ನಾಳೆ ಅರೆಭಾಷೆ ಅಕಾಡೆಮಿ ಸಭೆ: ಕೊಡಗಿನ ಪ್ರತಿನಿಧಿಗಳ ಬಹಿಷ್ಕಾರ!

| Published : Jul 18 2024, 01:39 AM IST

ನಾಳೆ ಅರೆಭಾಷೆ ಅಕಾಡೆಮಿ ಸಭೆ: ಕೊಡಗಿನ ಪ್ರತಿನಿಧಿಗಳ ಬಹಿಷ್ಕಾರ!
Share this Article
  • FB
  • TW
  • Linkdin
  • Email

ಸಾರಾಂಶ

ಅರೆ ಭಾಷೆ ಅಕಾಡೆಮಿಯ ಸಮಾಗಮ ಸಭೆ ಶುಕ್ರವಾರ ಮಡಿಕೇರಿಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕೊಡಗು ಅರೆಭಾಷಿಕರು ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.ಈ ಹಿಂದಿನ ಎರಡೂ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದು ಈ ಬಾರಿ ಕೊಡಗಿನವರಿಗೆ ಆದ್ಯತೆ ನೀಡದೆ ಇರುವುದೇ ಕೊಡಗಿನವರ ಅಸಮಾಧಾನಕ್ಕೆ ಕಾರಣ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಅರೆ ಭಾಷೆ ಅಕಾಡೆಮಿಯ ಸಮಾಗಮ ಸಭೆ ಶುಕ್ರವಾರ ಮಡಿಕೇರಿಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕೊಡಗು ಅರೆಭಾಷಿಕರು ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.ಈ ಹಿಂದಿನ ಎರಡೂ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದು ಈ ಬಾರಿ ಕೊಡಗಿನವರಿಗೆ ಆದ್ಯತೆ ನೀಡದೆ ಇರುವುದೇ ಕೊಡಗಿನವರ ಅಸಮಾಧಾನಕ್ಕೆ ಕಾರಣ. ಲೋಕಸಭಾ ಚುನಾವಣೆಗೂ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಮಾವಜಿ ಜನಾರ್ದನ ಸೇರಿದಂತೆ ಅಧ್ಯಕ್ಷ ಮತ್ತು ಆರು ಮಂದಿ ಸದಸ್ಯರನ್ನು ಸರ್ಕಾರ ನೇಮಿಸಿತ್ತು. ಈ ಬಗ್ಗೆ ಕೊಡಗಿನ ಸೂದನ ಎಸ್. ಈರಪ್ಪ ಬಹಿರಂಗ ಹೇಳಿಕೆ ನೀಡಿ ಕೊಡಗಿಗೆ ಮತ್ತೆ ತಪ್ಪಿದ ಅವಕಾಶಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಕೊಡಗಿನ ಇಬ್ಬರು ಹಾಗೂ ಸಂಪಾಜೆ ಗ್ರಾಮದ ಒಬ್ಬರನ್ನು ಸರ್ಕಾರ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿತು.

ಕೊಡಗಿಗೆ ಅನ್ಯಾಯವಾಗಿರುವುದನ್ನು ಪ್ರತಿಭಟಿಸಿ ಸದಸ್ಯರಾಗಿ ಆಯ್ಕೆಯಾದ ಸೂದನ ಈರಪ್ಪ ಸದಸ್ಯತ್ವ ನಿರಾಕರಿಸುವುದಾಗಿ ಪ್ರಕಟಿಸಿದರು. ನೂತನ ಅಧ್ಯಕ್ಷರು ಕೊಡಗಿನವರ ಅಸಮಾಧಾನವನ್ನು ಮನಗಂಡು ಎರಡು ಮೂರು ದಿನಗಳ ಹಿಂದೆ ಕೊಡಗಿನ ಅರೆಬಾಷಿಕ ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ.ಅಧ್ಯಕ್ಷ ಸ್ಥಾನ ಹೋಗಲಿ ಕೊಡಗಿಗೆ ಸರಿಸಮಾನ ಸ್ಥಾನ ಕೊಡದೆ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಸೂದನ ಈರಪ್ಪ ಮತ್ತು ಇತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರದ ಸಮಾಗಮ ಸಭೆಯ ಆಹ್ವಾನವನ್ನು ಸೂಧನ ಈರಪ್ಪ ಬಹಿರಂಗವಾಗಿ ತಿರಸ್ಕರಿಸಿದ್ದಾರೆ. ಸಮಾಜದ ಹಲವು ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಆ ಮೂಲಕ ಕೊಡಗು ಜಿಲ್ಲೆಯ ಅರೆಭಾಷಿಕರು ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ.

ಕೊಡಗಿನ ಬಹುತೇಕ ಮಂದಿ ಅರೆ ಭಾಷೆ ಅಕಾಡೆಮಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ದಕ್ಷಿಣ ಕನ್ನಡದ ಮಂದಿಯೇ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವದಲ್ಲಿ ಸಿಂಹಪಾಲು ಪಡೆದಿದ್ದಾರೆ ಎಂಬುದು ಕೊಡಗಿನ ಪ್ರತಿನಿಧಿಗಳ ಆರೋಪ.

.................. ನಾವುಗಳು ಜು.19ರ ಅಕಾಡಮಿಯ ಸಭೆ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿರುವುದರಿಂದ ಸಭೆ ವಜಾ ಮಾಡಿ ದಿನಾಂಕ ಮುಂದೂಡುವಂತೆಯೂ, ನಮ್ಮ ಗೌಡ ಸಮಾಜಗಳ/ ಸಂಘಟನೆಗಳ ಅಧ್ಯಕ್ಷರನ್ನು ಸಂಪರ್ಕಿಸಿ ಸಹಕಾರ ಕೋರುವಂತೆ ತಿಳಿಸಲಾಗಿದೆ.

-ಸೋಮಣ್ಣ ಸೂರ್ತಲೆ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ.

.....................

ಫೆಡರೇಶನ್ ಅಧ್ಯಕ್ಷರು ತಡವಾಗಿ ಆದರೂ ಖಡಕ್ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಅಕಾಡೆಮಿ ಸದಸ್ಯತ್ವ ನಿರಾಕರಿಸಿ ಸ್ವಾಭಿಮಾನ ತೋರಿದ ಸೂದನ ಈರಪ್ಪ ನಡೆ ಅಭಿನಂದನಾರ್ಹ. ಕೊಡಗಿನವರಿಗೆ ಅಧ್ಯಕ್ಷ ಸ್ಥಾನ ಸಿಗದೇ ಇರುವುದರಿಂದ ಸದಸ್ಯ ಸಂಖ್ಯೆಯಲ್ಲಿ ಜಾಸ್ತಿ ಪ್ರಾಮುಖ್ಯತೆ ಕೊಡಬೇಕು. ಮತ್ತು ಕೊಡಗಿನ ಒಬ್ಬ ಮಹಿಳೆಯೂ ಇಲ್ಲದಿರುವುದು ಬಹಳ ನೋವು ತಂದಿದೆ. ಕೊಡಗಿನ ಗೌಡ ಸಮುದಾಯದ ಎಲ್ಲಾ ಪ್ರಮುಖರು ಒಮ್ಮತದ ನಿರ್ಣಯ ತೆಗೆದುಕೊಂಡು ಸರಕಾರದ ಗಮನ ಸೆಳೆದು ಕೊಡಗಿನವರಿಗೆ ಪ್ರಾತಿನಿಧ್ಯ ಸಿಗುವಂತೆ ಮಾಡಬೇಕು.

-ಕೆದಂಬಾಡಿ ಕಾಂಚನ, ನಿರ್ದೇಶಕಿ, ಕೊಡಗು ಗೌಡ ವಿದ್ಯಾಸಂಘ.

.................

ರಾಜಕೀಯ ರಹಿತವಾಗಿ ನನ್ನನ್ನು ''''''''ಅಕಾಡೆಮಿ'''''''' ಗೆ ಸದಸ್ಯನನ್ನಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಿದ ಪ್ರಮುಖರಿಗೆ ಧನ್ಯವಾದಗಳು. ಅಧ್ಯಕ್ಷ ಗಾದಿಯನ್ನು ಪ್ರಭಾವ ಬಳಸಿ ದ.ಕ. ಜಿಲ್ಲೆಯವರು ಪಡೆದಾಯ್ತು. ಜತೆಯಲ್ಲೆ ಆರು ಮಂದಿ ಆ ಜಿಲ್ಲೆಯವರೇ ಇದ್ದಾರೆ. ಕೊಡಗಿನ ಅರೆಭಾಷಿಕರ ಪರವಾಗಿ ನಾನು ಗಟ್ಟಿಯಾಗಿ ನಿಲ್ಲುತ್ತೇನೆ. ಜು. 19ರ ಸಭೆಗೆ ನಾನು ಹೋಗುವುದಿಲ್ಲ. ಇದು ನನ್ನ ಸ್ಪಷ್ಟ ತೀರ್ಮಾನ.

-ಸೂದನ ಎಸ್. ಈರಪ್ಪ. ಪಾಲೂರು.