ಸಾರಾಂಶ
ಹೊನ್ನಾವರ: ತಾಲೂಕಿನ ಅರೇಅಂಗಡಿಯ ಸಮಾಜಕಾರ್ಯ ಶಿಕ್ಷಣ ಪದವಿ ಕಾಲೇಜನ್ನು ಆಡಳಿತ ಮಂಡಳಿಯವರು ನಕಲಿ ದಾಖಲೆ ಬಳಸಿ ಸ್ಥಳಾಂತರಿಸುವ ಹುನ್ನಾರ ನಡೆಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಅರುಣ ನಾಯ್ಕ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಡಿ. ಮೆಚ್ಚಣ್ಣನವರ್ ಕರೆ ಮಾಡಿ ಎಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದರು ಎಂದು ಕೇಳಿದ್ದರು. 10 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದಿದ್ದೆ. ಮಾರನೇ ದಿವಸ ಕರೆ ಮಾಡಿ ಏಕಾಏಕಿ ಕಾಲೇಜು ಬಂದ್ ಮಾಡಿ ಎಂದಿದ್ದರು. ಕಾಲೇಜು ಬಂದ್ ಆದರೆ ಪಾಲಕರು ನಮ್ಮನ್ನು ಕೇಳುತ್ತಾರೆ ಎಂದಿದ್ದೆ. ಕಾಲ್ ಕಡಿತ ಮಾಡಿದ್ದರು. ನಂತರದ ದಿನಗಳಲ್ಲಿ ಯುನಿವರ್‌ಸಿಟಿ ತನಿಖಾ ಸಮಿತಿಯವರು ಬಂದಿದ್ದರು. ಕಾಲೇಜಿನಲ್ಲಿನ ಸಿಬ್ಬಂದಿ ಹಾಗೂ ಇನ್ನಿತರ ವಿವರ ಕೇಳಿದ್ದರು. ಸಿಬ್ಬಂದಿ ಕಡಿಮೆ ಇರುವ ಬಗ್ಗೆ ಹೇಳಿದ್ದೆ. ಕಾಲೇಜು ನಿಯಮಾವಳಿ ತಪ್ಪಿದೆ, ಹಲವಾರು ಕೊರತೆಗಳಿವೆ. ಕಾಲೇಜು ಬಂದ್ ಮಾಡುತ್ತೇವೆ ಎಂದಿದ್ದರು. ಮ್ಯಾನೇಜ್‌ಮೆಂಟ್‌ನವರು ನಮ್ಮ ಜತೆ ಸಹಕರಿಸುತ್ತಿಲ್ಲ. ಯುನಿವರ್‌ಸಿಟಿ ನಿಯಮಾವಳಿಯಂತೆ ಇಲ್ಲದಿರುವುದು ನಿಜ ಎಂದು ಒಪ್ಪಿಕೊಂಡಿದ್ದೆ. ನಮ್ಮ ಬಳಿ ಕಾಲೇಜು ರದ್ದುಗೊಳಿಸುವ ಪತ್ರದ ಶಿಫಾರಸು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದರು. ಆದರೆ ನಂತರ ನಮಗೆ ವಿಶ್ವವಿದ್ಯಾಲಯದಿಂದ ಕಾಲೇಜು ರದ್ದಾಗಿರುವ ಆದೇಶ ಬದಲು ಕಾಲೇಜು ಸ್ಥಳಾಂತರ ಎಂದು ಪತ್ರದಲ್ಲಿ ತಿಳಿಸಿದ್ದರು. ಈ ಬಗ್ಗೆ ಯುನಿವರ್‌ಸಿಟಿಯವರಿಗೆ ಕೇಳಿದರೆ ಇದು ಆಡಳಿತ ಮಂಡಳಿಯವರು ಸ್ಥಳಾಂತರದ ಬಗ್ಗೆ ನೀಡಿರುವುದರಿಂದ ನಿಮಗೆ ನೀಡಿರುವ ಪತ್ರವಾಗಿದೆ ಎಂದರು. ಆಗ ನಕಲಿ ಸಹಿ ಬಳಸಿ ಕಾಲೇಜು ಸ್ಥಳಾಂತರಕ್ಕೆ ಪ್ರಯತ್ನಿಸಿರುವುದು ತಿಳಿದಿಲ್ಲವಾಗಿತ್ತು. ಆದರೆ ನಾವು, ವಿದ್ಯಾರ್ಥಿಗಳ ಮೂಲಕ ಯುನಿವರ್‌ಸಿಟಿಗೆ ಕಾಲೇಜು ಸ್ಥಳಾಂತರಿಸಬಾರದೆಂದು ಮನವಿಪತ್ರ ಸಲ್ಲಿಸಿದ್ದೆ. ಸ್ಥಾನಿಕ ಸಮಿತಿಯವರು ಕಾಲೇಜು ಸ್ಥಳಾಂತರದ ಬಗ್ಗೆ ಸಭೆ ನಡೆಸಿ, ಸರ್ಕಾರಕ್ಕೆ ಕಳುಹಿಸಿದ್ದರು. ಆಡಳಿತ ಮಂಡಳಿ ಪ್ರಾಂಶುಪಾಲರ ನಕಲಿ ಸಹಿ ಬಳಸಿ ಸ್ಥಳಾಂತರಕ್ಕೆ ಕಳುಹಿಸಿದ್ದರಿಂದ ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿತ್ತು. ಇದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿಲ್ಲವಾಗಿರುವುದರಿಂದಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗಳು ಕೈಚೆಲ್ಲಿದ್ದರು. ನಂತರ ಈ ಬಗ್ಗೆ ಪೊಲೀಸ್ ದೂರು ನೀಡಿದ್ದೆ. ಆದರೂ ಪ್ರಯೋಜನವಾಗಿಲ್ಲ. ಕೊನೆಗೆ ನ್ಯಾಯಾಲಯದ ಮೂಲಕ ದೂರು ನೀಡಿದ್ದೇನೆ ಎಂದರು.
ಕಾಲೇಜು ವಿದ್ಯಾರ್ಥಿ ಸುಬ್ರಹ್ಮಣ್ಯ ನಾಯ್ಕ ಮಾತನಾಡಿದರು. ವಿದ್ಯಾರ್ಥಿಗಳಾದ ಬಸವರಾಜ ಬೂದಿಹಾಳ, ವಿಜಯಕುಮಾರ್ ಬೂದಿಹಾಳ ಇದ್ದರು.