ಸಾರಾಂಶ
ಮರಿಯಮ್ಮನಹಳ್ಳಿ: ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ 49ನೇ ಹುಟ್ಟುಹಬ್ಬದ ಪ್ರಯುಕ್ತ ಇಲ್ಲಿನ ಅಪ್ಪು ಅಭಿಮಾನಿಗಳ ಬಳಗದಿಂದ ರಕ್ತದಾನ ಶಿಬಿರವನ್ನು ಮರಿಯಮ್ಮನಹಳ್ಳಿಯ ಬಸ್ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು.ರಕ್ತದಾನ ಶಿಬಿರ ಆರಂಭಕ್ಕೂ ಮುನ್ನ ಡಾ.ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಅಪ್ಪುಗೆ ಜೈಕಾರ ಕೂಗಿದರು. ನಂತರ ಅಪ್ಪು ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಸಿದರು. ರಕ್ತದಾನ ಶಿಬಿರವು ಮಧ್ಯಾಹ್ನದವರೆಗೂ ನಡೆಯಿತು. ನೂರಾರು ಅಭಿಮಾನಿಗಳು ಶಿಬಿರದಲ್ಲಿ ರಕ್ತದಾನ ನೀಡಿದರು.ಸಂಜೆ ಡಾ.ಪುನೀತ್ ರಾಜಕುಮಾರ್ ಭಾವಚಿತ್ರದ ಮೆರವಣೆ ಮರಿಯಮ್ಮನಹಳ್ಳಿ ಪಪಂ ಕಚೇರಿ ಆವರಣದಿಂದ ಆರಂಭಗೊಂಡ ಪಟ್ಟಣದ ಮುಖ್ಯಬೀದಿಯಲ್ಲಿ ಡಾ. ಪುನೀತ್ ರಾಜಕುಮಾರ್ ಭಾವಚಿತ್ರದ ಮೆರವಣೆ ನಡೆಯಿತು. ಮೆರವಣಿಗೆಯ ದಾರಿಯ ಉದ್ದಕ್ಕೂ ಡಾ. ಪುನೀತ್ ರಾಜಕುಮಾರ್ ಹಾಡುಗಳು ಯುವಕರು ನೃತ್ಯ ಮಾಡಿ ಕುಣಿಯುತ್ತಿದ್ದರು.ಮರಿಯಮ್ಮನಹಳ್ಳಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಅಪ್ಪು ಅಭಿಮಾನಿಗಳು ಡಾ.ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಇದೇ ರೀತಿಯಲ್ಲಿ ಗಾಳೆಮ್ಮನಗುಡಿ, ಹನುಮನಹಳ್ಳಿ, ಡಣಾಪುರ, ವೆಂಕಟಾಪುರ, ವ್ಯಾಸನಕೆರೆ, ಅಯ್ಯನಹಳ್ಳಿ, ನಂದಿಬಂಡಿ, ದೇವಲಾಪುರ, ಡಣಾಯಕನಕೆರೆ, ಗೊಲ್ಲರಹಳ್ಳಿ, ಜಿ.ನಾಗಲಾಪುರ, ಬ್ಯಾಲಕುಂದಿ, ಗರಗ, ಹಾರವನಹಳ್ಳಿ, ಚಿಲಕನಹಟ್ಟಿ, ತಿಮ್ಮಾಪುರ, ತಾಳೆಬಸಪುರ, ಪೊತಲಕಟ್ಟೆ, ಗುಂಡಾ, ಮರಿಯಮ್ಮನಹಳ್ಳಿ ತಾಂಡ, ಗುಂಡಾ ತಾಂಡ, ಜಿ. ನಾಗಲಾಪುರ ತಾಂಡ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸಹ ಅಪ್ಪು ಅಭಿಮಾನಿಗಳು ಡಾ. ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಆಚರಿಸಿದರು.