅವಲಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್ ಸೇರಿದಂತೆ ಒಟ್ಟು 17 ಗ್ರಾಮಗಳ ವ್ಯಾಪ್ತಿಯಲ್ಲಿ ಈ ಬಡಾವಣೆ ವ್ಯಾಪಿಸಿದೆ.ಫೆಬ್ರವರಿಯಲ್ಲಿ 2ನೇ
ಹಂತದಲ್ಲಿ ಹಂಚಿಕೆಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ಅರ್ಜಿಗಳನ್ನು ಪರಿಷ್ಕರಿಸಿ ಹಿರಿತನದ ಆಧಾರದಲ್ಲಿ ಆಯ್ಕೆ ಮಾಡಲಾಗುವುದು. ಮೂರರಿಂದ ಐದು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಲಿದೆ. ಅಷ್ಟರಲ್ಲಿ ಬಡಾವಣೆಗೆ ಸಂಬಂಧಿಸಿದಂತೆ ವಿವಾದ ಇತ್ಯರ್ಥವಾದರೆ ಮತ್ತೊಂದು ಸುತ್ತಿನ (2ನೇ ಹಂತ) ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನ ಮಾಡುವುದಾಗಿ ಬಿಡಿಎ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.
