ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ

| Published : Nov 28 2023, 12:30 AM IST

ಸಾರಾಂಶ

ಕಳೆದ ಹತ್ತು- ಹದಿನೈದು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರೂ ಉಪನ್ಯಾಸಕರ ಸೇವೆ ಕಾಯಂ ಬಗ್ಗೆ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಇದು ಕುಟುಂಬ ನಿರ್ವಹಣೆಗೂ ಸಮಸ್ಯೆಯಾಗಿ ಪರಿಣಮಿಸಿದೆ. ಅತಿಥಿ ಉಪನ್ಯಾಸಕರಲ್ಲೂ ಪ್ರತಿಭಾನ್ವಿತರು ಹಾಗೂ ಬೋಧನಾ ಕೌಶಲ್ಯವುಳ್ಳವರಿದ್ದಾಗ್ಯೂ ಸೇವೆ ಕಾಯಂಗೊಳಿಸುವ ಕಾಳಜಿಯನ್ನು ಯಾವುದೇ ಸರ್ಕಾರಗಳು ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ಇಲ್ಲಿನ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.

ಕಳೆದ ಹತ್ತು- ಹದಿನೈದು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರೂ ಉಪನ್ಯಾಸಕರ ಸೇವೆ ಕಾಯಂ ಬಗ್ಗೆ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಇದು ಕುಟುಂಬ ನಿರ್ವಹಣೆಗೂ ಸಮಸ್ಯೆಯಾಗಿ ಪರಿಣಮಿಸಿದೆ. ಅತಿಥಿ ಉಪನ್ಯಾಸಕರಲ್ಲೂ ಪ್ರತಿಭಾನ್ವಿತರು ಹಾಗೂ ಬೋಧನಾ ಕೌಶಲ್ಯವುಳ್ಳವರಿದ್ದಾಗ್ಯೂ ಸೇವೆ ಕಾಯಂಗೊಳಿಸುವ ಕಾಳಜಿಯನ್ನು ಯಾವುದೇ ಸರ್ಕಾರಗಳು ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆಯಾ ಸರ್ಕಾರಗಳು ಕಾಯಂಗೊಳಿಸಿ, ಸೇವಾ ಭದ್ರತೆ ಒದಗಿಸಿವೆ. ಕಳೆದ ಸರ್ಕಾರದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ಧರಾಮಯ್ಯನವರು ಅತಿಥಿ ಉಪನ್ಯಾಸಕರ ಪರವಾಗಿ ಧ್ವನಿ ಎತ್ತಿದ್ದರಲ್ಲದೆ, ಪೂರ್ಣಕಾಲಿಕ ಉಪನ್ಯಾಸಕರನ್ನಾಗಿಸುವ ಕಾಳಜಿಯನ್ನು ತೆಗೆದುಕೊಂಡಿದ್ದಾರೆ. ಇದೀಗ ತಮ್ಮದೇ ಸರ್ಕಾರ ರಾಜ್ಯದಲ್ಲಿ ಅಧಿಕಾರವಿದೆ. ತಾವೇ ನೀಡಿದ ಭರವಸೆಯಂತೆ ಸೇವೆ ಕಾಯಂಗೊಳಿಸಬೇಕು. ಬೆಳಗಾವಿಯಲ್ಲಿ ಜರುಗುವ ಚಳಿಗಾಲದ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವ ಸಂಬಂಧ ವಿಶೇಷ ನಿಯಮಾವಳಿಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಡಾ. ಟಿ. ದುರುಗಪ್ಪ ಅವರು ಪ್ರತಿಭಟನೆಯ ನೇತೃತ್ವ ವಹಿಸಿ, ರಾಜ್ಯ ಸರ್ಕಾರ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವ ಮಹತ್ವದ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರಲ್ಲದೆ, ಸರ್ಕಾರ ಸೇವೆ ಕಾಯಂಗೊಳಿಸುವ ತನಕ ಹೋರಾಟ ಮುಂದುವರಿಸಲಾಗುವುದು ಎಂದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಡಾ. ಎಚ್. ಹನುಮೇಶ್, ಕಾರ್ಯದರ್ಶಿ ಡಿ. ಸಿದ್ಧೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಕೆ. ಬಸಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಫರೀದಾ, ರುದ್ರಮುನಿ, ಎಸ್.ಎಂ. ರಮೇಶ್, ಗುರುರಾಜ, ರಫೀಕ್, ರುದ್ರಗೌಡ, ಸಂಧ್ಯಾ, ರಾಜಲಕ್ಷ್ಮಿ, ಡಾ. ಬಸವರಾಜ್ ಸೇರಿದಂತೆ ಸಂಘದ ಜಿಲ್ಲಾ ಸಮಿತಿಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.