ಸಾರಾಂಶ
ಚಾಮರಾಜನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಪಂ ಸದಸ್ಯರು ನಡೆಸುತ್ತಿರುವ ಧರಣಿಗೆ ಕೊಳ್ಳೆಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಬೆಂಬಲ ವ್ಯಕ್ತಪಡಿಸಿ ಮನವಿ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನಾ ಧರಣಿಗೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮುರ್ತಿ ಭಾಗವಹಿಸಿ, ಬೆಂಬಲ ವ್ಯಕ್ತಪಡಿಸಿದರು. ಕಳೆದ ಒಂದು ವಾರದಿಂದ ಗ್ರಾಪಂ ಪಿಡಿಒ ಹಾಗೂ ನೌಕರರು ರಾಜ್ಯ ಸರ್ಕಾರದ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿರುದ್ಧ ಪ್ರತಿಭಟನಾ ಧರಣಿ ನಡೆಯುತ್ತಿದ್ದು, ವಿಷಯ ತಿಳಿದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮುರ್ತಿ ಧರಣಿ ನಿರತರನ್ನು ಭೇಟಿ ಮಾಡಿ ಅವರ ನ್ಯಾಯಯುತ ಬೇಡಿಕೆಗಳ ಕುರಿತು ಚರ್ಚೆಸಿದರು. ಬಳಿಕ ಮಾತನಾಡಿದ ಅವರು, ಕಳೆದ ಅ.೪ ರಿಂದ ನಿರಂತರವಾಗಿ ಪ್ರತಿಭಟನಾ ಧರಣಿ ಮಾಡುತ್ತಿರುವುದು ನನ್ನ ಗಮನಕ್ಕು ಬಂದಿದೆ. ತಕ್ಷಣ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕರೆ ಮಾಡಿ, ಸಮಸ್ಯೆಗಳನ್ನು ಬಗೆಹರಿಸುವಂತೆ ನಿರ್ದೇಶನ ನೀಡಿದ್ದು, ಈಗಾಗಲೇ ಸಚಿವರು ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆಯನ್ನು ಇಂದು ಮಧ್ಯಾಹ್ನ ಕರೆದಿದ್ದಾರೆ. ಈ ಸಭೆಯಲ್ಲಿ ಚರ್ಚೆ ನಡೆಸಿ ನಿಮ್ಮೆಲ್ಲರ ಬೇಡಿಕೆಗಳನ್ನು ಬಹುತೇಕ ಈಡೇರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಪಂಯಲ್ಲಿ ವಿವಿಧ ಹಂತಗಳಲ್ಲಿ ಕರ್ತವ್ಯ ವಹಿಸುವ ಅಧಿಕಾರಿಗಳು ಹಾಗೂ ನೌಕರ ವರ್ಗ ಬಹಳ ಶ್ರಮ ಪಟ್ಟು ದುಡಿಯುತ್ತಿದ್ದಾರೆ. ಅವರಿಗೆ ಹೆಚ್ಚಿನ ಹೊರೆ ನೀಗಿಸುವ ಜೊತೆಗೆ ಅದಕ್ಕೆ ತಕ್ಕಂತೆ ಸಂಬಳ ಹಾಗೂ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಿಎಂ ಸಿದ್ದರಾಮಯ್ಯ ಹಾಗೂ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳ ಲಾಬಿ ದೊಡ್ಡದಾಗಿದ್ದು, ವಿಧಾನಸೌಧ ಹಾಗೂ ಆಯಕಟ್ಟಿನ ಸ್ಥಳದಲ್ಲಿ ಕುಳಿತಿರುವ ಇಂಥ ಅಧಿಕಾರಿಗಳ ತಪ್ಪು ನಿರ್ಧಾರಗಳಿಂದ ಗೊಂದಲವಾಗುತ್ತಿದೆ. ಇದರ ಬಗ್ಗೆ ಸರ್ಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಈ ಬಗ್ಗೆ ನನ್ನ ಸಹಮತ ಇದೆ. ವಿಧಾನಸಭೆ ಅಧಿವೇಶನದಲ್ಲಿಯು ಸಹ ಚರ್ಚೆ ಮಾಡುತ್ತೇನೆ ಎಂದು ಕೃಷ್ಣಮುರ್ತಿ ತಿಳಿಸಿದರು. ಪಿಡಿಒ ನೌಕರರ ಸಂಘದ ಅಧ್ಯಕ್ಷ ಡಿ.ಕುಮಾರಸ್ವಾಮಿ ಹಾಗೂ ಪದಾಧಿಕಾರಿಗಳು ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಗ್ರಾಪಂ ಅಧಿಕಾರಿಗಳು, ನೌಕರರು ಹಾಗೂ ಸದಸ್ಯರ ಮನವಿಗೆ ಸರ್ಕಾರ ಸ್ಪಂದಿಸುವಂತೆ ತಾವು ಒತ್ತಡ ಹಾಕಬೇಕು ಎಂದು ಮನವಿ ಮಾಡಿಕೊಂಡರು. ರಾಜ್ಯದ ಶೇ.೬೮ ರಿಂದ ೭೦ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾಪಂಗಳಿಂದ ಶೇ.೭೦ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಪಂ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಪಂ ಎಲ್ಲಾ ಪಂಚ ನೌಕರರಾದ ಕ್ಲರ್ಕ್ ಕಂ ಡಿಇಒ, ಕರವಸೂಲಿಗಾರರು, ಜಲಗಾರರು, ಕಛೇರಿ ಸಹಾಯಕರರು, ಸ್ವಚ್ಛತಾಗಾರರು ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು. ಈ ವೇಳೆ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು, ತಾಪಂ ಮಾಜಿ ಅಧ್ಯಕ್ಷ ಆರ್.ಮಹದೇವ್, ಕೇಶವಮೂರ್ತಿ, ಸಂಘದ ಗೌರವ ಅಧ್ಯಕ್ಷ ಎನ್.ಜಿ.ಮಾದಪ್ಪ, ಗ್ರಾಪಂ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಪುನೀತ್, ತಾಲೂಕು ಅಧ್ಯಕ್ಷ ಬಸಪ್ಪನಪಾಳ್ಯ ರೇವಣ್ಣ, ಎಸ್‌ಡಿಎ ಮತ್ತು ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಕೊತ್ತಲವಾಡಿ ಮಹದೇವಸ್ವಾಮಿ, ಡಿಇಒ ಸಂಘಗಳ ಅಧ್ಯಕ್ಷ ರಾಜೇಂದ್ರ, ರಾಜ್ಯ ಪರಿಷತ್ ಸದಸ್ಯ ಸುರೇಶ್, ಪ್ರಧಾನ ಕಾರ್ಯದರ್ಶಿ ಶಾಂತರಾಜು, ಸೇರಿದಂತೆ ಜಿಲ್ಲೆಯ ವ್ಯಾಪ್ತಿಯ ವಿವಿಧ ಗ್ರಾಪಂ ಪಂಚಾಯಿತಿಗಳ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ನೌಕರರು, ಗ್ರಾಪಂ ಪ್ರತಿನಿಧಿಗಳು ಭಾಗವಹಿಸಿದ್ದರು.