ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದಿದ್ರೆ ಸೂಕ್ತ ಕ್ರಮ: ಶಾಸಕ ವಿಶ್ವಾಸ ವೈದ್ಯ

| Published : Feb 08 2025, 12:34 AM IST

ಸಾರಾಂಶ

ಅಭಿವೃದ್ಧಿ ಕೆಲಸಗಳಿಗೆ ನಿರ್ಲಕ್ಷ್ಯವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ

ಕನ್ನಡಪ್ರಭ ವಾರ್ತೆ ಸವದತ್ತಿ

ಸಾರ್ವಜನಿಕರ ಸಮಸ್ಯೆಗೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸದಿರುವ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ವರ್ಷಗಳೇ ಕಳೆದರು ಕಾಮಗಾರಿ ಆರಂಭಿಸಿಲ್ಲದಿರುವುದಕ್ಕೆ ಸೂಕ್ತ ಕಾರಣ ನೀಡಬೇಕು. ಅಭಿವೃದ್ಧಿ ಕೆಲಸಗಳಿಗೆ ನಿರ್ಲಕ್ಷ್ಯವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಕನಿಷ್ಠ ೫ ದಿನಕ್ಕೊಮ್ಮೆ ನೀರು ಪೂರೈಸಬೇಕು. ಈ ಸ್ವತ್ತು ದಾಖಲಾತಿ ಪೂರೈಸುವಲ್ಲಿ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.

ಪುರಸಭೆ ಸದಸ್ಯ ಶಿವಾನಂದ ಹೂಗಾರ ಮಾತನಾಡಿ, ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಮುಖ್ಯ ರಸ್ತೆ ಹೊರತುಪಡಿಸಿ ಕೆಲವೆಡೆ ಮಧ್ಯಾಹ್ನದ ಸಮಯ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ಬೇರೆಡೆ ವರ್ಗಾಯಿಸಿ ಎಂದು ಒತ್ತಾಯಿಸಿದರು. ಶಾಂತಿನಗರದಲ್ಲಿ ಸ್ಮಶಾನಕ್ಕೆ ಹೋಗಲು ರಸ್ತೆ ನಿರ್ಮಿಸುವಂತೆ ಹಾಗೂ ಉತಾರ ನೀಡಲು ವಿನಾಕಾರಣ ಸಾರ್ವಜನಿಕರನ್ನು ಪುರಸಭೆಗೆ ಅಲೆದಾಡಿಸುತ್ತಾರೆ ಎಂದು ಸದಸ್ಯ ಮೌಲಾಸಾಬ ತಬ್ಬಲಜಿ ದೂರಿದರು.

ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ ಮಾತನಾಡಿ, ಪುರಸಭೆಯ ಎಲ್ಲ ಸದಸ್ಯರು ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಆಯಾ ವಾರ್ಡಗಳ ಸಮಸ್ಯೆಗಳ ಮತ್ತು ಪರಿಹಾರದ ಕುರಿತು ಚರ್ಚಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಲು ವಿನಂತಿಸಿದರು. ಎಸ್‌ಎಲ್ಎಒ ಕ್ರಾಸ್‌ನಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗವಾಗಿ ಕಟಕೋಳ ಬ್ಯಾಂಕ್‌ವರೆಗೆ ಅತಿಕ್ರಮ ತೆರವುಗೊಳಿಸಿ ರಸ್ತೆ ಅಗಲೀಕರಣಕ್ಕಾಗಿ ಸರ್ವೆ ಮಾಡಿಸಲು ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಸೂಚಿಸಲಾಯಿತು.

ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಉಪಾಧ್ಯಕ್ಷೆ ದಾವಲಬಿ ಸನದಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ಮನವಳ್ಳಿ, ಸದಸ್ಯರಾದ ರಾಜಶೇಖರ ಕಾರದಗಿ, ಬಾಪೂ ಚೂರಿಖಾನ, ಮಲ್ಲಿಕಾರ್ಜುನ ಪುರದಗುಡಿ, ವಿರೇಶ ಪ್ರಭುನವರ, ಶಿವಗಂಗಾ ಪಟ್ಟಣಶೆಟ್ಟಿ, ನಿಂಗಪ್ಪ ಬೆಟಸೂರ, ಅರ್ಜುನ ಅಮ್ಮೋಜಿ ಇತರರು ಇದ್ದರು.