ಹವಾಮಾನ ವೈಪರೀತ್ಯದಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಿದೆ ಅಡಕೆ: ಸಂಜೀವ ಜಕಾತಿ ಮಠ್

| Published : Feb 15 2024, 01:15 AM IST

ಸಾರಾಂಶ

ಹವಾಮಾನ ವೈಪರೀತ್ಯದಿಂದಾಗಿ ಅಡಕೆ ಬೆಳೆ ವಿವಿಧ ರೋಗಗಳಿಗೆ ತುತ್ತಾಗುತ್ತಿದೆ ಎಂದು ಶೃಂಗೇರಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಸ್ಯ ರೋಗ ಶಾಸ್ತ್ರಜ್ಞ ಡಾ.ಸಂಜೀವ ಜಕಾತಿ ಮಠ ತಿಳಿಸಿದರು.

- ಗುಬ್ಬಿಗಾ ರೈತ ಮಹಿಳೆ ಸಾರಮ್ಮ ಮನೆಯಲ್ಲಿ ಅಡಿಕೆ- ಕಾಳು ಮೆಣಸು ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಹವಾಮಾನ ವೈಪರೀತ್ಯದಿಂದಾಗಿ ಅಡಕೆ ಬೆಳೆ ವಿವಿಧ ರೋಗಗಳಿಗೆ ತುತ್ತಾಗುತ್ತಿದೆ ಎಂದು ಶೃಂಗೇರಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಸ್ಯ ರೋಗ ಶಾಸ್ತ್ರಜ್ಞ ಡಾ.ಸಂಜೀವ ಜಕಾತಿ ಮಠ ತಿಳಿಸಿದರು.

ಬುಧವಾರ ಗುಬ್ಬಿಗಾ ರೈತ ಮಹಿಳೆ ಸಾರಮ್ಮ ಅವರ ಮನೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಮರ ವಲಯದ ಗುಬ್ಬಿಗಾ ಕಾರ್ಯಕ್ಷೇತ್ರದ ಆಶ್ರಯದಲ್ಲಿ ನಡೆದ ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲವು ಶಿಲೀಂದ್ರಗಳಿಂದ ರೋಗಗಳು ಹರಡುತ್ತಿದೆ. ಪೋಷಕಾಂಶದ ಕೊರತೆ ಯಿಂದಲೂ ರೋಗ ಬರುತ್ತಿದೆ. ರೈತರು ಸಾಧ್ಯವಾದಷ್ಟು ತೋಟಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬಸಿ ಕಾಲುವೆ ತೆಗೆಯಬೇಕು. ಮಣ್ಣು ಪರೀಕ್ಷೆ ಮಾಡಿಸಿದರೆ ಮಣ್ಣಿನ ಫಲವತ್ತತೆ ಬಗ್ಗೆ ತಿಳಿಯಲಿದೆ. ಜಮೀನಿಗೆ ಯಾವ ಗೊಬ್ಬರ ನೀಡಬೇಕು ಹಾಗೂ ಎಷ್ಟು ಪ್ರಮಾಣ ನೀಡಬೇಕು ಎಂಬುದು ಸಹ ತಿಳಿಯಲಿದೆ. ಅಡಿಕೆ ತೋಟಗಳಿಗೆ ಕೊಳೆ ರೋಗ ಬಾರದಂತೆ ಬೋರ್ಡೋ ದ್ರಾವಣ ಮಾಡುವಾಗ ರಸ ಸಾರ -7 ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಬೋರ್ಡೋ ದ್ರಾವಣ ಸಿಂಪರಣೆ ಮಾಡಿದರೂ ಪ್ರಯೋಜನವಾಗುವುದಿಲ್ಲ ಎಂದರು. ಮುಖ್ಯ ಅತಿಥಿಯಾಗಿದ್ದ ಗುಬ್ಬಿಗಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಕರ್‌ ಮಾತನಾಡಿ, ರೈತರು ಅಡಿಕೆ ಬೆಳೆಯನ್ನು ಮಾತ್ರ ನಂಬಿಕೊಳ್ಳದೆ ಅಂತರ ಬೆಳೆಯಾದ ಕಾಳು ಮೆಣಸು, ಏಲಕ್ಕಿ,ಜಾಯಿಕಾಯಿಯನ್ನು ಸಹ ಬೆಳೆಯಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ರೈತರು ಮಾಹಿತಿ ಪಡೆದು ಸಮಗ್ರ ಬೆಳೆ ಬೆಳೆಯೋಣ ಎಂದರು. ತೋಟಗಾರಿಕೆ ಇಲಾಖೆ ಅಧಿಕಾರಿ ನವೀನ್ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಟ್ರೈಕೋಡರ್ಮ, ಸುಡೋ ಮಾನಸ್‌, ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಔಷಧಿ, ಹನಿ ನೀರಾವರಿಗೆ ಸಹಾಯ ಧನ ನೀಡಲಾಗುತ್ತದೆ ಎಂದರು. ಧ.ಗ್ರಾ.ಯೋಜನೆ ಕೃಷಿ ಮೇಲ್ವೀಚಾರಕ ದಿನೇಶ್‌ ಮಾತನಾಡಿ, ರೈತರಿಗೋಸ್ಕರ ಪ್ರತಿ ವರ್ಷ 26 ಕೃಷಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ಧ.ಗ್ರಾ. ಯೋಜನೆಯಿಂದ ಸಂಘದ ಸದಸ್ಯರು ಕೃಷಿ ಹಾಗೂ ಕೃಷಿ ಯೇತರ ಉದ್ದೇಶಗಳಿಗೆ ಪ್ರಗತಿ ನಿಧಿ ಪಡೆದು ಅನುಷ್ಠಾನ ಮಾಡಿರುವ ರೈತರಿಗೆ ತಾಲೂಕಿನಲ್ಲಿ ಒಟ್ಟು 7 ಲಕ್ಷ ಅನುದಾನ ನೀಡಲಾಗಿದೆ ಎಂದರು. ಸಭೆಯಲ್ಲಿ ಧ.ಗ್ರಾ.ಯೋಜನೆ ಕೈಮರ ವಲಯ ಮೇಲ್ವೀಚಾರಕ ತೀರ್ಥ ರಾಜ್‌, ಸೇವಾ ಪ್ರತಿನಿಧಿಗಳಾದ ಅನ್ನಪೂರ್ಣ, ಶೈನಿ, ವಿಪತ್ತು ನಿರ್ವಹಣಾ ಕ್ಯಾಪ್ಟನ್ ಸಾಜು, ರಮಾ ಹಾಗೂ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.