ಸಾರಾಂಶ
ಕೃಷಿ ಸಮಸ್ಯೆಗಳಿಗೆ ಪರಿಸರದಲ್ಲಿ ಲಭ್ಯವಿರುವ ಅರಣ್ಯ ಕೃಷಿಯಿಂದ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಅಗತ್ಯ ಇದೆ.
ಕನ್ನಡಪ್ರಭ ವಾರ್ತೆ ಮೈಸೂರು
ಪರಿಸರದಲ್ಲಿನ ಹಲವು ಮಾಲಿನ್ಯ ಕಾರಣಗಳಿಂದ ಜಾಗತಿಕವಾಗಿ ಉಂಟಾಗುತ್ತಿರುವ ಹವಾಮಾನ ಬದಲಾವಣೆ ಪರಿಣಾಮಗಳು ಎಲ್ಲಾ ಕ್ಷೇತ್ರಗಳಿಗೂತಾಗಿದೆ ಎಂದು ಅರುಣಾಚಲ ವಿವಿ ವಿಶ್ರಾಂತ ಕುಲಪತಿ ಪ್ರೊ.ಬಿ. ಮೋಹನ್ ಕುಮಾರ್ ತಿಳಿಸಿದರು.ಮಾನಸ ಗಂಗೋತ್ರಿಯ ಸಸ್ಯ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆ ಹಾಗೂ ಪರಿಸರ ಜೀವವಿಜ್ಞಾನ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಸಮಸ್ಯೆಗಳಿಗೆ ಪರಿಸರದಲ್ಲಿ ಲಭ್ಯವಿರುವ ಅರಣ್ಯ ಕೃಷಿಯಿಂದ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಅಗತ್ಯ ಇದೆ. ಪರಿಸರದಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಬೇಕಾಬಿಟ್ಟಿಯಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಅರಣ್ಯಗಳು ನಶಿಸಿ ಹೋಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಭತ್ತ ಮತ್ತಿತರ ಕೃಷಿಯಿಂದ ಹಸಿರುಮನೆ ಅನಿಲಗಳು ಪರಿಸರಕ್ಕೆ ಹೆಚ್ಚು ಬಿಡುಗಡೆ ಆಗುತ್ತಿದೆ. ಇದಕ್ಕೆ ಪರಿಹಾರವಾಗಿ ಸುಧಾರಿತ ತಂತ್ರಜ್ಞಾನ ಬಳಸಿಕೊಳ್ಳಬೇಕು. ಹರಿಯಾಣ ಹಾಗೂ ಪಂಜಾಬ್ರಾಜ್ಯಗಳಲ್ಲಿ ಫಸಲು ಕುಯಿಲಿನ ನಂತರ ಕೃಷಿ ತ್ಯಾಜ್ಯವನ್ನು ಸುಡುವ ಪರಿಪಾಠ ಬೆಳೆದುಕೊಂಡು ಬಂದಿದೆ. ಇದರಿಂದ ಉತ್ತರ ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚಿದೆ ಎಂದು ಉದಾಹರಣೆ ಸಹಿತಿ ವಿವರಿಸಿದರು.
ದೆಹಲಿ ವಿವಿಯ ನಿವೃತ್ತ ಅಧ್ಯಾಪಕ ಪ್ರೊ.ಕೆ.ಆರ್. ಶಿವಣ್ಣ, ಕಾಸರಗೋಡು ಕೇರಳ ಕೇಂದ್ರೀಯ ವಿವಿಯ ಪ್ರೊ. ಸುಧೀಶ ಜೋಗಯ್ಯ, ಬೆಂಗಳೂರು ವಿವಿಯ ಪ್ರೊ.ಎಲ್. ರಾಜಣ್ಣ, ಮೈಸೂರು ವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ಪ್ರೊ.ಡಿ. ಸೋನೆರ್ ನಂದಪ್ಪ, ವಿಭಾಗದ ಮುಖ್ಯಸ್ಥ ಪ್ರೊ. ರಾಜಕುಮಾರ್ ಎಚ್. ಗಾರಂಪಲ್ಲಿ, ಪ್ರೊ.ಕೆ.ಎನ್. ಅಮೃತೇಶ್, ಪ್ರೊ.ಎಂ.ಎಸ್. ಶಾರದಾ ಇದ್ದರು.