ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಯತಿಕುಲ ತಿಲಕ, ಕಲಿಯುಗದ ಕಲ್ಪತರು ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಆಚರಿಸಲ್ಪಡುತ್ತಿರುವ ಸಪ್ತರಾತ್ರೋತ್ಸವದ ಎರಡನೇ ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳು ಸೋಮವಾರ ಜರುಗಿದವು.ಪ್ರಾತಃಕಾಲದಲ್ಲಿ ನಿರ್ಮಲ್ಯ ವಿಸರ್ಜನೆ, ಶ್ರೀ ಉತ್ಸವ ರಾಯರ ಪಾದಪೂಜೆ ಹಾಗೂ ಪಂಚಾಮೃತಾಭಿಷೇಕ ನಡೆಸಲಾಯಿತು. ಬೆಳಗ್ಗೆ ಋಗ್ವೇದ ನಿತ್ಯನೂತನ ಉಪಕರ್ಮ, ಯಜುರ್ವೇದ ನಿತ್ಯನೂತನ ಉಪಕರ್ಮಗಳು, ಬಳಿಕ ಮೈಸೂರಿನ ವಿದ್ವಾನ್ ಮಥರಿಶ್ವಾಚಾರ್ ಅವರಿಂದ ಪ್ರವಚನ ಕಾರ್ಯಕ್ರಮಗಳು ನಡೆಯಿತು. ಇದೇ ವೇಳೆ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಶ್ರೀ ಮೂಲ ರಘುಪತಿ ವೇದವ್ಯಾಸದೇವರಿಗೆ ಸಂಸ್ಥಾನ ಪೂಜೆ, ಅಲಂಕಾರ ಸಮರ್ಪಣ ಹಾಗೂ ಹಸ್ತೋದಯ, ಮಹಾಮಂಗಳಾರತಿ ನೆರವೇರಿಸಿದರು. ನಂತರ ಸುವರ್ಣ ಕವಚದಿಂದ ಅಲಂಕೃತಗೊಂಡ ಶ್ರೀ ಗುರು ಸಾರ್ವಭೌಮರ ಮೂಲಬೃಂದಾವನಕ್ಕೆ ಶ್ರೀಗಳು ಪೂಜೆ ಮಾಡಿ ನಮಿಸಿದರು. ಸಂಜೆ ಹಗಲು ದೀವಟಗೆ, ಮಲ್ಕಿ ಮಂಗಳಾರತಿ ಸೇವೆ, ಸ್ವಸ್ಥಿ ವಚನ ಮತ್ತು ಪ್ರಾಕಾರದ ಉತ್ಸವವನ್ನು ನಡೆಸಲಾಯಿತು. ಇನ್ನು ರಾತ್ರಿ ಶ್ರೀಮಠದ ಮುಂಭಾಗದ ಮೈದಾನದಲ್ಲಿರುವ ಯೋಗೀಂದ್ರ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರಿನ ನಾದಲಹರ ಸಂಗೀತ ವಾದ್ಯ ವೃಂದದಿಂದ ತಾಳ-ವಾದ್ಯ ಸಂಗೀತ, ಬೆಂಗಳೂರಿನ ವಿದ್ವಾನ್ ಪುತ್ತೂರು ನರಸಿಂಹ ನಾಯ್ಕ್ ಅವರಿಂದ ದಾಸವಾಣಿ ಹಾಗೂ ಪುತ್ತೂರಿನ ನೃತ್ಯೋಪಾಸನ ಕಲಾ ಅಕಾಡೆಮಿಯಿಂದ ಭರತನಾಟ್ಯ ಪ್ರದರ್ಶನವು ಗಮನ ಸೆಳೆಯಿತು. ನಂತರ ಶ್ರೀಗಳು ಶ್ರೀಮಠದ ಪ್ರಾಕರಾದಲ್ಲಿ ಶಾಖೋತ್ಸವ ಹಾಗೂ ರಜತ ಮಂಟಪೋತ್ಸವವನ್ನು ನೆರವೇರಿಸಿದರು.