ವೇಣುಗೋಪಾಲ್ ಅವರನ್ನು ಏಜೆಂಟ್ ಎಂದು ಪ್ರತಿಪಕ್ಷ ನಾಯಕ ಅಶೋಕ್ ಅವರು ಕರೆದಿದ್ದಾರೆ. ಹಾಗಾದರೆ ನಿಮ್ಮ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ, ಉಸ್ತುವಾರಿ ಹುದ್ದೆಯಲ್ಲಿರುವವರೂ ಏಜೆಂಟರಲ್ಲವೇ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದ್ದಾರೆ.
ಮಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ.ಸಿ. ವೇಣುಗೋಪಾಲ್ ಅವರು ಕೆಪಿಸಿಸಿ ಮತ್ತು ಎಐಸಿಸಿ ಮಧ್ಯೆ ಸಮನ್ವಯಕಾರರಾಗಿದ್ದಾರೆ. ಈ ಹುದ್ದೆಯಲ್ಲಿರುವ ವೇಣುಗೋಪಾಲ್ ಅವರನ್ನು ಏಜೆಂಟ್ ಎಂದು ಪ್ರತಿಪಕ್ಷ ನಾಯಕ ಅಶೋಕ್ ಅವರು ಕರೆದಿದ್ದಾರೆ. ಹಾಗಾದರೆ ನಿಮ್ಮ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ, ಉಸ್ತುವಾರಿ ಹುದ್ದೆಯಲ್ಲಿರುವವರೂ ಏಜೆಂಟರಲ್ಲವೇ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕರಾಗಿರುವ ಆರ್. ಅಶೋಕ್ ಅವರು ತನ್ನ ಜವಾಬ್ದಾರಿ ಸ್ಥಾನದ ಬಗ್ಗೆ ಅರಿತುಕೊಳ್ಳದೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅಶೋಕ್ ಅವರ ಕಿಡಿಗೇಡಿತನದ ಹೇಳಿಕೆ ಅವರ ವ್ಯಕ್ತಿತ್ವ ತೋರಿಸುತ್ತದೆ. ಬಿಜೆಪಿಯವರು ಸರ್ಕಾರಿ ಜಾಗ ಖಾಸಗಿ ಮಾರಿದವರಿಗೆ ಇತಿಹಾಸವಿದೆ. ಅವರಿಗೆ ಯಾರನ್ನೂ ಪ್ರಶ್ನಿಸುವ ನೈತಿಕತೆಯಿಲ್ಲ ಎಂದರು.ಬಿಹಾರ ಚುನಾವಣೆಯಲ್ಲಿ ಮತದಾರನಿಗೆ ಆಮಿಷ ತೋರಿಸಿ ಬಿಜೆಪಿ ಮಿತ್ರಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದಿದೆ. 20 ವರ್ಷ ಆಡಳಿತ ಚೆನ್ನಾಗಿ ನಡೆಸುತ್ತಿದ್ದರೆ ಇಂತಹ ಆಮಿಷ ಬೇಕಿತ್ತಾ? ನಾವು ಚುನಾವಣೆ ಸಂದರ್ಭ ಪ್ರಣಾಳಿಕೆಯಲ್ಲಿ ಘೋಷಿಸಿ, ಅಧಿಕಾರ ಹಿಡಿದ ಬಳಿಕ ಕೊಟ್ಟ ಮಾತಿನಂತೆ ನಡೆದಿದ್ದೇವೆ. ಬಿಜೆಪಿಯವರಂತೆ ಆಮಿಷ ತೋರಿಸಲ್ಲ ಎಂದರು.
ದೇಶದ ಪ್ರಧಾನಿ ಮನಮೋಹನ್‌ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತವಾದಾಗ ದೇಶದ ಮಾನ ಹರಾಜು ಆಗಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಈಗ ರುಪಾಯಿ ಮೌಲ್ಯ ದಾಖಲೆಯ ಕುಸಿತ ಕಂಡಿದ್ದು, ಇದು ದೇಶಕ್ಕಾದ ಅವಮಾನವಲ್ಲವೇ? ಇದರಿಂದ ದೇಶದ ವರ್ಚಸ್ಸಿಗೆ ಧಕ್ಕೆಯಾಗಿಲ್ಲವೇ ಎಂದು ಅವರು ಪ್ರಶ್ನಿಸಿದರು.ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್‌ದಾಸ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಸಫಾಯಿ ಕರ್ಮಾಚಾರಿ ಘಟಕದ ಅಧ್ಯಕ್ಷ ಪ್ರೇಮ್ ಬಲ್ಲಾಳ್‌ಬಾಗ್, ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶುಭೋದಯ ಆಳ್ವ, ಜಿಲ್ಲಾ ಮಹಿಳಾ ಕಾಂಗ್ರೆಸ್ (ನಗರ) ಅಧ್ಯಕ್ಷೆ ಅಪ್ಪಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾಜಿ ಮೇಯರ್‌ರಾದ ಅಶ್ರಫ್, ಶಶಿಧರ್ ಹೆಗ್ಡೆ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಪಡು, ಮಾಜಿ ಕಾರ್ಪೊರೇಟರ್ ಅಶೋಕ್ ಡಿ.ಕೆ., ಕಚೇರಿ ಕಾರ್ಯದರ್ಶಿ ನಝೀರ್, ಶಬೀರ್ ಸಿದ್ಧಕಟ್ಟೆ ಇದ್ದರು.