ಸಾರಾಂಶ
ಮೈಸೂರು ದಸರಾ ಅಂಗವಾಗಿ ಸೋಮವಾರ ಅರಮನೆಯಲ್ಲಿ ರಾಜರ ಖಾಸಗಿ ದರ್ಬಾರ್ ಆರಂಭವಾಯಿತು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ದಸರಾ ಅಂಗವಾಗಿ ಸೋಮವಾರ ಅರಮನೆಯಲ್ಲಿ ರಾಜರ ಖಾಸಗಿ ದರ್ಬಾರ್ ಆರಂಭವಾಯಿತು.ಬೆಳಗ್ಗೆ 5.30ಕ್ಕೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಿದ ನಂತರ, ಯದುವೀರ್‌ಗೆ ಚಾಮುಂಡಿ ತೊಟ್ಟಿಯಲ್ಲಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಂಕಣ ಧಾರಣೆ ನೆರವೇರಿತು. ಇದಾದ ನಂತರ ವಾಣಿವಿಲಾಸ ಸನ್ನಿಧಾನದ ದೇವರ ಮನೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ನೆರವೇರಿತು.
ಬಳಿಕ ಕಳಶ ಪೂಜೆ, ಸಿಂಹಾಸನಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ, ಎಣ್ಣೆ ಮಜ್ಜನ ಮುಗಿಸಿ ಬಂದ ಯದುವೀರ್‌ಗೆ ಪತ್ನಿ ತ್ರಿಷಿಕಾ ಕುಮಾರಿ ಆರತಿ ಬೆಳಗಿ, ಪಾದಪೂಜೆ ನೆರವೇರಿಸಿದರು. ಈ ವೇಳೆ ಪುತ್ರ ಆದ್ಯವೀರ್ ಇದ್ದರು. ನಂತರ, ದರ್ಬಾರ್ ಹಾಲ್‌ಗೆ ಆಗಮಿಸಿದ ಯದುವೀರ್, ಮಧ್ಯಾಹ್ನ 12.42 ರಿಂದ 12.58ರ ಒಳಗಿನ ಶುಭ ಲಗ್ನದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, 11ನೇ ಬಾರಿಗೆ ಸಿಂಹಾಸನ ಅಲಂಕರಿಸುತ್ತಿದ್ದಂತೆಯೇ ಬಹುಪರಾಕ್ ಮೊಳಗಿತು.ನಂತರ ಪುರೋಹಿತರಿಂದ ಧಾರ್ಮಿಕ ಪೂಜಾ ವಿಧಿಗಳು ನೆರವೇರಿದವು. ಗಜಪಡೆಯ ಏಕಲವ್ಯ ಮತ್ತು ಶ್ರೀಕಂಠ ಆನೆಗಳು ಅರಮನೆ ಖಾಸಗಿ ದರ್ಬಾರ್‌ನಲ್ಲಿ ಪಟ್ಟಣದ ಆನೆಗಳಾಗಿ ಭಾಗವಹಿಸಿದ್ದವು. ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.