ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಳೇ ದ್ವೇಷದ ಹಿನ್ನೆಲೆಯಲ್ಲಿ ಸೋದರ ಸಂಬಂಧಿಯನ್ನು ಕೊಲೆಗೈದಿದ್ದ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಮ್‌ಸಿಂಗ್ ಪೇಟ್ ನಿವಾಸಿ ಶ್ರೀಕಾಂತ್(38) ಬಂಧಿತ. ಆರೋಪಿ ಏ.18ರಂದು ಮದ್ಯದ ಅಮಲಿನಲ್ಲಿ ತನ್ನ ಸೋದರ ಸಂಬಂಧಿ ಸತೀಶ್ ಕುಮಾರ್(38) ಎಂಬಾತನ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಕುಮಾರ್ ಸ್ನೇಹಿತರ ಭೇಟಿಗಾಗಿ ಏ.18ರ ರಾತ್ರಿ ದೊಮ್ಮಲೂರಿಗೆ ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ಸಿಕ್ಕ ಆರೋಪಿ ಶ್ರೀಕಾಂತ್ ಹಾಗೂ ಸ್ನೇಹಿತರು ಮದ್ಯ ಸೇವಿಸಿದ್ದಾರೆ. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಶ್ರೀಕಾಂತ್ ಮತ್ತು ಸತೀಶ್ ಕುಮಾರ್ ನಡುವೆ ಜಗಳವಾಗಿದೆ. ಅದು ವಿಕೋಪಕ್ಕೆ ತಿರುಗಿದಾಗ ಕೋಪಗೊಂಡ ಶ್ರೀಕಾಂತ್, ಹಳೇ ದ್ವೇಷದ ವಿಚಾರ ಪ್ರಸ್ತಾಪಿಸಿ ಸತೀಶ್ ಕುಮಾರ್ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.