ಸಾರಾಂಶ
ಬೆಂಗಳೂರು : ಪ್ರತಿ ಮಳೆಯಲ್ಲೂ ಬೀಳುವ ಮರಗಳನ್ನು ತೆರವು ಮಾಡಲು ಬಿಬಿಎಂಪಿಗೆ ಕನಿಷ್ಠ ಎರಡ್ಮೂರು ದಿನವಾದರೂ ಬೇಕಾಗಲಿದೆ. ಅದೇ ಒಂದೇ ಪ್ರದೇಶದಲ್ಲಿ ಹಲವು ಮರಗಳು ಬಿದ್ದಾಗ ಅದನ್ನು ತೆರವು ಮಾಡುವುದಕ್ಕೆ ಬಿಬಿಎಂಪಿ ಹರಸಾಹಸ ಪಡಬೇಕಿದೆ. ಈ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಬೃಹತ್ ಮರಗಳು ಬಿದ್ದಾಗ ಅದನ್ನು ತೆರವು ಮಾಡಲು ಗುತ್ತಿಗೆದಾರರಿಗೆ ವಹಿಸಲು ಮುಂದಾಗಿದ್ದು, ಆ ಸಂಬಂಧ ಬಿಬಿಎಂಪಿ ಅರಣ್ಯ ವಿಭಾಗವು ಮುಖ್ಯ ಆಯುಕ್ತರಿಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದೆ.
ನಗರದಲ್ಲಿ ವರ್ಷದಿಂದ ವರ್ಷಕ್ಕೆ ಬೀಳುವ ಮರಗಳ ಸಂಖ್ಯೆ ಹೆಚ್ಚುತ್ತಿದೆ. ಅಂದಾಜಿನ ಪ್ರಕಾರ ಪ್ರತಿ ಮಳೆಗಾಲದಲ್ಲೂ 1 ಸಾವಿರಕ್ಕೂ ಹೆಚ್ಚಿನ ಮರಗಳು ಹಾಗೂ 5 ಸಾವಿರಕ್ಕೂ ಹೆಚ್ಚಿನ ಮರದ ರೆಂಬೆಗಳು ಬೀಳುತ್ತವೆ. ಅವುಗಳನ್ನು ತೆರವು ಮಾಡಲು ಬಿಬಿಎಂಪಿ ಪ್ರತ್ಯೇಕ ತಂಡವನ್ನು ನೇಮಿಸುತ್ತದೆಯಾದರೂ, ಒಮ್ಮೆಲೇ ನೂರಾರು ರೆಂಬೆ, ಮರಗಳು ಬಿದ್ದಾಗ ಅವುಗಳ ತೆರವಿಗೆ ಹಲವು ದಿನಗಳು ಬೇಕಾಗಲಿದೆ. ಅದರಿಂದ ಸಂಚಾರ ವ್ಯವಸ್ಥೆ, ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಹೀಗಾಗಿ ಬೃಹತ್ ಮರಗಳು ಬಿದ್ದಾಗ ಅದನ್ನು ತೆರವು ಮಾಡಲು ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 10 ದಿನಗಳಲ್ಲೇ 325 ಮರಗಳು ಧರೆಗೆ
ಬಿಬಿಎಂಪಿ ಲೆಕ್ಕದ ಪ್ರಕಾರ ಕಳೆದ 10 ದಿನಗಳಲ್ಲೇ ನಗರದಲ್ಲಿ 325 ಮರಗಳು ಧರೆಗುರುಳಿವೆ. ಅದರಲ್ಲಿ ಈಗಾಗಲೇ 320 ಮರಗಳನ್ನು ತೆರವುಗೊಳಿಸಲಾಗಿದೆ. ಆದರೆ, ಆ ಮರಗಳಲ್ಲಿ ಒಂದೊಂದು ಮರವನ್ನೂ ತೆರವುಗೊಳಿಸಲು ಕನಿಷ್ಠ ಮೂರ್ನಾಲ್ಕು ದಿನಗಳು ಹಿಡಿದಿವೆ. ಅದೇ ರೀತಿ 698 ರೆಂಬೆಗಳು ಬಿದ್ದಿದ್ದು, ಅದರಲ್ಲಿ 650 ರೆಂಬೆಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಹೀಗೆ ಬೃಹತ್ ಮರಗಳು ಬಿದ್ದಾಗ ಅದನ್ನು ಒಂದೇ ದಿನದಲ್ಲಿ ತೆರವುಗೊಳಿಸುವಂತೆ ಮಾಡಲು ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಲಾಗುತ್ತದೆ.