ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಲೋಕ ಕಲ್ಯಾಣಾರ್ಥವಾಗಿ ಸಿದ್ಧಲಿಂಗಪುರದ ಅರಸಿನಕುಪ್ಪೆ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ನವ ಚಂಡಿಕಾ ಯಾಗ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.ಯಾಗದ ಅಂಗವಾಗಿ ಕ್ಷೇತ್ರದಲ್ಲಿ ಶ್ರೀ ಗಣಪತಿ ಹೋಮ, ಮೃತ್ಯುಂಜಯ ಹೋಮ, ದುರ್ಗಾಪೂಜೆ, ಚಂಡಿಕಾ ಪಾರಾಯಣ, ಅಭಿಷೇಕಾದಿಗಳು, ಅಲಂಕಾರ ಪೂಜೆಗಳು, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ಚಂಡಿಕಾ ಪಾರಾಯಣ, ದುರ್ಗಾಪೂಜೆ, ರುದ್ರಾಭಿಷೇಕ, ನವ ಚಂಡಿಕಾ ಹೋಮ, ಪೂರ್ಣಾಹುತಿ, ದೇವರ ಅಲಂಕಾರ ಪೂಜೆ, ಮಹಾಮಂಗಳಾರತಿ, ನಂತರ ಅನ್ನಸಂತರ್ಪಣೆ ನೆರವೇರಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಖಿಲ ಭಾರತೀಯ ಸಂತ ಸಮಿತಿಯ ಕರ್ನಾಟಕ ರಾಜ್ಯಾಧ್ಯಕ್ಷ, ಮಂಗಳೂರು ಓಂ ಶ್ರೀಮಠದ ಮಠಾಧೀಶ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಿದರು.ಅವರು ಮಾತನಾಡಿ, ಮೌಲ್ಯಯುತ ಜೀವನ ನಡೆಸಲು ಆಧ್ಯಾತ್ಮ ಸಹಕಾರಿಯಾಗಿದೆ. ಧರ್ಮದ ಮಾರ್ಗದಲ್ಲಿ ಎಲ್ಲರೂ ನಡೆದಾಗ ಮಾತ್ರ ಸುಭೀಕ್ಷ ಸಮಾಜ ನಿರ್ಮಾಣ ಸಾಧ್ಯ. ಗ್ರಾಮದಲ್ಲಿ ದೇವಾಲಯಗಳ ನಿರ್ಮಾಣದಿಂದ ಸಮಾನತೆ, ಧಾರ್ಮಿಕ ಜಾಗೃತಿಯೊಂದಿಗೆ ಸಾಮರಸ್ಯದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಯಜ್ಞ ಯಾಗಾದಿಗಳು ಪರಿಸರಕ್ಕೂ ಪೂರಕವಾಗಿವೆ. ಮನುಷ್ಯ ದ್ವೇಷಾಸೂಯೆಗಳನ್ನು ಬದಿಗೊತ್ತಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಿಕೊಳ್ಳಬೇಕು. ದೇವಾಲಯಗಳಿಂದ ಸಾಮಾಜಿಕ, ಧಾರ್ಮಿಕ ಜಾಗೃತಿಗಳು ಮೂಡಬೇಕು. ಸಾಮೂಹಿಕ ಆಚರಣೆಗಳಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುವುದರೊಂದಿಗೆ ಸಾಮರಸ್ಯದ ಜೀವನಕ್ಕೂ ವೇದಿಕೆಯಾಗಲಿದೆ ಎಂದು ಅಭಿಮತ ವ್ಯಕ್ತಪಡಿಸಿದರು.ಕಿಡಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ನೀಡಿದರು. ಶಿವಮೊಗ್ಗದ ವಿದ್ವಾನ್ ವಾಸುದೇವ ಭಟ್ ಚಂಡಿಯಾ ಯಾಗ, ಮೃತ್ಯುಂಜಯ ಹೋಮದ ವಿಶೇಷತೆಗಳ ಬಗ್ಗೆ ಭಕ್ತಾದಿಗಳಿಗೆ ವಿವರಣೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಈಗಾಗಲೇ ಕ್ಷೇತ್ರದಲ್ಲಿ ಶ್ರೀ ನವನಾಗನಾಥ ದೇವಾಲಯ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಬೃಹತ್ ದೇವಾಲಯ ನಿರ್ಮಾಣಕ್ಕೆ ಕಾರ್ಯಯೋಜನೆ ಸಿದ್ದಪಡಿಸಲಾಗಿದೆ ಎಂದರು.ಯಾಗ ಪೂಜೆಯಲ್ಲಿ ಸಂತ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಮಾತೃಶ್ರೀ ಶಿವಜ್ಞಾನಮಯೀ ಸರಸ್ವತಿ ಉಪಸ್ಥಿತರಿದ್ದರು. ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‍ನಾಥ್ ಜೀ ಮಾರ್ಗದರ್ಶನದಂತೆ ಬೆಂಗಳೂರಿನ ಕೇಶವ ಅಡಿಗ ನೇತೃತ್ವದಲ್ಲಿ, ಕ್ಷೇತ್ರದ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ನವ ಚಂಡಿಕಾಯಾಗದ ವಿಶೇಷ ಪೂಜೆಗಳು ನಡೆದವು.
ಚಂಡಿಕಾ ಯಾಗ ನಿರ್ವಹಣಾ ಸಮಿತಿ ಅಧ್ಯಕ್ಷ ಹೊಸೊಕ್ಲು ಸತೀಶ್, ಕಾರ್ಯದರ್ಶಿ ಕಳಂಜನ ಸುಗು, ಪದಾಧಿಕಾರಿಗಳು, ದೇವಾಲಯ ಸಮಿತಿ ಅಧ್ಯಕ್ಷ ಎಂ.ಸಿ. ಮೋಹನ್, ಕಾರ್ಯದರ್ಶಿಗಳಾದ ರಮೇಶ್, ಪ್ರಕಾಶ್, ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಚಂಡಿಕಾ ಯಾಗ ಪೂಜೆಯಲ್ಲಿ ಭಾಗಿಯಾಗಿದ್ದರು.