ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಯಾವುದೇ ಕಲೆ ಎಂತವರನ್ನಾದರೂ ದೊಡ್ಡವರನ್ನಾಗಿ ಮಾಡಿ ಇತಿಹಾಸದಲ್ಲಿ ಉಳಿಯುವಂತೆ ಮಾಡುತ್ತದೆ ಎನ್ನಲು ನಮ್ಮ ಅಜ್ಜ ಶಹನಾಯಿ ವಾದಕ ಸನಾದಿ ಅಪ್ಪಣ್ಣನವರೇ ಉದಾಹರಣೆ ಎಂದು ಸನಾದಿ ಅಪ್ಪಣ್ಣನವರ ಮರಿ ಮೊಮ್ಮಗ ಬಸವರಾಜ ಭಜಂತ್ರಿ ಹೇಳಿದರು.ಪಟ್ಟಣದ ಅಕ್ಕನಾಗಮ್ಮ ಸರ್ಕಾರಿ ಬಾಲಕಿಯರ ಪಪೂ ವಿದ್ಯಾಲಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಗುರುವಾರ ಹಮ್ಮಿಕೊಂಡಿದ್ದ ಶರಣೆ ಆಯ್ದಕ್ಕಿ ಲಕ್ಕಮ್ಮ ಹಾಗೂ ಬಿಜ್ಜಳನ ಆಸ್ಥಾನದ ಶರಣರ ಕ್ರಾಂತಿ ಕುರಿತು ಭಾಷಣ ಸ್ಪರ್ಧೆ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ, ಸನಾದಿ ಅಪ್ಪಣ್ಣನವರ ವಂಶಜರಿಗೆ ಸನ್ಮಾನ ಸಮಾರಂಭದಲ್ಲಿ ಮಹಾಸಭಾದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬೀಳಗಿಯಲ್ಲಿ ನಿತ್ಯ ನಸುಕಿನ ಜಾವ ಅಪ್ಪಣ್ಣವನರು ಶಹನಾಯಿ ಊದಿದ ಮೇಲೆಯೇ ಜನ ಎದ್ದು ತಮ್ಮ ದೈನಂದಿನ ಕೆಲಸ ಮಾಡುತ್ತಿದ್ದರು. ಕಲೆ ಯಾವತ್ತಿಗೂ ಸಾಯುವುದಿಲ್ಲ. ಅಪ್ಪಣ್ಣನವರ ಚಲನಚಿತ್ರವಾಗಿದೆ ಎಂದರೆ ಅವರ ಬದುಕು ಮತ್ತು ಶಹನಾಯಿ ವಾದ್ಯ ಎಷ್ಟರ ಮೋಡಿ ಮಾಡಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪಟ್ಟಣಕ್ಕೆ ಎರಡು ಬಾರಿ ವಾದ್ಯಗೋಷ್ಠಿ ನಡೆಸಲು ಬಂದಿದ್ದರೂ ಈ ತರಹ ವೇದಿಕೆ ದೊರೆತಿರಲಿಲ್ಲ. ಈಗ ಮಹಾಸಭಾದವರು ಈ ಕಾರ್ಯ ಮಾಡಿ ನಮ್ಮ ಕುಟುಂಬಕ್ಕೆ ಗೌರವ ಸಲ್ಲಿಸಿದ್ದಾರೆ. ರಾಜ ಮಹಾರಾಜರು ಅಪ್ಪಣ್ಣನವರ ಶಹನಾಯಿ ವಾದನಕ್ಕೆ ಮಾರುಹೋಗಿದ್ದರು ಡಾ. ರಾಜಕುಮಾರರವರು ಅಪ್ಣಣ್ಣನವರ ಪಾತ್ರಕ್ಕೆ ಜೀವ ತುಂಬಿದ್ದರು ಎಂದರು.
ಮಸೂತಿ ಪುರಾಣಿಕಮಠದ ಡಾ.ಶಿವಲಿಂಗಯ್ಯ ಶರಣರು ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಸ್ಕಾರ ಇಲ್ಲದೇ ಇದ್ದರೆ ವ್ಯರ್ಥ. ಮೂಲ ಪರಂಪರೆಯನ್ನು ಯಾರೂ ಬಿಡಬಾರದು. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಮಹಾಸಭಾ ಸಮಾಜಕ್ಕೆ ಪೂರ್ವಜರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ದೊಡ್ಡ ಸಾಧನೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯೂ ಬೇಕು ಎಂದರು.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ ಉದ್ಘಾಟಿಸಿ ಮಾತನಾಡಿ, ಶರಣರ ನಾಡು ಬಸವನಬಾಗೇವಾಡಿ. ಬಸವಣ್ಣನವರ ಜನನದಿಂದ ಮತ್ತಷ್ಟು ಇದರ ಕೀರ್ತಿ ಹೆಚ್ಚಿದೆ. ಕಾಲೇಜುಗಳಲ್ಲಿ ಶರಣರ ಬಗ್ಗೆ ಹೆಚ್ಚು ಕಾರ್ಯಕ್ರಮಗಳು ನಡೆಯಬೇಕು ಎಂದರು. ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ಸಂಗಮ ಮಾತನಾಡಿ, ಸನಾದಿ ಅಪ್ಪಣ್ಣನವರ ವಂಶಜರನ್ನು ವೇದಿಕೆ ಮೂಲಕ ಮತ್ತಷ್ಟು ಪರಿಚಯಿಸಬೇಕು ಎಂಬ ಕಾರಣದಿಂದ ಇಂದು ಅವರ ಮರಿಮೊಮ್ಮಗನನ್ನು ಇಲ್ಲಿಗೆ ಕರೆಯಿಸಿ ಸನ್ಮಾನ ಮಾಡಲಾಗಿದೆ. ಭಾಷಣ ಸ್ಪರ್ಧೆಯಲ್ಲಿ ಉತ್ಸುಕತೆಯಿಂದ ಭಾಗಿಯಾದ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ಘೋಷಿಸಿ, ವಿತರಿಸಿದರು. ಜ್ಞಾನಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎಸ್.ಹೂಗಾರ ಮಾತನಾಡಿದರು.ಪ್ರಾಂಶುಪಾಲ ಎಂ.ಬಿ.ವಗ್ಗರ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾ ಪ್ರ. ಕಾರ್ಯದರ್ಶಿ ಶ್ರೀಶೈಲ ಶಿರಗುಪ್ಪಿ ಸ್ವಾಗತಿಸಿದರು. ಸುರೇಶ ಗಬ್ಬೂರ ನಿರೂಪಿಸಿದರು. ಕೆ.ಎಸ್.ಅವಟಿ ವಂದಿಸಿದರು.