ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದಾರೆ ಎನ್ನುವ ಆರೋಪದಡಿ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯುವುದರ ಜೊತೆಗೆ ಡಿಸಿ ನಿವಾಸದೆದುರು ಎದುರು ಬಿ.ಎಂ. ರಸ್ತೆಯಲ್ಲಿ ಟೈರಿಗೆ ಬೆಂಕಿ ಹಚ್ಚಿ ರಾಜ್ಯಪಾಲರ ಭಾವಚಿತ್ರ ಸುಟ್ಟು ಆಕ್ರೋಶ ಹೊರಹಾಕಿದರು. ನಗರದ ಹೇಮಾವತಿ ಪ್ರತಿಮೆ ಬಳಿ ಜಮಾಯಿಸಿದ ನೂರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರು ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಭಾಷಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಎನ್.ಆರ್. ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದರು. ಈ ಸಂದರ್ಭದಲ್ಲಿ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅರಸೀಕೆರೆ ಶಾಸಕರೂ ಆದ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ರಾಜ್ಯಪಾಲರು ರಾಜ ಭವನವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಂವಿಧಾನಾತ್ಮಕವಾಗಿ ನಡೆದುಕೊಳ್ಳುವ ಬದಲಾಗಿ ಬಿಜೆಪಿಯ ರಾಜಕೀಯ ಏಜೆಂಟಾಗಿ ವರ್ತಿಸುತ್ತಿದ್ದಾರೆ. ಅವರ ನಡವಳಿಕೆಯನ್ನು ಖಂಡಿಸುತ್ತೇವೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಅನೇಕ ಹಗರಣಗಳ ಬಗ್ಗೆ ದೂರು ನೀಡಿದರೂ ಯಾವುದೇ ತನಿಖೆ ಮಾಡದೆ ಸಿಎಂ ವಿರುದ್ಧ ಯಾರೋ ಮೂರನೇ ವ್ಯಕ್ತಿ ನೀಡಿದ ದೂರನ್ನು ಪರಿಗಣಿಸಿ ಅವರ ವಿರುದ್ಧ ಪ್ರಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ. ಈ ರಾಜ್ಯದಲ್ಲಿ ರಾಜಕೀಯ ಷಡ್ಯಂತ್ರ ನಡೆಯುತ್ತಿದ್ದು, ರಾಜ್ಯಪಾಲರು ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಅಪವಿತ್ರ ಮಾಡುತ್ತಿದ್ದೀರಿ: ಬಿಜೆಪಿ ಅವರ ಕೈಗೊಂಬೆಯಾಗಿ, ರಾಜ್ಯಪಾಲರ ಕಚೇರಿಯನ್ನೇ ಬಿಜೆಪಿ ಮುಖಂಡರ ಅಂಗಳವನ್ನಾಗಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಏಜೆಂಟ್‌ರ ರೀತಿ ವರ್ತಿಸುತ್ತಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ಅಪವಿತ್ರ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಇಡೀ ರಾಜ್ಯಾದ್ಯಂತ ಸೋಮವಾರದಂದು ಪ್ರತಿಭಟನೆ ಮಾಡಲು ಕೆಪಿಸಿಸಿ ಅಧ್ಯಕ್ಷರು ಆದೇಶ ನೀಡಿದ್ದಾರೆ. ಬಿಜೆಪಿ-ಜೆಡಿಎಸ್ ಒಕ್ಕೂಟ ಷಡ್ಯಂತ್ರದ ರಾಜಕಾರಣ ಮಾಡುತ್ತಿದ್ದು, ಬಿಜೆಪಿಯವರು ಯಾವತ್ತೂ ಜನತೆಯ ಬಹುಮತದಿಂದ ಆರಿಸಿಕೊಂಡು ಅಧಿಕಾರ ಮಾಡಿಲ್ಲ. ಪಾದಯಾತ್ರೆ ಮಾಡಿ ವೈಯುಕ್ತಿಕವಾಗಿ ಕಿತ್ತಾಡಿಕೊಂಡು ಮುಗಿಸಿದರು. ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಇಂತಹ ಅಪರಾಧ ಮಾಡಿದ್ದಾರೆ ಎಂದು ಹೇಳಲಿಲ್ಲ. ರಾಜ್ಯಪಾಲರು ಮೊದಲು ಶೋಕಾಸ್ ನೋಟಿಸ್ ಕೊಟ್ಟರು. ಎಲ್ಲರಿಂದಲೂ ಸಿದ್ದರಾಮಯ್ಯ ಅವರ ಮೇಲೆ ಕೇಸ್ ಹಾಕಿಸಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಾಗ್ದಾಳಿ ನಡೆಸಿದರು.ದೇಶದಲ್ಲೇ ಸಿದ್ದರಾಮಯ್ಯ ಅವರು ಜನಾನುರಾಗಿ ಮುಖ್ಯಮಂತ್ರಿ ಹಾಗೂ ಜನನಾಯಕ ಆಗಿದ್ದಾರೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ. ಸಿಎಂ ಅವರನ್ನೇ ಟಾರ್ಗೆಟ್ ಮಾಡಿರುವ ರಾಜ್ಯಪಾಲರ ನಡೆ ಅನುಮಾನ ಮೂಡಿಸಿದೆ. ನಾವೆಲ್ಲರೂ ಸಿಎಂ ಬೆನ್ನ ಹಿಂದೆ ಇದ್ದೇವೆ. ಅವರ ಪರವಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಯಾವ ಷಡ್ಯಂತ್ರಕ್ಕೂ ಸಿಎಂ ಹೆದರುವವರಲ್ಲ ಎಂದು ಸಿಡಿಮಿಡಿಗೊಂಡರು. ಕಾಂಗ್ರೆಸ್ ಮುಖಂಡರಾದ ದಿನೇಶ್ ಭೈರೇಗೌಡ ಮಾತನಾಡಿ, ಒಂದು ಪಿಲಿಮಿನರಿ ತನಿಖೆ ಮಾಡದೆ ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮಸಿ ಬಳೆಯಲು, ಕಪ್ಪು ಚುಕ್ಕೆ ಇಡಲು ಈ ರೀತಿ ಮಾಡುತ್ತಿದ್ದು, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಆಂದೋಲನ ಆರಂಭವಾಗುತ್ತದೆ ಎಂದು ಎಚ್ಚರಿಸಿದರು. ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಅತಂತ್ರಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ಆಸೆ ಈ ಬಾರಿ ಈಡೇರುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಧ್ಯಮ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ದೇವರಾಜೇಗೌಡ, ಮುಖಂಡರಾದ ಎಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ಬಿ.ಪಿ. ಮಂಜೇಗೌಡ, ದಿನೇಶ್ ಭೈರೇಗೌಡ, ಪಟೇಲ್ ಶಿವಪ್ಪ, ಮಲ್ಲಿಗೆವಾಳು ದೇವಪ್ಪ, ಅಶೋಕ್ ನಾಯಕರಹಳ್ಳಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಗೊರೂರು ರಂಜಿತ್, ತಾರಾ ಚಂದನ್, ದಿವಾಕರ್, ಗಾಯಿತ್ರಿ ಇತರರು ಉಪಸ್ಥಿತರಿದ್ದರು.*ಬಾಕ್ಸ್‌ನ್ಯೂಸ್1 : ಕಾರ್ಯಕರ್ತರ ಅತಿರೇಕದ ವರ್ತನೆ
ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಂದಾಗ ಪೊಲೀಸರು ಬ್ಯಾರಿಕೇಡ್ ಒಳಗೆ ಕಳಹಿಸಲು ನೂಕಾಡಿದರು. ಯಾವುದಕ್ಕೂ ಬಗ್ಗದ ಕಾರ್ಯಕರ್ತರು ಬ್ಯಾರಿಕೇಡಿಗೆ ಕೋಲಿನಿಂದ ಹೊಡೆದು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ಗಂಟೆಗಟ್ಟಲೆ ರಸ್ತೆ ಮೇಲೆ ಪ್ರತಿಭಟನೆ ನಡೆಸಿದ್ದರಿಂದ ವಾಹನ ಚಾಲಕರು ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಸಂಚರಿಸಲು ಹರಸಾಹಸಪಟ್ಟರು. ಇನ್ನು ಆ್ಯಂಬುಲೆನ್ಸ್ ವಾಹನ ಟ್ರಾಫಿಕ್ ಜಾಮ್ ಮಧ್ಯೆ ಸಿಲುಕಿ ಪರದಾಡಿತು. ಕೆಲ ಕಾಂಗ್ರೆಸ್ ಕಾರ್ಯಕರ್ತರು ಅರೆಬರೆ ಬಟ್ಟೆ ಧರಿಸಿದಲ್ಲದೇ ತಮ್ಮ ಚಪ್ಪಲಿಯಿಂದ ರಾಜ್ಯಪಾಲರ ಭಾವಚಿತ್ರಕ್ಕೆ ಹೊಡೆದು ಹರಿದು ಹಾಕಿದರು. ಇಷ್ಟಕ್ಕೆ ಸುಮ್ಮನಾಗದ ಕಾರ್ಯಕರ್ತರು ಬಿ.ಎಂ. ರಸ್ತೆ, ಡಿಸಿ ಕಚೇರಿ ಮನೆ ಗೇಟ್ ಮುಂದೆ ಟೈರಿಗೆ ಬೆಂಕಿ ಹಾಕಿದಲ್ಲದೇ ರಾಜ್ಯಪಾಲರ ಭಾವಚಿತ್ರ ಸುಟ್ಟು ಹಾಕಿದರು. ಇದನ್ನು ನಂದಿಸಲು ಹೋದ ಪೊಲೀಸ್ ಪೇದೆಯೊಬ್ಬರು ಗಾಯಗೊಂಡರು.*ಬಾಕ್ಸ್‌ನ್ಯೂಸ್2 :
ಸಂಸದರಾದ ಶ್ರೇಯಸ್ ಪಟೇಲ್ ಮಾತನಾಡಿ, ಈ ಹಿಂದೆ ಬಿಜೆಪಿ, ಜೆಡಿಎಸ್ ಸರ್ಕಾರದ ಅವಧಿಯಲ್ಲಿನ ಅನೇಕ ಹಗರಣಗಳ ಬಗ್ಗೆ ಅನೇಕ ದೂರುಗಳು ಇದ್ದರೂ ಆ ಬಗ್ಗೆ ಕ್ರಮ ಕೈಗೊಳ್ಳಲು ರಾಜ್ಯಪಾಲರು ವಿಫಲರಾಗಿದ್ದಾರೆ. ಆದರೆ ಯಾರೋ ಓರ್ವ ಸಾಮಾನ್ಯ ವ್ಯಕ್ತಿ ಸಿಎಂ ವಿರುದ್ಧ ನೀಡಿದ ದೂರನ್ನು ಪರಿಗಣಿಸಿ ಅವರ ಮೇಲೆ ಕ್ರಮಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಮೈನಿಂಗ್ ಹಗರಣ, ಬಿಜೆಪಿ ಅವಧಿಯ ಕೋವಿಡ್ ಹಗರಣ, ಮಾಸ್ಕ್ ಹಗರಣ, ಮೊಟ್ಟೆ ಹಗರಣ ಸೇರಿದಂತೆ ನೂರಾರು ಹಗರಣಗಳ ಬಗ್ಗೆ ಈವರೆಗೂ ತನಿಖೆ ಏಕೆ ಆಗಿಲ್ಲ. ಜನಾನುರಾಗಿ ನಾಯಕ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ. ರಾಜ್ಯಪಾಲರೇ ಈ ನಿಲುವಿಗೆ ನಮ್ಮ ಧಿಕ್ಕಾರ ಇದೆ ಎಂದರು.