ಕನ್ನಡಪ್ರಭ ವಾರ್ತೆ ಮಡಿಕೇರಿ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿಯಾಗಿದೆ. ಕಲೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಹೇಳಿದ್ದಾರೆ.ನಗರದ ಕೊಡಗು ವಿಶ್ವವಿದ್ಯಾಲಯದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ವತಿಯಿಂದ ಕಾಲೇಜಿನಲ್ಲಿ ನಡೆದ ಪ್ರತಿಭಾನ್ವೇಷಣೆ ಕಲೆಯ ಹಬ್ಬ ಕಲಾ ವೈಭವವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಫೀ. ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ವಿದ್ಯಾರ್ಥಿ ಸಂಘದ ಸಂಚಾಲಕ ಡಾ. ಶ್ರೀಧರ್ ಹೆಗಡೆ ಅವರು ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಯ ‘ಕಲಾ ವೈಭವ’ ಕಾರ್ಯಕ್ರಮದ ಆಯೋಜನೆ ಇತರರಿಗೆ ಮಾದರಿಯಾಗಿದೆ ಮತ್ತು ಹೆಮ್ಮೆಯ ವಿಚಾರವಾಗಿದೆ ಎಂದು ಶ್ಲಾಘಿಸಿದರು.ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಕೃಷ್ಣ ಅವರು ಮಾತನಾಡಿ, ಕಾಲೇಜು ಪ್ರಗತಿ ಪಥದಲ್ಲಿ ಸಾಗಲು ಇಂತಹ ಕಾರ್ಯಕ್ರಮಗಳು ಸಹಕಾರಿ. ಕಾರ್ಯಪ್ಪ ಕಾಲೇಜಿನ ಚಟುವಟಿಕೆ ಜಿಲ್ಲೆಯ ಎಲ್ಲೆಡೆ ಪಸರಿಸಲು ಬೇರೆ ಕಾಲೇಜು ವಿದ್ಯಾರ್ಥಿಗಳ ಸಂಗಮದಿಂದ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ನಯನ ಕಶ್ಯಪ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರತಿಬಿಂಬಿಸಲು ಸೂಕ್ತ ವೇದಿಕೆ ಅಗತ್ಯವಿದೆ ಎಂದರು.ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ತಿಪ್ಪೇಸ್ವಾಮಿ, ಕಾರ್ಯಕ್ರಮದ ಸಂಚಾಲಕಿ ಡಾ. ಎ.ಎನ್. ಗಾಯತ್ರಿ, ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಡಾ. ಡೀನಾ ಎಂ.ಪಿ., ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಮೋನಿಕಾ ಎ.ಎನ್., ಸೂಕ್ಷ್ಮಾಣು ವಿಭಾಗದ ಉಪನ್ಯಾಸಕಿ ಡಾ. ಸೌಮ್ಯ ಕೃಷ್ಣಮೂರ್ತಿ, ಭೂಗೋಳ ವಿಭಾಗದ ಉಪನ್ಯಾಸಕಿ ಡಾ. ಬೈರವಿ, ವಿದ್ಯಾರ್ಥಿ ಸಂಘಟನೆ ಸಂಚಾಲಕಿ ಟಿ.ವಿ. ವರ್ಷ ಮತ್ತಿತರರು ಉಪಸ್ಥಿತರಿದ್ದರು.

ಗಮನ ಸೆಳೆದ ಕಲಾ ವೈಭವ

ಕಾರ್ಯಕ್ರಮದಲ್ಲಿ ಸಮೂಹ ನೃತ್ಯ, ಹಾಡುಗಾರಿಕೆ, ನಾಟಕ, ಏಕ ಪಾತ್ರಾಭಿನಯ, ರಂಗೋಲಿ, ಬೆಂಕಿರಹಿತ ಅಡುಗೆ, ಚರ್ಚಾಕೂಟ ಸಹಿತ ವಿವಿಧ ಕಲೆಗಳ ಪ್ರದರ್ಶನ ಆಕರ್ಷಿಸಿತು. ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ‘ಕಲಾ ವೈಭವ’ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.