ಸಾರಾಂಶ
ದೇವಸ್ಥಾನಗಳ ಮತ್ತು ಅರ್ಚಕರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ತಂದಿರುವ ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಸಹಿಹಾಕದೆ ವಾಪಾಸ್ ಕಳುಹಿಸಿರುವುದು ಸರಿಯಲ್ಲ. ಈಗ ಅದು ರಾಷ್ಟ್ರಪತಿಗಳ ಅನುಮೋದನೆಗೆ ಬಂದಿದೆ. ರಾಷ್ಟ್ರಪತಿಗಳು ಈ ವಿಧೇಯಕಕ್ಕೆ ಅನುಮೋದನೆ ಮಾಡಬೇಕು
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇವಸ್ಥಾನಗಳ ಮತ್ತು ಅರ್ಚಕರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ತಂದಿರುವ ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಸಹಿಹಾಕದೆ ವಾಪಾಸ್ ಕಳುಹಿಸಿರುವುದು ಸರಿಯಲ್ಲ. ಈಗ ಅದು ರಾಷ್ಟ್ರಪತಿಗಳ ಅನುಮೋದನೆಗೆ ಬಂದಿದೆ. ರಾಷ್ಟ್ರಪತಿಗಳು ಈ ವಿಧೇಯಕಕ್ಕೆ ಅನುಮೋದನೆ ಮಾಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟಿನ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದರು.ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ 2024ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕವನ್ನು ರಾಜ್ಯಪಾಲರ ಅನುಮತಿಗೆ ಕಳುಹಿಸಿತ್ತು. ರಾಜ್ಯಪಾಲರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿ, ಇದನ್ನು ವಾಪಾಸ್ ಕಳುಹಿಸಿತ್ತು. ರಾಜ್ಯ ಸರ್ಕಾರ ಎರಡೂ ಸದನಗಳಲ್ಲಿ ಅನುಮೋದನೆಗೊಂಡ ಈ ವಿಧೇಯಕವನ್ನು ಈಗ ರಾಷ್ಟ್ರಪತಿಗಳಿಗೆ ಅನುಮೋದನೆ ಮಾಡುವಂತೆ ವಿನಂತಿಸಿದೆ. ಆದ್ದರಿಂದ ರಾಷ್ಟ್ರಪತಿಗಳು ಈ ವಿಧೇಯಕಕ್ಕೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.
ಈ ತಿದ್ದುಪಡಿ ವಿಧೇಯಕದ ಪ್ರಕಾರ ಹೆಚ್ಚು ಆದಾಯವಿರುವ ‘ಎ’ವರ್ಗದ ದೇವಸ್ಥಾನಗಳಿಂದ ಸಂಗ್ರಹವಾಗುವ ನಿಧಿಯಲ್ಲಿ ಶೇ.10ರಷ್ಟು ಭಾಗವನ್ನು ಪ್ರತ್ಯೇಕಿಸಿ, ‘ಸಿ’ ವರ್ಗದ ದೇವಸ್ಥಾನಗಳಿಗೆ ಮತ್ತು ಅರ್ಚಕರ ಅಭಿವೃದ್ಧಿಗೆ ವಿನಿಯೋಗಿಸುವುದೇ ಆಗಿತ್ತು. ಹಾಗಾಗಿ ಇದೊಂದು ಒಳ್ಳೆಯ ನಿರ್ಧಾರವಾಗಿತ್ತು. ರಾಜ್ಯದ ಮುಜರಾಯಿ ಇಲಾಖೆಯಲ್ಲಿ ‘ಎ’ವರ್ಗದಲ್ಲಿ 205, ‘ಬಿ’ ವರ್ಗದಲ್ಲಿ 195, ‘ಸಿ’ವರ್ಗದಲ್ಲಿ 34,217 ದೇವಾಲಯಗಳಿವೆ. ಬೆಂಗಳೂರು ಒಂದರಲ್ಲಿಯೇ 1150 ‘ಸಿ’ ವರ್ಗದ ದೇವಸ್ಥಾನಗಳಿವೆ. ಇನ್ನುಳಿದಂತೆ ಬಹುತೇಕ ದೇವಾಲಯಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಈ ದೇವಸ್ಥಾನಗಳಿಗೆ ಯಾವ ಆದಾಯಗಳು ಇರುವುದಿಲ್ಲ. ಕಾಣಿಕೆಯೂ ಕೂಡ ಸಂಗ್ರಹವಾಗುವುದಿಲ್ಲ ಆದ್ದರಿಂದ ಅತೀ ಹೆಚ್ಚು ಸಂಗ್ರಹವಾಗುವ ‘ಎ’ವರ್ಗದ ದೇವಸ್ಥಾನದ ಆದಾಯದಲ್ಲಿ ಶೇ.೧೦ರಷ್ಟು ತೆಗೆದಿರಿಸಿ, ‘ಸಿ’ ವರ್ಗದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಬಳಸುವುದರಲ್ಲಿ ಅರ್ಥವಿದೆ. ಅಲ್ಲದೆ ರಾಜ್ಯ ಸರ್ಕಾರದ ತಿದ್ದುಪಡಿ ಕಾನೂನಿನಲ್ಲಿ ಅರ್ಚಕರಿಗೆ ನೀಡುವ ತಸ್ತಿಕ್ ಹಣವನ್ನು 6,000 ರು.ಗಳಿಂದ 10,000 ರು. ಸಾವಿರಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.ಪ್ರಮುಖರಾದ ವೆಂಕಟೇಶ್ ಹೊಳೆಮಡಿಲು, ಎಚ್.ಎಂ. ಸಂಗಯ್ಯ, ಜನಮೇಜಿರಾವ್, ಕೋಡ್ಲು ಶ್ರೀಧರ್, ನಾಗೇಶ್‌ರಾವ್, ಚಿರಾಗ್ ಇದ್ದರು.