ಹೆಚ್ಚು ಬಳಕೆಯಲ್ಲಿರುವ, ಶೀಘ್ರ ಜ್ಞಾನ ಹಂಚುತ್ತಿರುವ ಕೃತಕ ಬುದ್ಧಿಮತ್ತೆ

| Published : May 15 2025, 01:31 AM IST

ಹೆಚ್ಚು ಬಳಕೆಯಲ್ಲಿರುವ, ಶೀಘ್ರ ಜ್ಞಾನ ಹಂಚುತ್ತಿರುವ ಕೃತಕ ಬುದ್ಧಿಮತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಶಾಲೆ-ಕಾಲೇಜು ಕಲಿಯುವಾಗ ಬಂದ ಕಂಪ್ಯೂಟರ್ ದೊಡ್ಡ ಡಿಜಿಟಲ್‌ ತಂತ್ರಜ್ಞಾನ ಎನಿಸಿತ್ತು. ಮುಂದುವರೆದು ಸಾಕಷ್ಟು ತಂತ್ರಜ್ಞಾನಗಳು ಬಂದಿವೆ

ಧಾರವಾಡ: ಆಧುನಿಕ ಯುಗದಲ್ಲಿ ವೇಗವಾಗಿ ಹೆಚ್ಚು ಬಳಕೆಯಲ್ಲಿರುವ ಹಾಗೂ ಶೀಘ್ರವಾಗಿ ಜ್ಞಾನ ಹಂಚುತ್ತಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಈ ಕೃತಕ ಬುದ್ದಿಮತ್ತೆ (ಎಐ) ಕ್ರಿಯಾಶೀಲವಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಛಾಪು ಮೂಡಿಸಿದೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.

ಇಲ್ಲಿಯ ರಾಯಾಪುರದ ಎಸ್‌ಜೆಎಂವಿ ಮಹಾಂತ ಕಾಲೇಜಿನಲ್ಲಿ ಗುರುವಾರ ನಡೆದ ಉನ್ನತ ಶಿಕ್ಷಣದಲ್ಲಿ ಡಿಜಿಟಲ್‌ ಕ್ರಾಂತಿ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ನಾವು ಶಾಲೆ-ಕಾಲೇಜು ಕಲಿಯುವಾಗ ಬಂದ ಕಂಪ್ಯೂಟರ್ ದೊಡ್ಡ ಡಿಜಿಟಲ್‌ ತಂತ್ರಜ್ಞಾನ ಎನಿಸಿತ್ತು. ಮುಂದುವರೆದು ಸಾಕಷ್ಟು ತಂತ್ರಜ್ಞಾನಗಳು ಬಂದಿವೆ. ಆದರೆ, ಸದ್ಯ ಇರುವ ಐಎ ತಂತ್ರಜ್ಞಾನ ಡಿಜಿಟಲ್‌ ಯುಗದಲ್ಲಿಯೇ ಅತ್ಯಂತ ಎತ್ತರದ ಸಂಶೋಧನೆ ಎನ್ನಬಹುದು. ತೀರಾ ಕಠಿಣ ಎನಿಸಿರುವ ಶಿಕ್ಷಣ ಸೇರಿ ಎಲ್ಲ ರೀತಿಯ ಸವಾಲುಗಳಿಗೆ ಕ್ಷಣ ಮಾತ್ರದಲ್ಲಿ ಪರಿಹಾರ ಒದಗಿಸುವ ಕಾರ್ಯ ಎಐ ಮಾಡುತ್ತಿದೆ. ಭಾರತದಲ್ಲಿ ಈ ಎಐ ಆಧಾರಿತ ಡಿಜಿಟಲ್‌ ಶಿಕ್ಷಣ ಆರಂಭವಾಗಿದ್ದು, ಹಲವು ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಈ ತಂತ್ರಜ್ಞಾನ ಅಳವಡಿಸಿಕೊಂಡು ತಮ್ಮ ಕಾರ್ಯ ಸುಗಮಗೊಳಿಸಿಕೊಂಡಿವೆ ಎಂದರು.

ಬಳಸುವ ಕಾರ್ಯ ಗೊತ್ತಿರಲಿ:

ಎಐ ಮೂಲಕ ಎಂತಹ ಮಾಹಿತಿ ಸಹ ಪಡೆಯಬಹುದು. ಯಾವ ಮಾಹಿತಿ ಬೇಕು ಎಂಬುದನ್ನು ಸರಿಯಾಗಿ ಅದಕ್ಕೆ ಹೇಳುವ ಕಲೆ ಮಾತ್ರ ನಮಗೆ ಗೊತ್ತಿರಬೇಕು. ಕಲಿಯುವ ವಿಧಾನ ಬದಲಾಯಿಸಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹೆಚ್ಚು ಕೃತಕ ಬುದ್ದಿಮತ್ತೆ ಬಳಕೆಯಾಗುತ್ತಿದೆ. ಯಾವುದೇ ವಿಷಯದ ಬಗ್ಗೆ ಅಕ್ಷರಗಳ ಅಥವಾ ಬಾಯಿ ಮಾತು ಅಥವಾ ವಿಡಿಯೋ ಮೂಲಕವೂ ಈ ತಂತ್ರಜ್ಞಾನ ಕರಾರುವಕ್ಕಾಗಿ ಮಾಹಿತಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣದ ಕಠಿಣ ಸವಾಲುಗಳನ್ನು ಐಎ ಸುಲಭವಾಗಿ ಬಗೆಹರಿಸುತ್ತದೆ. ಉನ್ನತ ಶಿಕ್ಷಣದಲ್ಲಿ ಇತ್ತೀಚೆಗೆ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಿಗೆ, ಶಿಕ್ಷಕರು-ಉಪನ್ಯಾಸಕರಿಗೆ ಈ ತಂತ್ರಜ್ಞಾನ ಪ್ರಯೋಜನವಾಗುತ್ತಿದ್ದು, ಪಠ್ಯಕ್ರಮ ರಚನೆ, ಪಠ್ಯಕ್ಕೆ ಬೇಕಾದ ಮಾಹಿತಿ, ವರ್ಚುವಲ್‌ ಬೋಧನೆ ಹಾಗೂ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲೂ ಎಐ ತಂತ್ರಜ್ಞಾನ ಬಳಸುವಷ್ಟು ಕರಾರುವಕ್ಕಾಗಿದೆ ಎಂದು ಪ್ರಾತ್ಯಕ್ಷಿಕೆ ಮೂಲಕ ರವಿ ಹೆಗಡೆ ವಿವರಿಸಿದರು.

ಸಾಕಷ್ಟು ಆ್ಯಪ್‌ಗಳಿವೆ:

ಸದ್ಯದ ತಂತ್ರಜ್ಞಾನ ವೇಗ ನೋಡಿದರೆ ಹತ್ತು ವರ್ಷಗಳಲ್ಲಿ ಕೈಯಿಂದ ಅಕ್ಷರಗಳನ್ನು ಬರೆಯುವುದನ್ನು ನಿಲ್ಲಿಸಿ ನೇರವಾಗಿ ಕಂಪ್ಯೂಟರ್‌, ಮೊಬೈಲ್ ಗಳಲ್ಲಿ ಟೈಪಿಂಗ್‌ ಮಾಡಲಿದ್ದಾರೆ ಎಂದ ಅವರು, ಐಎನಲ್ಲಿನ ಚಾರ್ಟ ಜಿಪಿಟಿ ಬರೀ ಸೂಜಿಮನೆ ಮಾತ್ರ. ಮೈಕ್ರೋಸಾಫ್ಟ ಕಾಪಿಲಾಟ್‌, ಗ್ರಾಮರಲಿ, ಗ್ರೇಡಸ್ಕೋಪ, ಕ್ಯಾನವಾಸ್‌, ಟರನೈಟಿನ್‌ ಅಂತಹ ಹಲವು ಆಪ್‌ಗಳ ಮೂಲಕ ತರಹೇವಾರಿ ಕೆಲಸಗಳನ್ನು ಈ ತಂತ್ರಜ್ಞಾನ ಹೊಂದಿದೆ. ಒಟ್ಟಾರೆ, ಡಿಜಿಟಲ್‌ ತಂತ್ರಜ್ಞಾನ ವ್ಯಕ್ತಿಯ ಜೀವನದಲ್ಲಿ ನಿಧಾನವಾಗಿ ಆವರಿಸುತ್ತಿದ್ದು, ಇದನ್ನು ಜ್ಞಾನ ವಿಸ್ತರಣೆ ಮಾತ್ರ ಬಳಸಬೇಕು. ಅಶ್ಲೀಲ ವಿಡಿಯೋ, ಸೈಬರ್‌ ಕ್ರೈಂ, ಮೊಬೈಲ್‌ ಹ್ಯಾಕ್‌ ಅಂತಹ ಕಾರ್ಯಕ್ಕೆ ಬಳಸಲು ಸಹ ಐಎ ಬಳಕೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.

ಕಲಿತರೂ ಅನಕ್ಷರಸ್ಥರು:

ಸಮ್ಮೇಳನಕ್ಕೆ ಚಾಲನೆ ನೀಡಿದ ಕರ್ನಾಟಕ ವಿವಿ ಪ್ರಭಾರ ಕುಲಪತಿ ಪ್ರೊ.ಜಯಶ್ರೀ ಎಸ್‌., ಕೋವಿಡ್‌ -19 ನಂತರ ಶಿಕ್ಷಣದಲ್ಲಿ ಹೆಚ್ಚು ಡಿಜಿಟಲ್‌ ತಂತ್ರಜ್ಞಾನ ಹಾಸುಹೊಕ್ಕಾಯಿತು. ಯಾವ ಹಂತದ ಶಿಕ್ಷಣ ಕಲಿತು ಡಿಜಿಟಲ್‌ ಜ್ಞಾನ ಹೊಂದದೇ ಇದ್ದರೆ ಆತ ಅನಕ್ಷರಸ್ಥ ಎನ್ನುವಂತಾಗಿದೆ. ಈಗಿನ ವಿದ್ಯಾರ್ಥಿಗಳು ಜಾಗತಿಕವಾಗಿ ಸ್ಪರ್ಧೆಯೊಡ್ಡಲು ಕಂಪ್ಯೂಟರ್‌, ಮೊಬೈಲ್, ಎಐ ತಂತ್ರಜ್ಞಾನದ ಮಾಹಿತಿ ಇರಲೇಬೇಕು. ಅಂದ ಮಾತ್ರಕ್ಕೆ ಡಿಜಿಟಲ್‌ಗೆ ಅಂಟಿಕೊಂಡು ಇರದೇ ಕಾಳಜಿಯಿಂದ ಬಳಸಲು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸಂಯೋಜಕ ಪ್ರೊ.ಜೆ.ಪಿ.ಯಂಡಿಗೇರಿ, ಪ್ರೊ. ಪುಷ್ಪಾ ಬಸನಗೌಡರ, ಪ್ರೊ. ಸಿ.ಕೆ. ಹುಬ್ಬಳ್ಳಿ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಸವರಾಜ ಆನೆಗುಂದಿ ವೇದಿಕೆ ಮೇಲಿದ್ದರು.

ಅಂದ ವಿದ್ಯಾರ್ಥಿ ಅಯ್ಯಪ್ಪ ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ನಂತರ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಜಿಟಲ್‌ ತಂತ್ರಜ್ಞಾನ ಕುರಿತು ಪ್ರಬಂಧ ಮಂಡಿಸಿದರು. ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಂಜೀವ ಮಾಲಗತ್ತಿ, ಪತ್ರಕರ್ತ ಬಸವರಾಜ ಹೊಂಗಲ ತಾಂತ್ರಿಕ ಗೋಷ್ಠಿಗಳನ್ನು ನಿರ್ವಹಿಸಿದರು.