ಸಾರಾಂಶ
ಜಮೀನಿನಲ್ಲಿ ಪಾಲು ಕೊಡಲಿಲ್ಲವೆಂದು ವ್ಯಕ್ತಿಯೊಬ್ಬರ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ: ಜಮೀನಿನಲ್ಲಿ ಪಾಲು ಕೊಡಲಿಲ್ಲವೆಂದು ವ್ಯಕ್ತಿಯೊಬ್ಬರ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ಹನುಮಂತಪ್ಪ 2024ರ ನ.29ರಂದು ಬೆಳಗ್ಗೆ 7 ಗಂಟೆ ವೇಳೆ ಅಜ್ಜಿಹಳ್ಳಿ ಮುಂದಿನ ರಸ್ತೆಯಲ್ಲಿ ಕೊಲೆಯಾಗಿದ್ದರು. ಮೃತ ಹನುಮಂತಪ್ಪನ ಮೊದಲನೇ ಪತ್ನಿ ಆಶಾ ತನ್ನ ಅಣ್ಣ ರಂಗಸ್ವಾಮಿ, ಮಗ ಲಿಖಿತ್ ಹಾಗೂ ತನ್ನ ತಂದೆ ವಿ.ಟಿ.ನಾಗರಾಜಪ್ಪನ ಜೊತೆ ಸೇರಿ, ಪತಿ ಹನುಮಂತಪ್ಪನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.ಅಜ್ಜಿಹಳ್ಳಿಯಲ್ಲಿ ಕಳೆದ ನ.28ರ ಬೆಳಗ್ಗೆ 7 ಗಂಟೆ ಹೊತ್ತಿಗೆ ಹನುಮಂತಪ್ಪ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಟಿ.ಎನ್.ರಂಗಸ್ವಾಮಿ (ಮೈಕಲ್ ರಂಗ) ಹಿಂಬಾಸಿಕೊಂಡು ಹೋಗಿ, ಮಚ್ಚಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿ, ತಲೆಮರೆಸಿಕೊಂಡಿದ್ದನು. ಈ ಬಗ್ಗೆ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹನುಮಂತಪ್ಪನ ಕೊಲೆ ಆರೋಪಿಗಳ ಪತ್ತೆಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಎಎಸ್‌ಪಿಗಳಾದ ಸಂತೋಷ ಎಂ. ವಿಜಯಕುಮಾರ, ಜಿ.ಮಂಜುನಾಥ ಮಾರ್ಗದರ್ಶನದಲ್ಲಿ ಚನ್ನಗಿರಿ ಎಎಸ್‌ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ಚನ್ನಗಿರಿ ಠಾಣಾಧಿಕಾರಿ, ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು. ಹನುಮಂತಪ್ಪನ ಕೊಲೆ ಆರೋಪಿ ಟಿ.ಎನ್.ರಂಗಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.- - - (ಸಾಂದರ್ಭಿಕ ಚಿತ್ರ)