ಯಕ್ಷಗಾನದಂತಹ ಕಲೆಗೆ ಪ್ರೋತ್ಸಾಹ ಅಗತ್ಯ

| Published : May 10 2025, 01:06 AM IST

ಸಾರಾಂಶ

ಇಂದಿನ ಯಾಂತ್ರಿಕೃತ ಜೀವನದಲ್ಲಿ ಭಾರತೀಯ ಕಲೆ-ಸಂಸ್ಕೃತಿಗಳು ನಶಿಸಿ ಹೋಗುತ್ತಿವೆ, ಯುವ ಸಮೂಹ ಟಿವಿ ಮೊಬೈಲ್‌ಗಳಿಗೆ ಮಾರು ಹೋಗಿದ್ದಾರೆ

ಹರಪನಹಳ್ಳಿ: ಸಂಸ್ಕಾರಯುತ ಸಮಾಜ ನಿರ್ಮಾಣವಾಗಲು ಯಕ್ಷಗಾನದಂತಹ ಕಲೆಗೆ ಪ್ರೋತ್ಸಾಹ ಅಗತ್ಯವಿದೆ ಎಂದು ನಿವೃತ್ತ ಉಪನ್ಯಾಸಕ ಡಾ. ಜಿ.ಬಿ.ನಾಗನಗೌಡ ಹೇಳಿದರು.

ಪಟ್ಟಣದ ಶಂಕರಮಠದ ಬಳಿಯಿರುವ ವಿಜೇತ ಕಂಪ್ಯೂಟರ್ ಹಾಲ್‌ನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಭರತ ರಂಗ ಟ್ರಸ್ಟ್‌ ಸಹಕಾರದಲ್ಲಿ ನಡೆಯುತ್ತಿರುವ ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದಿನ ಯಾಂತ್ರಿಕೃತ ಜೀವನದಲ್ಲಿ ಭಾರತೀಯ ಕಲೆ-ಸಂಸ್ಕೃತಿಗಳು ನಶಿಸಿ ಹೋಗುತ್ತಿವೆ, ಯುವ ಸಮೂಹ ಟಿವಿ ಮೊಬೈಲ್‌ಗಳಿಗೆ ಮಾರು ಹೋಗಿದ್ದಾರೆ, ಇದರಿಂದ ಬದುಕು ಮೆಕಾನಿಕಲ್ ರೀತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಂಗಭೂಮಿ ಕ್ಷೇತ್ರದಲ್ಲಿ ನಾಟಕ ಬಿಟ್ಟರೆ ಅತ್ಯಂತ ರಮ್ಯವಾಗಿ ಪ್ರದರ್ಶನಗೊಳ್ಳುವುದೇ ಯಕ್ಷಗಾನ ಕಲೆ ಇಂತಹ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಈ ನಿಟ್ಟಿನಲ್ಲಿ ಸ್ಥಳೀಯ ಭರತ ರಂಗ ಟ್ರಸ್ಟ್‌ ತಂಡ ಮುಂದಾಗಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಎ.ಆರ್.ಪುಟ್ಟಸ್ವಾಮಿ, ನಮ್ಮ ಮನಸ್ಸಿಗೆ ಉಲ್ಲಾಸ ಮತ್ತು ಆತ್ಮಸ್ಥೈರ್ಯ ತುಂಬುವ ಶಕ್ತಿ ಕಲೆಗಿದೆ, ಅಷ್ಟೆ ಅಲ್ಲದೇ ನಮ್ಮ ಆರೋಗ್ಯ ಸಹ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಕಲೆಯಲ್ಲಿ ಹಲವಾರು ವ್ಯತ್ಯಾಸ ಕಾಣುತ್ತವೆ, ರಾಮಾಯಣ ಮಹಾಭಾರತದಂತಹ ಕಥೆ ಹೊಲುವ ದೃಶ್ಯ ನಾವು ಯಕ್ಷಗಾನದಲ್ಲಿ ಕಾಣಬಹುದು ಎಂದರು.

ಭರತ ರಂಗ ಟ್ರಸ್ಟ್‌ ಮುಖ್ಯಸ್ಥ ಆನಂದ ಕರುವಿ ಮಾತನಾಡಿ, ಯಕ್ಷಗಾನ ಕಲೆ ಕರಾವಳಿ ಭಾಗದಲ್ಲಿ ಹೆಚ್ಚು ಆರಾಧಿಸುತ್ತಾರೆ, ಈ ಭಾಗದಲ್ಲಿ ಕಲೆಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ ತರಬೇತಿದಾರ ಗುಡ್ಡಪ್ಪ, ಪವಿತ್ರ ಸೇರಿದಂತೆ ಶಿಬಿರಾರ್ಥಿಗಳಿದ್ದರು.