ಅಕ್ರಮಮರಳು ಸಾಗಣೆ ಮಾಡುವವರನ್ನು ಬಂಧಿಸಿ

| Published : Feb 13 2024, 12:46 AM IST

ಸಾರಾಂಶ

ಯಾವುದೇ ಕಾರಣಕ್ಕೂ ಆಕ್ರಮವಾಗಿ ಮರಳು, ಮಣ್ಣು, ಕಲ್ಲು ಸಾಗಾಟ ಮಾಡದಂತೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು. ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಜವಾಬ್ದಾರಿ ಎಲ್ಲಾ ಅಧಿಕಾರಿಗಳು ಹೊರಬೇಕೆಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ವೇದಾವತಿ ನದಿಪಾತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರು ಬಂದಿದ್ದು, ಯಾವುದೇ ಕಾರಣಕ್ಕೂ ಆಕ್ರಮವಾಗಿ ಮರಳು, ಮಣ್ಣು, ಕಲ್ಲು ಸಾಗಾಟ ಮಾಡದಂತೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು. ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಜವಾಬ್ದಾರಿ ಎಲ್ಲಾ ಅಧಿಕಾರಿಗಳು ಹೊರಬೇಕೆಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ತಿಳಿಸಿದರು.

ಸೋಮವಾರ ತಾಲೂಕು ಕಚೇರಿ ಆವರಣದಲ್ಲಿ ಅಕ್ರಮ ಮರಳು, ಕ್ವಾರಿ, ಮಣ್ಣು ಸಾಗಾಣಿಕೆ ಕುರಿತಂತೆ ಕರೆಯಲಾಗಿದ್ದ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲೂಕು ಅಧಿಕಾರಿಗಳು ಭಾಗವಹಿಸಿದ್ದ ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಹಿರಿಯೂರು ಎಲ್ಲಾ ಅಧಿಕಾರಿ ವರ್ಗ ತಮ್ಮ ದೈನದಿನ ಕೆಲಸಗಳಿಗಿಂತ ಹೆಚ್ಚು ಜವಾಬ್ದಾರಿಯನ್ನು ಅಕ್ರಮ ಮರಳು ಸಾಗಾಣಿಕೆ ನಿಯಂತ್ರಿಸಲು ಉಪಯೋಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಯಾವುದೇ ಭಾಗದಲ್ಲಿ ಅಕ್ರಮ ಮರಳು ಸಾಗಾಟ ನಡೆಯಕೂಡದು. ಇದು ತತ್‌ಕ್ಷಣವೇ ನಿಲುಗಡೆಯಾಗಬೇಕು. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿ ಮರಳು, ಕಲ್ಲುಕ್ವಾರಿ, ಮಣ್ಣು ಸಾಗಾಟ ಸಂಪೂರ್ಣ ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ವಿಶೇಷವಾಗಿ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಉಪವಿಭಾಗಾಧಿಕಾರಿಗಳು, ಅನುಮತಿ ಇಲ್ಲದೆ ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಯಾವುದೇ ವಾಹನ, ವ್ಯಕ್ತಿ ಕಂಡರೆ ಕೂಡಲೇ ವಶಪಡಿಸಿಕೊಂಡು ಪ್ರಕರಣ ದಾಖಲಿಸಬೇಕು. ಅಧಿಕಾರಿಗಳು ವೇದಾವತಿ ನದಿ ಪಾತ್ರದಲ್ಲಿ ಬರುವ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಅಕ್ರಮ ಮರಳು ಸಾಗಾಟ ತಡೆಯುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಬೇಕು. ಸಾರ್ವಜನಿಕರ ಸಹಕಾರ ಹೆಚ್ಚುದೊರೆತಲ್ಲಿ ಮಾತ್ರ ಅಕ್ರಮ ಮರಳು ಸಾಗಾಟವನ್ನು ಸಂಪೂರ್ಣವಾಗಿ ನಿಯಂತ್ರಬಹುದಾಗಿದೆ ಎಂದರು.

ತಹಸೀಲ್ದಾರ್‌ ರೇಹಾನ್ ಪಾಷ, ಹಿರಿಯೂರು ತಹಸೀಲ್ದಾರ್‌ ರಾಜೇಶ್, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಎಒಇ ಸಂತೋಷ್‌ಕುಮಾರ್, ಮಾಲತಿ, ಲಕ್ಷ್ಮೀನಾರಾಯಣ, ಆರ್.ತಿಪ್ಪೇಸ್ವಾಮಿ, ಪಿಎಸ್‌ಐ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.