ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಎಂಎಸ್‍ಎಂಇ ಚಾಂಪಿಯನ್ಸ್ ಸ್ಕೀಮ್ ಅಡಿಯಲ್ಲಿ, ನವೀನ ಯೋಜನೆ ಹಾಗೂ ಎಲ್ಲಾ ಸೌಲಭ್ಯ ಒಳಗೊಂಡ ಇನ್‍ಕ್ಯೂಬೇಷನ್ ಸೆಂಟರ್ ಸ್ಥಾಪಿಸಲು ಶರಣಬಸವ ವಿಶ್ವವಿದ್ಯಾಲಯವು ತನ್ನ ಮೊದಲನೇ ಪ್ರಯತ್ನದಲ್ಲಿ ಕೇಂದ್ರ ಸರ್ಕಾರದ ಅನುಮೋದನೆ ಪಡೆದಿದೆ.ಕೇಂದ್ರ ಸರ್ಕಾರದೊಂದಿಗೆ ವಿವಿದಲ್ಲಿ ಇನ್‍ಕ್ಯೂಬೇಷನ್ ಸೆಂಟರ್ ಪ್ರಸ್ತಾವನೆಗೆ ಚಾಲನೆ ನೀಡಿದ ಶರಣಬಸವ ವಿವಿ ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಈ ಕುರಿತಂತೆ ಹಳಿಕೆ ನೀಡಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಪ್ರಾಜೆಕ್ಟ್ ಮಾನಿಟರಿಂಗ್ ಮತ್ತು ಸಲಹಾ ಸಮಿತಿ (ಪಿಎಂಎಸಿ) ಹೆಚ್ಚುವರಿ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಡಾ.ರಜನೀಶ್ ಅಧ್ಯಕ್ಷತೆಯಲ್ಲಿ ಹೈಬ್ರಿಡ್ ಮೋಡ್‍ನಲ್ಲಿ ಜ.1ರಂದು ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಕೇಂದ್ರಗಳು ಸಲ್ಲಿಸಿದ ಪ್ರಸ್ತಾವನೆ ಪರಿಶೀಲಿಸಿ ಅನುಮೋದನೆ ನೀಡಿದ್ದಾರೆಂದು ಹೇಳಿದ್ದಾರೆ.
ಈ ಉನ್ನತ ಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದ ಹಲವಾರು ಉನ್ನತ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ ಸುಮಾರು 81 ಪ್ರಸ್ತಾವನೆಗಳನ್ನು ಎಂಎಸ್‍ಎಂಇ ವತಿಯಿಂದ ಧನಸಹಾಯಕ್ಕಾಗಿ ಅನುಮೋದಿಸಲಾಗಿದೆ.ವಿಶ್ವವಿದ್ಯಾಲಯವು ಉದ್ಧೇಶಿತ ಇನ್‍ಕ್ಯೂಬೇಷನ್ ಸೆಂಟರ್ ಸ್ಥಾಪನೆಗೆ ಕೇಂದ್ರದ ಅಡಿಯಲ್ಲಿ ಯೋಜನೆಗಳ ಪಟ್ಟಿ ಸಿದ್ಧಪಡಿಸುತ್ತಿದೆ ಹಾಗೂ ಇನ್‍ಕ್ಯುಬೇಶನ್ ಸೆಂಟರ್ ಸ್ಥಾಪನೆಗೆ ಮತ್ತು ಅಗತ್ಯವಿರುವ ಉನ್ನತ ಸಾಧನ ಸ್ಥಾಪಿಸಲು ಹಣವನ್ನು ಮಂಜೂರು ಮಾಡಲು ಪಿಎಂಎಸಿಗೆ ಮನವಿ ಸಲ್ಲಿಸಲಾಗುವುದು ಎಂದು ಡಾ. ಮಾಕಾ ಹೇಳಿದ್ದಾರೆ.
ಲಭ್ಯವಿರುವ ಮಾಹಿತಿ ಪ್ರಕಾರ ಎಂಎಸ್‍ಎಂಇ ಇನ್‍ಕ್ಯೂಬೇಷನ್ ಸೆಂಟರ್ ಅಭಿವೃದ್ಧಿಪಡಿಸಲು ಮತ್ತು ಪೋಷಿಸಲು ಪ್ರತಿ ಯೋಜನೆಗೆ 15ಲಕ್ಷ ರುಪಾಯಿಗಳ ಧನ ಸಹಾಯವನ್ನು ನೀಡುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ ಹಾರ್ಡ್‍ವೇರ್ ಮತ್ತು ಸಾಫ್ಟ್‌ವೇರ್ ಸೇರಿ ಸಂಬಂಧಿತ ಯಂತ್ರೋಪಕರಣಗಳ ಸಂಗ್ರಹಣೆ ಮತ್ತು ಸ್ಥಾಪನೆಗಾಗಿ ಹಾಗೂ ಇನ್‍ಕ್ಯುಬೇಶನ್ ಕೇಂದ್ರದ ಇನ್‍ಕ್ಯುಬೇಟ್‍ಗಳಿಗೆ ಸಾಮಾನ್ಯ ಸೌಲಭ್ಯ ಸೃಷ್ಟಿಸಲು, ಇನ್ನೂ ಒಂದು ಕೋಟಿ ರು.ವರೆಗೆ ಧನ ಸಹಾಯ ನೀಡಲಾಗುತ್ತದೆ.ಕ್ಲೌಡ್ ಕಂಪ್ಯೂಟಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಸಸ್ಟೆನೇಬಲ್ ಟೆಕ್ನಾಲಜಿ, ಕಡಿಮೆ ವೆಚ್ಚದ ಸ್ಥಳೀಯ ಡಿಜಿಟಲ್ ಆರೋಗ್ಯ ರಕ್ಷಣಾ ವ್ಯವಸ್ಥೆ, ಡಿಜಿಟಲ್ ಕೃಷಿ, ಮೊಯಿಶ್ಚರ್ ರೆಸಿಸ್ಟಂಟ್ ಬೈಯೊಡಿಗ್ರೆಬಲ್ ಕಾಂಪ್ರೆಸ್ಡ್ ಪಾರ್ಟಿಕಲ್ ಬೆಸ್ಡ್ ಫರ್ನಿಚರ್ ಜೈವಿಕ ತೇವಾಂಶ ನಿರೋಧಕ ಸೇರಿ ಅಗತ್ಯವಿರುವ ಎಲ್ಲಾ ತಾಂತ್ರಿಕ ಇನ್‍ಪುಟ್‍ಗಳೊಂದಿಗೆ ಪಿಎಂಎಸಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
ಎಂಎಸ್‍ಎಂಇಯಿಂದ ಮಂಜೂರಾದ ಹೈ ಆರ್ಡರ್‌ನ ಇನ್‍ಕ್ಯುಬೇಷನ್ ಸೆಂಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಾಣಿಜ್ಯೋದ್ಯಮ ಕೌಶಲ್ಯ ಗುರುತಿಸುವಲ್ಲಿ, ಯುವ ಉದ್ಯಮಿಗಳು ತಮ್ಮ ಆಲೋಚನೆಗಳನ್ನು ವಾಸ್ತವಕ್ಕನುಗುಣವಾಗಿ ಪರಿವರ್ತಿಸಲು ಮತ್ತು ತಮ್ಮದೇ ಆದ ಸ್ಟಾರ್ಟ್‍ಅಪ್‍ಗಳನ್ನು ಸ್ಥಾಪಿಸಲು ಬಯಸುವವರಿಗೆ ಇದು ವರದಾನ ಎಂದು ಡಾ. ಲಕ್ಷ್ಮೀ ಮಾಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.