ಶಾಸಕ ಭರತ್ ರೆಡ್ಡಿ ಕಚೇರಿ ಮೇಲೆ 2 ದಿನಗಳ ಇಡಿ ದಾಳಿ ಅಂತ್ಯ

| Published : Feb 13 2024, 12:46 AM IST

ಸಾರಾಂಶ

ದಾಳಿ ವೇಳೆ ಹಾರ್ಡ್ ಡಿಸ್ಕ್‌, ಅಪಾರ ಪ್ರಮಾಣದ ದಾಖಲೆಪತ್ರಗಳು ವಶಕ್ಕೆ ಪಡೆದ ಅಧಿಕಾರಿಗಳು, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಅವರಿಂದ ಸಹಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬಳ್ಳಾರಿ: ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಸಂಬಂಧಿಕರ ಮನೆ- ಕಚೇರಿಗಳ ಮೇಲಿನ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಡೆಸಿದ್ದ ದಾಳಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಶನಿವಾರ ಬೆಳಗ್ಗೆ 6 ಗಂಟೆಗೆ ದಾಳಿ ಆರಂಭಿಸಿದ್ದ ಇಡಿ ಅಧಿಕಾರಿಗಳು ಭಾನುವಾರ ತಡರಾತ್ರಿವರೆಗೆ ಶಾಸಕ ಭರತ್ ರೆಡ್ಡಿ ಅವರ ಮೋಕಾ ರಸ್ತೆಯಲ್ಲಿರುವ ಕಚೇರಿಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದರು.

ದಾಳಿ ವೇಳೆ ಹಾರ್ಡ್ ಡಿಸ್ಕ್‌, ಅಪಾರ ಪ್ರಮಾಣದ ದಾಖಲೆಪತ್ರಗಳು ವಶಕ್ಕೆ ಪಡೆದ ಅಧಿಕಾರಿಗಳು, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಅವರಿಂದ ಸಹಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳು ಕಚೇರಿಯಿಂದ ಹೊರಬಿದ್ದಿದ್ದಾರೆ. ಶಾಸಕ ಭರತ್ ರೆಡ್ಡಿ ಕುಟುಂಬದಿಂದ ಅಪಾರ ಪ್ರಮಾಣದ ಅಕ್ರಮ ಹಣ ವರ್ಗಾವಣೆ ಗುಮಾನಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯೇ ಇಡಿ ಅಧಿಕಾರಿಗಳು ಬಳ್ಳಾರಿಗೆ ಆಗಮಿಸಿ, ಆರು ಕಡೆ ಏಕಕಾಲಕ್ಕೆ ದಾಳಿ ನಡೆಸಿ, ಆಸ್ತಿಪತ್ರಗಳ ತಪಾಸಣೆ ನಡೆಸಿದರು.

ಮೊದಲ ದಿನ ಶಾಸಕ ಭರತ್ ರೆಡ್ಡಿ, ತಂದೆ ಸೂರ್ಯನಾರಾಯಣ ರೆಡ್ಡಿ, ಚಿಕ್ಕಪ್ಪ ಪ್ರತಾಪ ರೆಡ್ಡಿಯ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಎರಡೇ ದಿನ ಶಾಸಕ ತಂದೆ ಅವರ ಕಚೇರಿಯಲ್ಲಿ ಶೋಧ ಕಾರ್ಯ ಮುಂದುವರಿಸಲಾಗಿತ್ತು. ಸುಮಾರು 40 ತಾಸುಗಳ ಕಾಲ ಇಡಿ ಅಧಿಕಾರಿಗಳು ದಾಳಿ ಪ್ರಕ್ರಿಯೆ ನಡೆಸಿದರು.

ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕೈ ನಾಯಕರನ್ನು ನಿಯಂತ್ರಿಸಲು ಮಾಡಿರುವ ಷಡ್ಯಂತ್ರ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.