ಸಾರಾಂಶ
ಕೇಂದ್ರ ಸರ್ಕಾರ ಇ -ಶ್ರಮ್ ಯೋಜನೆಯ ಮೂಲಕ ದೇಶದ ಎಲ್ಲಾ ಕೃಷಿ ಕಾರ್ಮಿಕರು, ರೈತರು, ಅಸಂಘಟಿತ ಕಾರ್ಮಿಕರನ್ನು ಇಎಸ್ಐ, ಪಿಎಫ್ ಸೌಲಭ್ಯದ ವ್ಯಾಪ್ತಿಗೆ ತರಲು ನಿರ್ಧರಿಸಿದೆ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಂಜನಗೂಡು : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇ -ಶ್ರಮ್ ಯೋಜನೆಯ ಮೂಲಕ ದೇಶದ ಎಲ್ಲಾ ಕೃಷಿ ಕಾರ್ಮಿಕರು, ರೈತರು, ಅಸಂಘಟಿತ ಕಾರ್ಮಿಕರನ್ನು ಇಎಸ್ಐ, ಪಿಎಫ್ ಸೌಲಭ್ಯದ ವ್ಯಾಪ್ತಿಗೆ ತರಲು ನಿರ್ಧರಿಸಿದೆ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ವಸ್ತುಪ್ರದರ್ಶನ, ಕೃಷಿಮೇಳ, ಆರೋಗ್ಯ ತಪಾಸಣಾ ಶಿಬಿರ, ದೋಣಿ ವಿಹಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ದೇಶದ 120 ಕೋಟಿ ಜನರ ಪೈಕಿ 10 ಕೋಟಿ ಜನರಿಗೆ ಮಾತ್ರ ಇಎಸ್ಐ ಪಿಎಫ್ ಸೌಲಭ್ಯ ದೊರಕುತ್ತಿದೆ. ಆದರೆ ಕೃಷಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. 55 ಕೋಟಿ ಕೃಷಿ ಮತ್ತು ಆಸಂಘಟಿತ ಕಾರ್ಮಿಕರನ್ನು ಇಎಸ್ಐ, ಪಿಎಫ್ ಸೌಲಭ್ಯದ ವ್ಯಾಪ್ತಿಗೆ ತರಬೇಕೆಂಬ ಸಂಕಲ್ಪದೊಂದಿಗೆ ಮೋದಿ ಸರ್ಕಾರ ಇ- ಶ್ರಮ್ ಯೋಜನೆಯನ್ನು ಜಾರಿಗೊಳಿಸಿ, ನೋಂದಣಿಯನ್ನು ಆರಂಭಿಸಿದೆ ಎಂದರು.
ಈಗಾಗಲೇ 35 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. ಉಳಿದ ರೈತರು ಕೃಷಿ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರು ಈ ಸೌಲಭ್ಯದ ವ್ಯಾಪ್ತಿಗೆ ಬರಲು ಇ - ಶ್ರಮ ಯೋಜನೆಗೆ ನೊಂದಾವಣಿ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಕೃಷಿ ಕಾಯಕವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಕಿಸಾನ್ ಸಮ್ಮಾನ್ ಯೋಜನೆ, ಬೆಳೆ ವಿಮೆ, ಮಣ್ಣಿನ ಪರೀಕ್ಷಾ ಕೇಂದ್ರಗಳನ್ನು, ಹೊಸ ಕೃಷಿ ತಂತ್ರಜ್ಞಾನ ಪರಿಚಯಿಸಿ ರೈತರಿಗೆ ಇಳುವರಿ ಹೆಚ್ಚಿಸಲು ನೆರವಾಗುವ ಜೊತೆಗೆ ನೂತನ ಯಂತ್ರೋಪಕರಣಗಳ ತರಬೇತಿ ನೀಡಿ ಸಬ್ಸಿಡಿ ಸೌಲಭ್ಯ ವಿಸ್ತರಿಸುತ್ತಿದೆ. ಈ ಕೇಂದ್ರದ ಯೋಜನೆಗಳನ್ನು ರಾಜ್ಯ ಸರ್ಕಾರ ಜನರಿಗೆ ತಲುಪಿಸಿದಲ್ಲಿ ಕೃಷಿ ಲಾಭದಾಯಕವಾಗಲಿದೆ ಎಂದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಕೃಷಿ ನಷ್ಟ ಎಂದು ಕೃಷಿಯಿಂದ ದೂರ ಉಳಿದ ರೈತರಿಗೆ ಸರ್ಕಾರಗಳು ಕೃಷಿ ಇಲಾಖೆ ಸಮಗ್ರ ಕೃಷಿಯ ಬಗ್ಗೆ ಅರಿವು ಮೂಡಿಸುತ್ತಾ, ಹವಾಮಾನ ವೈಪರೀತ್ಯದಿಂದ ಆಗುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡುತ್ತಿದೆ. ಜೊತೆಗೆ ಕೃಷಿಯ ಬಗ್ಗೆ ಸಲಹೆ ಸೂಚನೆ ನೀಡುವ ಮೂಲಕ ರೈತರಿಗೆ ನೆರವಾಗುತ್ತಿದೆ ಎಂದರು.
ಸುತ್ತೂರು ಮಠವು ಕೂಡ ಈ ಭಾಗದ ರೈತರಿಗೆ ಕೃಷಿಯಲ್ಲಾದ ಹೊಸ ತಂತ್ರಜ್ಞಾನವನ್ನು ವಸ್ತು ಪ್ರದರ್ಶನದ ಮೂಲಕ ಪರಿಚಯಿಸುವ ಕೆಲಸ ಮಾಡಿ, ಸಮಗ್ರ ಬೇಸಾಯ ಪದ್ಧತಿ ಸಾವಯವ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ವಸ್ತು ಪ್ರದರ್ಶನದಲ್ಲಿ ಕಬ್ಬು ಕಟಾವು ಯಂತ್ರವನ್ನು ಪ್ರದರ್ಶನ ಮಾಡಲಾಗಿದೆ. ಯಾವುದೇ ಬೆಳೆಯ ಕಟಾವು ಯಂತ್ರಗಳನ್ನು ಖರೀದಿಸಲು ಸಾಮಾನ್ಯ ವರ್ಗಕ್ಕೆ 40 ಲಕ್ಷ, ಎಸ್ಸಿ ಎಸ್ಟಿ ವರ್ಗಕ್ಕೆ 50 ಲಕ್ಷದವರೆಗೆ ಸಬ್ಸಿಡಿ ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ವಿಧಾನಸಭಾ ವಿಪಕ್ಷ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಸಾವಯವ ಕೃಷಿಯನ್ನು ಇತ್ತೀಚಿನ ದಿನಗಳಲ್ಲಿ ರೈತರಿಗೆ ಪರಿಚಯಿಸಲಾಗುತ್ತಿದೆ. ಆದರೆ ನಮ್ಮ ಪೂರ್ವಜರು ಸಾವಯವ ಕೃಷಿಯನ್ನು ಅವಲಂಬಿಸಿದ್ದಾಗ ಸರ್ಕಾರಗಳು ಮತ್ತು ಕೃಷಿ ಅಧಿಕಾರಿಗಳು ಫರ್ಟಿಲೈಜರ್ ಉಪಯೋಗ ಮಾಡಿ ಬೆಳೆ ಬೆಳೆಯುವಂತೆ ಒತ್ತಡ ಏರುತಿದ್ದರು. ಇದರಿಂದ ಸಂಪೂರ್ಣವಾಗಿ ರೈತರು ತಿಪ್ಪೆಗೊಬ್ಬರ ಮರೆತು, ರಾಸಾಯನಿಕ ಗೊಬ್ಬರಕ್ಕೆ ಅಂಟಿಕೊಂಡರು. ಈಗ ಅದೇ ಸರ್ಕಾರ ಅದೇ ಕೃಷಿ ಅಧಿಕಾರಿಗಳು ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗಿ ಭೂಮಿ ಬರಡಾಗಲಿದೆ ಆದ್ದರಿಂದ ಸಾವಯವ ಕೃಷಿಯನ್ನು ಅನುಸರಿಸಿ ಎಂದು ಹೇಳಿಕೆ ನೀಡುತ್ತಿದೆ. ಇಂತಹ ದ್ವಂದ್ವ ನೀತಿಯಿಂದಾಗಿ ನಮ್ಮ ದೇಶ ಈ ಸ್ಥಿತಿಗೆ ತಲುಪುತ್ತಿದೆ ಎಂದರು.
ಕೃಷಿ ಭೂಮಿ ಬಡಾವಣೆಗಳಾಗಿ ಪರಿವರ್ತನೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಉಂಟಾಗಬಹುದು. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಗಳು ರೈತರಿಗೆ ನೆರವು ನೀಡುವ ಮೂಲಕ ಕೃಷಿ ಕಾರ್ಯಕ್ರಮ ಪುನಶ್ಚೇತನಗೊಳಿಸುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ದೇಶದ 140 ಕೋಟಿ ಜನರ ಪೈಕಿ 40 ಕೋಟಿ ಜನರು ಕುಂಭಮೇಳದಲ್ಲಿ ಒಂದೇ ಕಡೆ ಸೇರುತ್ತಿದ್ದರೆ ಇದು ಪವಾಡವಲ್ಲವೇ? ಮಠಮಾನ್ಯಗಳಿಂದ ನಮ್ಮ ಸಂಸ್ಕೃತಿ, ಧರ್ಮ ರಕ್ಷಣೆ ಕೆಲಸವಾಗುತ್ತಿದೆ. ನಮ್ಮ ಪೂರ್ವಜರು ನಮಗಾಗಿ ಬಿಟ್ಟು ಹೋದ ಸಂಸ್ಕೃತಿ, ಧರ್ಮವನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುವ ಹೊಣೆ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಸುತ್ತೂರು ಮಠ ಧಾರ್ಮಿಕ ಆಚರಣೆಯ ಜೊತೆಗೆ ಅನ್ನದಾಸೋಹ, ಅಕ್ಷರ ದಾಸೋಹ, ಆರೋಗ್ಯ ಸೇವೆ, ರೈತರಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವಂತಹ ಸಮಾಜಮುಖಿ ಕೆಲಸವನ್ನು ಶ್ರೀಮಠ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮೀಜಿ, ಆಲಗೂರು - ಓಬಲೇಶ್ವರ, ಪಂಚಮಸಾಲಿ ಪೀಠದ ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಶಾಸಕರಾದ ಎ.ಬಿ. ರಮೇಶ್ ಬಂಡಿಸಿದ್ದೇಗೌಡ, ಎ.ಆರ್. ಕೃಷ್ಣಮೂರ್ತಿ, ಪಿ. ರವಿಕುಮಾರ್ ಗಣಿಗ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಶಾಸಕ ನಿರಂಜನ್ ಕುಮಾರ್, ಮೈಮುಲ್ ನಿರ್ದೇಶಕರಾದ ಓಂ ಪ್ರಕಾಶ್, ನೀಲಾಂಬಿಕೆ ಮಹೇಶ್, ಮುಖಂಡರಾದ ನಿರಂಜನಮೂರ್ತಿ, ನಂದೀಶ ಮೊದಲಾದವರು ಇದ್ದರು.