ಸಾರಾಂಶ
ಹುಬ್ಬಳ್ಳಿ:ರೈಲ್ವೆಯಲ್ಲಿ ನೌಕರಿ ಕೊಡಿಸುವ ನೆಪದಲ್ಲಿ ಗೃಹಿಣಿಯನ್ನು ಮಂಚಕ್ಕೆ ಕರೆದ ರೈಲ್ವೆ ನೌಕರನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐಆರ್‌ಎಎಸ್ ಮಹಿಳಾ ಅಧಿಕಾರಿ ಹೆಸರಲ್ಲಿ ಬುಕ್ ಆದ ರೂಮಿನಲ್ಲಿ ಈತ ಸಿಕ್ಕು ಬಿದ್ದಿದ್ದಾನೆ. ಇದು ಜನರನ್ನು ಬೆಚ್ಚಿ ಬೀಳಿಸಿದೆ.
ಈತನೊಬ್ಬನೇ ಇದ್ದಾನೋ ಅಥವಾ ಈತನ ಜತೆ ಮತ್ಯಾರಾದರೂ ಇದ್ದಾರೋ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಇನ್ನು ರೈಲ್ವೆ ಇಲಾಖೆಯೂ ವಿಚಾರಣೆಗೆ ಮುಂದಡಿ ಇಟ್ಟಿದೆ.ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿಯಲ್ಲಿ ಕ್ಲರ್ಕ್ ಆಗಿರುವ ನದೀಂ ಎಂಬಾತನೇ ಬಂಧಿತ ಆರೋಪಿ. ಈತ ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ಜಾಬ್ ನೋಟಿಫಿಕೇಶನ್ ಎಂಬ ಹೆಸರಲ್ಲಿ ನಕಲಿ ಪೇಜ್ ಮಾಡಿದ್ದ. ಆ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಯುವತಿಯರು, ಗೃಹಿಣಿಯರೇ ಈತನ ಟಾರ್ಗೆಟ್.
ಅವರನ್ನು ಪರಿಚಯಿಸಿಕೊಂಡು ರೈಲ್ವೆಯಲ್ಲಿ ನೌಕರಿ ಬೇಕಾ; ನಾನು ಕೊಡಿಸುತ್ತೇನೆ ಎಂದು ಅವರನ್ನು ನಂಬಿಸುತ್ತಿದ್ದ. ಜತೆಗೆ ರೈಲ್ವೆ ಹಿರಿಯ ಅಧಿಕಾರಿಗಳ ನಕಲಿ ಐಡಿ ಮಾಡಿ ಆ ಮೂಲಕ ಅವರೊಂದಿಗೆ ಚಾಟ್ ಕೂಡ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.ಈತ ಮೊದಲಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ಕೊಡಲು ಸಾಧ್ಯವಿಲ್ಲ ಎಂದರೆ ತನ್ನೊಂದಿಗೆ ಮಂಚ ಹತ್ತಬೇಕು ಎಂದು ಹೇಳುತ್ತಿದ್ದ. ಇದೇ ರೀತಿ ಕೇಶ್ವಾಪುರದ ಗೃಹಿಣಿಯೊಬ್ಬಳಿಗೆ ರೈಲ್ವೆಯಲ್ಲಿ ನೌಕರಿ ಕೊಡಿಸುತ್ತೇನೆ. ಇಂತಿಷ್ಟು ಹಣ ಕೊಡು ಎಂದು ಹೇಳಿದ್ದ. ಆಕೆ ಹಣವಿಲ್ಲ ಎಂದ ಮೇಲೆ ಲೈಂಗಿಕವಾಗಿ ತನಗೆ ಸಹಕರಿಸುವಂತೆ ಕೂಡ ಕೇಳಿದ್ದ. ಜತೆಗೆ ರೈಲ್ವೆ ಗೆಸ್ಟ್ ಹೌಸ್‌ಗೆ ಬರುವಂತೆ ಹೇಳಿದ್ದ. ಈ ವಿಷಯವನ್ನು ಆ ಗೃಹಿಣಿ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಬಳಿಕ ಕುಟುಂಬಸ್ಥರೊಂದಿಗೆ ಸೇರಿಕೊಂಡು ಕೇಶ್ವಾಪುರ ಠಾಣೆಯಲ್ಲಿ ದೂರು ನೀಡಿದ್ದಾಳೆ.
ರೈಲ್ವೆ ಅಧಿಕಾರಿಗಳ ಗೆಸ್ಟ್ ಹೌಸ್‌ಗೆ ಆತ ಮಹಿಳೆಗೆ ಹೇಳಿದ್ದ ರೂಮಿಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಧಿಕಾರಿ ಹೆಸರಲ್ಲಿ ರೂಂ:
ಈತ ಅಧಿಕಾರಿಗಳ ಗೆಸ್ಟ್ ಹೌಸ್‌ನಲ್ಲಿ ಮಹಿಳಾ ಐಆರ್‌ಎಎಸ್ ಅಧಿಕಾರಿ ಹೆಸರಲ್ಲಿ ಬುಕ್ ಮಾಡಿದ್ದ ರೂಮನಲ್ಲಿ ಉಳಿದುಕೊಂಡಿದ್ದ. ಯಾವ ಮಹಿಳಾ ಅಧಿಕಾರಿ ಹೆಸರಲ್ಲಿ ರೂಮ್ ಬುಕ್ ಆಗಿತ್ತೋ ಆ ಮಹಿಳಾ ಅಧಿಕಾರಿ ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದಲ್ಲೇ ಕೆಲಸಕ್ಕೆ ಇದ್ದಾರೆ ಎಂದು ಹೇಳಲಾಗಿದೆ.ಈತ ಆ ರೂಮಿಗೆ ಗೃಹಿಣಿಗೆ ಬರುವಂತೆ ತಿಳಿಸಿದ್ದ. ಹಾಗಾದರೆ ಆ ಐಆರ್‌ಎಎಸ್ ಮಹಿಳಾ ಅಧಿಕಾರಿ ಹೆಸರಲ್ಲಿ ಹೇಗೆ ರೂಂ ಬುಕ್ ಆಗಿತ್ತು. ಯಾರು ಬುಕ್ ಮಾಡಿದ್ದರು. ಈತ ಅದ್ಹೇಗೆ ಅಲ್ಲಿ ಉಳಿದುಕೊಂಡಿದ್ದ. ಈತನೊಬ್ಬನೇ ಇದ್ದಾನಾ? ಈತನ ಜತೆಗೆ ಮತ್ಯಾರಾದರೂ ಅಧಿಕಾರಿಯಾಗಲಿ ಸಿಬ್ಬಂದಿಯಾಗಲಿ ಇದ್ದಾರೆಯೇ? ಎಷ್ಟು ವರ್ಷಗಳಿಂದ ಈ ರೀತಿ ಮಾಡುತ್ತಿದ್ದ? ಎಷ್ಟು ಜನರಿಗೆ ಈತ ಮೋಸ ಮಾಡಿದ್ದಾನೆ ಎಂಬ ಬಗ್ಗೆಯೆಲ್ಲ ತನಿಖೆ ನಡೆಯುತ್ತಿದೆ.
ಪೊಲೀಸ್ ಕಸ್ಟಡಿ:ಈತನನ್ನು ಬಂಧಿಸಿರುವ ಕೇಶ್ವಾಪುರ ಠಾಣೆಯ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಪೊಲೀಸರ ವರದಿ ಆಧಾರದ ಮೇಲೆ ಆ ನೌಕರನ ವಿರುದ್ಧ ಕ್ರಮಕೈಗೊಳ್ಳಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಜತೆಗೆ ಈ ನೌಕರನ ಹಿಂದೆ ಮತ್ಯಾರಾದರೂ ಇದ್ದಾರೆಯೇ? ಎಂಬುದರ ವಿಚಾರಣೆಯನ್ನೂ ರೈಲ್ವೆಇಲಾಖೆಯೂ ಮಾಡುತ್ತಿದೆ. ಜತೆಗೆ ಈತನ ಹಿಸ್ಟರಿ ಬಗ್ಗೆಯೂ ಮಾಹಿತಿ ಕಲೆ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ದೊಡ್ಡ ಜಾಲ:ಈಗ ಬಂಧಿತನಾಗಿರುವ ನದೀಂ ಹಿಂದೆ ದೊಡ್ಡ ಜಾಲ ಇರಬಹುದು ಎಂಬ ಶಂಕೆ ಪೊಲೀಸರದ್ದು. ಈ ಹಿಂದೆ ರೈಲ್ವೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪೀಕುತ್ತಿದ್ದ ಕೆಲವರನ್ನು ಬಂಧಿಸಲಾಗಿತ್ತು. ಅದಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ? ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗಿದೆ. ನೌಕರಿ ಆಮಿಷ ಒಡ್ಡಿ ಜನರಿಗೆ ಮೋಸ ಮಾಡುತ್ತಿದ್ದ ಜಾಲದ ಬಗ್ಗೆ ಕನ್ನಡಪ್ರಭ ಪತ್ರಿಕೆ ವರದಿ ಪ್ರಕಟಿಸಿತ್ತು. ಕೆಲ ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಬರೀ ದುಡ್ಡಿನ ವಸೂಲಿ ಮಾಡುತ್ತಿಲ್ಲ. ಜತೆಗೆ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಈ ಪ್ರಕರಣದಿಂದ ಬಯಲಾದಂತಾಗಿದೆ.
ರೈಲ್ವೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ರೈಲ್ವೆ ಇಲಾಖೆಯ ಅಕೌಂಟೆಂಟ್‌ನ್ನು ಬಂಧಿಸಲಾಗಿದೆ. ಈತನ ಹಿಂದೆ ಮತ್ಯಾರಾದರೂ ಇದ್ದಾರೆಯೇ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.ಐಆರ್‌ಎಎಸ್ ಅಧಿಕಾರಿ ಹೆಸರಲ್ಲಿ ಬುಕ್ ಆದ ರೂಮಿನಲ್ಲಿ ನದೀಂ ಎಂಬಾತ ಸಿಕ್ಕು ಬಿದ್ದಿದ್ದಾನೆ. ಆತ ರೈಲ್ವೆಯಲ್ಲಿ ಕ್ಲರ್ಕ್ ಇದ್ದಾನೆ. ಪೊಲೀಸ್ ಇಲಾಖೆ ಏನು ವರದಿ ಕೊಡುತ್ತದೆಯೋ ಎಂಬುದನ್ನು ನೋಡಿಕೊಂಡು ರೈಲ್ವೆಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.