ಚೋರುನೂರ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಅನುಮೋದನೆ

| Published : Feb 18 2024, 01:31 AM IST / Updated: Feb 18 2024, 01:32 AM IST

ಚೋರುನೂರ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಅನುಮೋದನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೋಬಳಿ ಕೇಂದ್ರವಾಗಿರುವ ಚೋರುನೂರಿನಲ್ಲಿ ₹ ೧ ಕೋಟಿ ವೆಚ್ಚದಲ್ಲಿ ಸರ್ಕಿಟ್ ಹೌಸ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ₹ ೮ ಕೋಟಿ ವೆಚ್ಚದಲ್ಲಿ ಚೋರುನೂರು-ಜಿಗೇನಹಳ್ಳಿ-ತ್ಯಾಗದಾಳು ರಸ್ತೆ ನಿರ್ಮಿಸಲಾಗುವುದು. ₹೨ ಕೋಟಿ ವೆಚ್ಚದಲ್ಲಿ ಶಾಲೆ ಅಭಿವೃದ್ಧಿ ಪಡಿಸಲಾಗುವುದು. ಕೆರೆ ಒತ್ತುವರಿಯಿಂದ ಅತಂತ್ರವಾಗಿರುವ ೨೫ ಕುಟುಂಬಗಳಿಗೆ ಡಿಎಂಎಫ್ ಅನುದಾನದಲ್ಲಿ ಬೇರೆಡೆ ಮನೆ ನಿರ್ಮಿಸಿಕೊಡಲಾಗುವುದು

ಸಂಡೂರು: ಹೋಬಳಿ ಕೇಂದ್ರವಾಗಿರುವ ಚೋರುನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ೩೦ ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ದೊರೆತಿದ್ದು. ಚೋರುನೂರನ್ನು ಎರಡನೇ ಸಂಡೂರನ್ನಾಗಿ ಮಾಡುವುದು ನನ್ನ ಗುರಿಯಾಗಿದೆ ಎಂದು ಶಾಸಕ ಈ. ತುಕಾರಾಮ್ ಹೇಳಿದರು.

ತಾಲೂಕಿನ ಚೋರುನೂರು ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ, ತಾಲೂಕಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನ ಹಾಗೂ ಪಂಚ ಗ್ಯಾರಂಟಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಹೋಬಳಿ ಕೇಂದ್ರವಾಗಿರುವ ಚೋರುನೂರಿನಲ್ಲಿ ₹ ೧ ಕೋಟಿ ವೆಚ್ಚದಲ್ಲಿ ಸರ್ಕಿಟ್ ಹೌಸ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ₹ ೮ ಕೋಟಿ ವೆಚ್ಚದಲ್ಲಿ ಚೋರುನೂರು-ಜಿಗೇನಹಳ್ಳಿ-ತ್ಯಾಗದಾಳು ರಸ್ತೆ ನಿರ್ಮಿಸಲಾಗುವುದು. ₹೨ ಕೋಟಿ ವೆಚ್ಚದಲ್ಲಿ ಶಾಲೆ ಅಭಿವೃದ್ಧಿ ಪಡಿಸಲಾಗುವುದು. ಕೆರೆ ಒತ್ತುವರಿಯಿಂದ ಅತಂತ್ರವಾಗಿರುವ ೨೫ ಕುಟುಂಬಗಳಿಗೆ ಡಿಎಂಎಫ್ ಅನುದಾನದಲ್ಲಿ ಬೇರೆಡೆ ಮನೆ ನಿರ್ಮಿಸಿಕೊಡಲಾಗುವುದು ಎಂದರು.

ತಾಪಂ ಇಒ ಎಚ್.ಷಡಕ್ಷರಯ್ಯ ಪಂಚ ಗ್ಯಾರಂಟಿಗಳ ಅನುಷ್ಠಾನ ಕುರಿತು ಮಾತನಾಡಿ, ಗೃಹ ಲಕ್ಷ್ಮಿ ಯೋಜನೆ ಅಡಿ ನೋಂದಣಿಯಾದ ೪೫೮೨೫ ಜನರಿಗೆ ತಲಾ ₹೨೦೦೦ ದಂತೆ ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ಉಳಿದವರಲ್ಲಿ ಕೆಲವರು ಮೃತಪಟ್ಟಿದ್ದರೆ, ಕೆಲವರದ್ದು ಇ ಕೆವೈಸಿ ಸಮಸ್ಯೆ ಇದೆ. ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲಾಗವುದು. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ೯೭.೮೫ ರಷ್ಟು ಪ್ರಗತಿಯಾಗಿದ್ದು, ಈವರೆಗೆ ₹೧೦.೮೮ ಕೋಟಿ ವೆಚ್ಚವಾಗಿದೆ ಎಂದರು.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ೪೯೩೩೫ ಕುಟುಂಬಗಳಿಗೆ ಪ್ರತಿ ತಿಂಗಳು ೩.೮೬ ಕೋಟಿಯಂತೆ ಡಿಸೆಂಬರ್‌ವರೆಗೆ ₹೧೫.೬೫ ಕೋಟಿ ಹಣ ಪಡಿತರ ಚೀಟಿದಾರರ ಖಾತೆಗೆ ಜಮೆ ಮಾಡಲಾಗಿದೆ. ಯುವ ನಿಧಿ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ ೪೬೭ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಶಕ್ತಿ ಯೋಜನೆ ಅಡಿಯಲ್ಲಿ ೩೦.೨೦ ಲಕ್ಷ ಮಹಿಳೆಯರು ಸಂಚಾರ ಮಾಡಿದ್ದು, ಇದರಿಂದ ₹ ೧೧.೧೪ ಕೋಟಿ ಜನತೆಗೆ ಉಳಿತಾಯವಾಗಿದೆ ಎಂದರು.

ಮುಖಂಡ ವೆಂಕಟೇಶ್ ಮಾತನಾಡಿ, ಗ್ರಾಮದಲ್ಲಿ ಮೆಟ್ರಿಕ್ ನಂತರದ ಮಹಿಳಾ ಹಾಸ್ಟೆಲ್ ಆರಂಭಿಸಬೇಕು. ಚೋರುನೂರು ಗ್ರಾಮದ ಕೆರೆಯ ಏರಿ ಅಗಲೀಕರಣಗೊಳಿಸಬೇಕು. ಶಾಲಾ ಮಕ್ಕಳಿಗೆ ಆಟದ ಮೈದಾನ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ವಸಂತಶೆಟ್ಟಿಯವರು ಗ್ರಾಮದಲ್ಲಿ ಅಗ್ನಿ ಶಾಮಕ ವಾಹನ ಹಾಗೂ ಚೋರುನೂರು ಮಾರ್ಗವಾಗಿ ಬೆಂಗಳೂರಿಗೆ ಹೋಗಿ ಬರಲು ಬಸ್ ವ್ಯವಸ್ಥೆ ಕಲ್ಪಸುವಂತೆ ಹಾಗೂ ಅಗ್ರಹಾರದ ಮಲ್ಲಮ್ಮ ಆರಾಧ್ಯಮಠ ಅವರು ಮಹಿಳೆಯರಿಗ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ತಹಸೀಲ್ದಾರ್ ಜಿ.ಅನಿಲ್‌ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಒಟ್ಟು ೩೦ ಅರ್ಜಿಗಳು ಸಲ್ಲಿಕೆಯಾಗಿವೆ. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್, ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ ಜೋಗತಿ, ಉಪಾಧ್ಯಕ್ಷೆ ಗೀತಾ, ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್.ಅಕ್ಕಿ, ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಗೌಡ, ಹನುಮಂತಪ್ಪ, ಜಯರಾಂ, ಶಿವಣ್ಣ, ರಾಘವೇಂದ್ರ ಹಾಗೂ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.