ಸಾರಾಂಶ
ನಟ ದರ್ಶನ್ ನನ್ನ ಹುಟ್ಟುಹಬ್ಬದ ದಿನ ಬಡವರಿಗೆ, ಅನಾಥಾಶ್ರಮಕ್ಕೆ ಸಹಾಯ ಮಾಡಿ ಅಥವಾ ಶಾಲೆ ಮಕ್ಕಳಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಅವರ ಕರೆಯಂತೆ ಡಿ.ಕಂಪನಿ ದರ್ಶನ್ ಅಭಿಮಾನಿಗಳ ಸಂಘದಿಂದ ಎರಡು ಸರ್ಕಾರಿ ಶಾಲೆಗಳಿಗೆ ಸಹಾಯ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ನಟ ದರ್ಶನ್ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಹಾರ ಹಾಕುವ ಬದಲು, ಶಾಲಾ ಮಕ್ಕಳಿಗೆ ಪುಸ್ತಕ ನೀಡಿ ಎಂದು ಕರೆ ನೀಡಿದ್ದರು. ಅವರ ಆಶಯದಂತೆ ಶಾಲೆಗಳಿಗೆ ಬ್ಯಾಗ್, ಪುಸ್ತಕ ನೀಡುತ್ತಿದ್ದೇವೆ ಎಂದು ಡಿ.ಕಂಪನಿ ದರ್ಶನ್ ಅಭಿಮಾನಿಗಳ ಸಂಘದ ನರಸಿಂಹರಾಜಪುರ ತಾಲೂಕು ಘಟಕದ ಅಧ್ಯಕ್ಷ ನಿರಂಜನ ಗೌಡ ತಿಳಿಸಿದರು.ತಾಲೂಕಿನ ಸೀಗುವಾನಿ ಸಹಿಪ್ರಾ ಶಾಲೆ ಹಾಗೂ ಹಿಳುವಳ್ಳಿ ಸರ್ಕಾರಿ ಶಾಲೆಗಳಿಗೆ ತಾಲೂಕು ಘಟಕದಿಂದ ಶಾಲೆಗಳ ಎಲ್ಲಾ ಮಕ್ಕಳಿಗೆ ಬ್ಯಾಗ್, ನೋಟ್‌ಬುಕ್, ಪೆನ್, ಪೆನ್ಸಿಲ್, ಪೌಚ್ ನೀಡಿ ಮಾತನಾಡಿದರು. ಕಳೆದ ಒಂದು ವರ್ಷದಿಂದಲೂ ನಟ ದರ್ಶನ್ ನನ್ನ ಹುಟ್ಟುಹಬ್ಬದ ದಿನ ಬಡವರಿಗೆ, ಅನಾಥಾಶ್ರಮಕ್ಕೆ ಸಹಾಯ ಮಾಡಿ ಅಥವಾ ಶಾಲೆ ಮಕ್ಕಳಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಅವರ ಕರೆಯಂತೆ ಡಿ.ಕಂಪನಿ ದರ್ಶನ್ ಅಭಿಮಾನಿಗಳ ಸಂಘದಿಂದ ಎರಡು ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡಿದ್ದೇವೆ. ಸೀಗುವಾನಿ ಶಾಲೆ ಮುಖ್ಯೋಪಾಧ್ಯಾಯರು ಶಾಲೆಗೆ ಆಟದ ಮೈದಾನ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಘದಿಂದಮೈದಾನ ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಸೀಗುವಾನಿ ಶಾಲೆ ಮುಖ್ಯೋಪಾಧ್ಯಾಯ ಮಂಜಪ್ಪ ಮಾತನಾಡಿ, ದರ್ಶನ್ ಅಭಿಮಾನಿ ಸಂಘದವರು ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಮಕ್ಕಳಿಗೆ ಸಹಾಯ ಮಾಡಿರುವುದು ಉತ್ತಮ ಕಾರ್ಯ. ದರ್ಶನ್ ಇನ್ನಷ್ಟು ಉತ್ತಮ ಚಿತ್ರಗಳಲ್ಲಿ ನಟಿಸಲಿ. ದೇವರು ಅವರಿಗೆ ಆರೋಗ್ಯ ಕೊಡಲಿ ಎಂದರು.ಈ ವೇಳೆ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಕೇಕ್ ಕಟ್ ಮಾಡಿದರು. ಮಕ್ಕಳಿಗೆ ಬ್ಯಾಗ್ ಹಾಗೂ ಇತರ ಶಾಲಾ ಪರಿಕರ ವಿತರಿಸಿದರು.