ಮನೆಗಳ್ಳರ ಬಂಧನ: ೪೭ ಲಕ್ಷ ರು. ಮೌಲ್ಯದ ಚಿನ್ನಾಭರಣ ವಶ

| Published : Aug 01 2024, 12:19 AM IST

ಸಾರಾಂಶ

ಮಾ.೯ರಂದು ಕಿರುಗಾವಲು ಸಂತೇಮಾಳದ ಕಮಲಮ್ಮ ಕುಟುಂಬದವರು ಮನೆ ಬೀಗ ಹಾಕಿಕೊಂಡು ಬೆಂಗಳೂರಿಗೆ ತೆರಳಿದ್ದರು. ಮಾ.೧೦ರಂದು ಮನೆಗೆ ವಾಪಸಾದಾಗ ಮುಂದಿನ ಬಾಗಿಲು ಮತ್ತು ಬೆಡ್‌ರೂಂನಲ್ಲಿದ್ದ ಬೀರುವಿನ ಬಾಗಿಲನ್ನು ಆಯುಧದಿಂದ ಮೀಟಿ ತೆಗೆದು ೫೫ ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು ೮೦ ಸಾವಿರ ರು. ಹಣ ದೋಚಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಮಂಡ್ಯ: ರಾತ್ರಿ ಸಮಯದಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ೪೭ ಲಕ್ಷ ರು. ಮೌಲ್ಯದ ಚಿನ್ನಾಭರಣ, ಬೆಳ್ಳಿ ಸೇರಿದಂತೆ ಸ್ಕೂಟರ್‌ವೊಂದನ್ನು ಮಳವಳ್ಳಿ ತಾಲೂಕು ಕಿರುಗಾವಲು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮದ್ದೂರು ತಾಲೂಕು ಅಣ್ಣೂರು ಗ್ರಾಮದ ಶೇಖರ (೫೪), ಕ್ಯಾತಘಟ್ಟ ಗ್ರಾಮದ ಕೃಷ್ಣ (೫೨), ವೆಂಕಟೇಶ (೬೫) ಬಂಧಿತ ಆರೋಪಿಗಳು. ಇವರಿಂದ ೬೫೦ ಗ್ರಾಂ ಚಿನ್ನ, ೧೭೦ ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇದರೊಂದಿಗೆ ಮೂವರು ಕಳ್ಳತನ ಕೃತ್ಯದಲ್ಲಿ ತೊಡಗಿದ್ದ ೧೪ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾ.೯ರಂದು ಕಿರುಗಾವಲು ಸಂತೇಮಾಳದ ಕಮಲಮ್ಮ ಕುಟುಂಬದವರು ಮನೆ ಬೀಗ ಹಾಕಿಕೊಂಡು ಬೆಂಗಳೂರಿಗೆ ತೆರಳಿದ್ದರು. ಮಾ.೧೦ರಂದು ಮನೆಗೆ ವಾಪಸಾದಾಗ ಮುಂದಿನ ಬಾಗಿಲು ಮತ್ತು ಬೆಡ್‌ರೂಂನಲ್ಲಿದ್ದ ಬೀರುವಿನ ಬಾಗಿಲನ್ನು ಆಯುಧದಿಂದ ಮೀಟಿ ತೆಗೆದು ೫೫ ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು ೮೦ ಸಾವಿರ ರು. ಹಣ ದೋಚಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳ ಪತ್ತೆಗೆ ಎಎಸ್‌ಪಿಗಳಾದ ಸಿ.ಇ.ತಿಮ್ಮಯ್ಯ, ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್, ಪಿಎಸ್‌ಐಗಳಾದ ಡಿ.ರವಿಕುಮಾರ್, ವಿ.ಸಿ.ಅಶೋಕ್, ಬಿ.ಮಹೇಂದ್ರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ತನಿಖಾ ತಂಡವು ಪತ್ತೆ ಕಾಲದಲ್ಲಿ ವಿವಿಧ ಆಯಾಮಗಳ ಮೂಲಕ ಮಾಹಿತಿ ಸಂಗ್ರಹಿಸಿ ಮೂವರು ಆರೋಪಿಗಳನ್ನು ಪತ್ತೆಹಚ್ಚಿ, ದಸ್ತಗಿರಿ ಮಾಡಿ ಕಳ್ಳತನವಾಗಿದ್ದ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳ ಬಂಧನದಿಂದ ಜಿಲ್ಲೆಯ ಇತರೆಡೆ ನಡೆದಿದ್ದ ಒಟ್ಟು ೧೪ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.