ಬಯಲಾಟ ಕ್ಷೇತ್ರ ಶ್ರೀಮಂತಗೊಳಿಸಿದ ಕಲಾವಿದೆ ಸುಜಾತಮ್ಮ

| Published : Oct 28 2023, 01:15 AM IST

ಬಯಲಾಟ ಕ್ಷೇತ್ರ ಶ್ರೀಮಂತಗೊಳಿಸಿದ ಕಲಾವಿದೆ ಸುಜಾತಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಸುಜಾತಮ್ಮ ಅವರು ಬಳ್ಳಾರಿ ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದೆಯಷ್ಟೇ ಅಲ್ಲ; ಬಯಲಾಟ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಅಪರೂಪದ ಕಲಾವಿದೆಯೂ ಹೌದು
ಕೆ.ಎಂ. ಮಂಜುನಾಥ್ ಕನ್ನಡಪ್ರಭ ವಾರ್ತೆ ಬಳ್ಳಾರಿ ಗಂಡುಮೆಟ್ಟಿನ ಕಲೆ ಎಂದೇ ಬಣ್ಣಿಸುವ `ಬಯಲಾಟ'''' ಕಲಾ ಪ್ರಕಾರ ಪ್ರಗತಿಗೆ ಬದುಕಿನುದ್ದಕ್ಕೂ ಸವೆಸಿದ ನಗರದ ಹಿರಿಯ ರಂಗಭೂಮಿ ಕಲಾವಿದೆ ಸುಜಾತಮ್ಮ ಅವರಿಗೆ ಈ ಬಾರಿಯ ಪ್ರತಿಷ್ಠಿತ ಶ್ರೀ ವಾಲ್ಮೀಕಿ ಪ್ರಶಸ್ತಿ ಸಂದಿದೆ. ಪ್ರಶಸ್ತಿ ₹5 ಲಕ್ಷ ನಗದು ಹಾಗೂ 20 ಗ್ರಾಂ ಚಿನ್ನದ ಪದಕ ಹಾಗೂ ಪುರಸ್ಕಾರ ಹೊಂದಿದೆ. ಅ. 28ರಂದು ಬೆಂಗಳೂರಿನಲ್ಲಿ ಜರುಗುವ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸುಜಾತಮ್ಮನ ಬಣ್ಣದ ಬದುಕು: ಸುಜಾತಮ್ಮ ಅವರು ಬಳ್ಳಾರಿಗೆ ಅಂಟಿಕೊಂಡಂತಿರುವ ಆಂಧ್ರಪ್ರದೇಶದ ಆಲೂರು ತಾಲೂಕಿನ ಕುಂದಗುರ್ತಿ ಗ್ರಾಮದವರು. ಬಳ್ಳಾರಿ ನಗರದಲ್ಲಿ ಕುಟುಂಬ ಸದಸ್ಯರೊಂದಿಗೆ ನೆಲೆಯೂರಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಬಲ್ಲ ದ್ವಿಭಾಷೆ ಕಲಾವಿದೆ. 8ನೇ ವಯಸ್ಸಿನಲ್ಲಿ ತಂದೆಯೊಂದಿಗೆ ಹಳ್ಳಿಹಳ್ಳಿಗೆ ತೆರಳಿ ಭಜನೆ ಹಾಡುಗಳನ್ನು ಹಾಡುತ್ತಾ ಕಲಾಸೇವೆಯಲ್ಲಿ ತೊಡಗಿಸಿಕೊಳ್ಳುವ ಇವರು 12ನೇ ವಯಸ್ಸಿನಲ್ಲಿಯೇ `ಗಿರಿಜಾ ಕಲ್ಯಾಣ'''' ಬಯಲಾಟದ ಮೂಲಕ ರಂಗಪ್ರವೇಶಿಸಿ, ರತಿದೇವಿ ಪಾತ್ರದಲ್ಲಿ ಮಂತ್ರಮುಗ್ಧಗೊಳಿಸುವಂತೆ ಅಭಿನಯಿಸಿ ಸೈ ಎನಿಸಿಕೊಳ್ಳುತ್ತಾರೆ. ಬಳಿಕ ಸುಜಾತಮ್ಮನವರ ಬಣ್ಣದ ಬದುಕಿನ ಪಯಣ ಮುಂದುವರಿಯುತ್ತದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶದ ಹತ್ತಾರು ಹಳ್ಳಿಗಳಲ್ಲಿ ಬಯಲಾಟ ಪ್ರದರ್ಶನ ನೀಡಿರುವ ಸುಜಾತಮ್ಮನವರು ತಮ್ಮ ಸುದೀರ್ಘ ರಂಗಸೇವಾ ಅವಧಿಯಲ್ಲಿ 5 ಸಾವಿರಕ್ಕೂ ಹೆಚ್ಚು ಬಯಲಾಟ ಪ್ರದರ್ಶನಗಳನ್ನು ನೀಡಿ, ರಂಗಪ್ರೀತಿ ಮೆರೆಯುತ್ತಾರೆ. ರಾಮಾಯಣ ಕಥಾ ಪ್ರಸಂಗದಲ್ಲಿ ಸೀತೆ, ಮಂಡೋದರಿ, ರತಿ ಕಲ್ಯಾಣದಲ್ಲಿ ದ್ರೌಪದಿ, ಪಾರ್ಥವಿಜಯದಲ್ಲಿ ದ್ರೌಪದಿ, ಗಿರಿಜಾ ಕಲ್ಯಾಣದಲ್ಲಿ ರತಿ, ಸಖಿ, ದುಶ್ಯಾಸನ ವಧೆಯಲ್ಲಿ ದ್ರೌಪದಿ ಸೇರಿದಂತೆ ರಾಮಾಯಣ ಹಾಗೂ ಮಹಾಭಾರತದಲ್ಲಿ ಬರುವ ಮುಖ್ಯಪಾತ್ರಗಳನ್ನು ಅಭಿನಯಿಸಿ ಬಯಲಾಟಕ್ಕೆ ಮೆರುಗು ನೀಡುವ ಸುಜಾತಮ್ಮ ಅವರು ದ್ರೌಪದಿ ಪಾತ್ರದಲ್ಲಿ ಯಾರೂ ಸರಿಗಟ್ಟಲಾರದಂತೆ ಅಭಿನಯಿಸುವ ಕಲಾ ಚತುರೆ ಎಂದೇ ಖ್ಯಾತರಾಗಿದ್ದವರು. ಅಪರೂಪದ ಕಲಾವಿದೆ: ಸುಜಾತಮ್ಮ ಅವರು ಬಳ್ಳಾರಿ ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದೆಯಷ್ಟೇ ಅಲ್ಲ; ಬಯಲಾಟ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಅಪರೂಪದ ಕಲಾವಿದೆಯೂ ಹೌದು. 77ನೇ ಇಳಿ ವಯಸ್ಸಿನಲ್ಲೂ ರಂಗಾಸಕ್ತಿಯನ್ನು ಕುಗ್ಗಿಸಿಕೊಳ್ಳದೆ ಯುವ ಕಲಾವಿದೆಯರಿಗೆ ಪ್ರೇರಣೆಯಾದವರು. ರಂಗನಿರ್ದೇಶಕ ಮುದ್ದಟನೂರು ತಿಪ್ಪೇಸ್ವಾಮಿ ಅವರೇ ಹೇಳುವಂತೆ, ಸುಜಾತಮ್ಮನಂಥ ಕಲಾವಿದೆಯರು ತೀರಾ ಅಪರೂಪ. ಬಯಲಾಟದ ಮೂಲವನ್ನು ಜತನದಿಂದ ಕಾಪಾಡಿಕೊಂಡು ಬಂದಿರುವ ವಿಶಿಷ್ಟ ಕಲಾವಿದೆ. ಬಳ್ಳಾರಿ ಜಿಲ್ಲೆಯ ರಂಗಭೂಮಿ ವಲಯವನ್ನು ಸಿರಿವಂತಗೊಳಿಸಿದವರ ಪೈಕಿ ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡರು, ಶಿಡಗಿನಮೊಳ ಚಂದ್ರಯ್ಯ, ಬೆಳಗಲ್ ವೀರಣ್ಣ, ಸುಭದ್ರಮ್ಮ ಮನ್ಸೂರ್ ಅವರ ನಂತರ ಪ್ರಮುಖ ಸಾಲಿನಲ್ಲಿ ಹಿರಿಯ ರಂಗಕಲಾವಿದೆ ಸುಜಾತಮ್ಮನವರು ಸೇರುತ್ತಾರೆ. ಅವರ ರಂಗಸೇವೆ ಅನನ್ಯವಾದದ್ದು ಹಾಗೂ ವೈಶಿಷ್ಟ್ಯವಾದದ್ದು ಎಂದು ಸ್ಮರಿಸುತ್ತಾರೆ. ಬಾಕ್ಸ್‌... ಹಲವು ಪ್ರಶಸ್ತಿಗೆ ಭಾಜನ... ಸುಜಾತಮ್ಮನವರ ರಂಗಸೇವೆಯನ್ನು ಗುರುತಿಸಿ 1997ನೇ ಸಾಲಿನಲ್ಲಿ ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2007- 08ನೇ ಸಾಲಿನಲ್ಲಿ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ 2016- 17ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕೋಟ್‌... ಶ್ರೀ ವಾಲ್ಮೀಕಿ ಮಹರ್ಷಿ ಪ್ರಶಸ್ತಿಗೆ ರಾಜ್ಯ ಸರ್ಕಾರ ನನ್ನನ್ನು ಆಯ್ಕೆ ಮಾಡಿದ್ದು ಹೆಚ್ಚು ಸಂತಸ ತಂದಿದೆ. ಇದು ಬರೀ ನನಗೆ ಸಿಕ್ಕ ಗೌರವವಲ್ಲ. ಇಡೀ ಬಯಲಾಟ ಕ್ಷೇತ್ರಕ್ಕೆ ಸಿಕ್ಕ ಗೌರವ ಎಂದು ಭಾವಿಸಿದ್ದೇನೆ. ನನ್ನನ್ನು ಬೆಳೆಸಿ, ಹಾರೈಸಿದ ಎಲ್ಲ ಬಯಲಾಟ ಕಲಾವಿದರು ಹಾಗೂ ರಂಗಾಸಕ್ತರಿಗೆ ಈ ಘಳಿಗೆಯಲ್ಲಿ ಅನಂತ ನಮನಗಳನ್ನು ಸಲ್ಲಿಸುತ್ತೇನೆ. ಸುಜಾತಮ್ಮ, ಹಿರಿಯ ಬಯಲಾಟ ಕಲಾವಿದೆ, ಬಳ್ಳಾರಿ ( 27 ಬಿಆರ್‌ವೈ 3 ) ಹಿರಿಯ ರಂಗಭೂಮಿ ಕಲಾವಿದೆ ಸುಜಾತಮ್ಮ. 27 ಬಿಆರ್‌ವೈ 4 ದ್ರೌಪದಿ ಪಾತ್ರದಲ್ಲಿ ಸುಜಾತಮ್ಮ