ಸಿಎಂ ಬಳಿ ನಾನು ಅತ್ತಿದ್ದೇನೆಂತೆ, ನಾವು ಸೆಡ್ಡು ಹೊಡೆಯೋರು: ಶಾಸಕ ಡಾ.ಶಿವಶಂಕರಪ್ಪ

| Published : Aug 01 2024, 12:22 AM IST

ಸಿಎಂ ಬಳಿ ನಾನು ಅತ್ತಿದ್ದೇನೆಂತೆ, ನಾವು ಸೆಡ್ಡು ಹೊಡೆಯೋರು: ಶಾಸಕ ಡಾ.ಶಿವಶಂಕರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜಿಂಕೆ ಕೊಂಬು ಪತ್ತೆಯಾದ ವೇಳೆ ನಾನು ಮುಖ್ಯಮಂತ್ರಿ ಬಳಿ ಅತ್ತಿದ್ದೇನೆಂದು ಮಾಜಿ ಸಂಸದರು ಹೇಳಿದ್ದಾರೆ. ನಾವು ಅಳುವವರಲ್ಲ, ಸೆಡ್ಡು ಹೊಡೆಯುವವರು ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಅವರು ಅಳಿಯ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರಗೆ ದಾವಣಗೆರೆಯಲ್ಲಿ ಟಾಂಗ್ ನೀಡಿದ್ದಾರೆ.

- ಇನ್ನು ಮುಂದೆ ನಮ್ಮ ಬಗ್ಗೆ ಎಚ್ಚರಿಕೆಯಿಂದ ಮಾತಾಡ್ಲಿ

- ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರಗೆ ಎಸ್‌ ಎಸ್‌ ಗುಟುರು - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಂಕೆ ಕೊಂಬು ಪತ್ತೆಯಾದ ವೇಳೆ ನಾನು ಮುಖ್ಯಮಂತ್ರಿ ಬಳಿ ಅತ್ತಿದ್ದೇನೆಂದು ಮಾಜಿ ಸಂಸದರು ಹೇಳಿದ್ದಾರೆ. ನಾವು ಅಳುವವರಲ್ಲ, ಸೆಡ್ಡು ಹೊಡೆಯುವವರು ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಅವರು ಅಳಿಯ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರಗೆ ಟಾಂಗ್ ನೀಡಿದರು.

ನಗರದ ದೂಡಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಲ್ಲೇಶ್ವರ ಮಿಲ್‌ನಲ್ಲಿ ಜಿಂಕೆ ಕೊಂಬು ಪತ್ತೆ ಪ್ರಕರಣದ ವೇಳೆ ನಾನು ಮುಖ್ಯಮಂತ್ರಿ ಬಳಿ ಅತ್ತೆ ಅಂತಾ ಹೇಳಿದ್ದವರು ಅರ್ಥ ಮಾಡಿಕೊಳ್ಳಬೇಕು. ನಾವು ಅಳುವವರಲ್ಲ, ಸೆಡ್ಡು ಹೊಡೆಯೋರು ಎಂದರು.

ನನಗೀಗ 93 ವರ್ಷ ವಯಸ್ಸು. 72 ವರ್ಷದವನು ನನಗೆ ಬುದ್ಧಿ ಹೇಳಲಿಕ್ಕೆ ಬರುತ್ತಾನೆ. ಇನ್ನು ಮುಂದೆ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ಅಂತಾ ನನ್ನ ಅಳಿಯನಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ನಾವು ಅವನಿಗಿಂತ ಮೊದಲೇ ಶ್ರೀಮಂತರು. ಭೀಮಸಮುದ್ರದಲ್ಲಿ ಅಡಕೆ ಮಾರಿ, ಲೆಕ್ಕ ಇಲ್ಲದಂತೆ ಸೇಲ್ಸ್‌ ಟ್ಯಾಕ್ಸ್ ತಪ್ಪಿಸಿದವರು, ದಾವಣಗೆರೆಯಲ್ಲಿ ಸಂಬಂಧಿಸದ ಆಸ್ತಿ ಹೊಡೆದವನು, ತನ್ನದೇ ಆದ ಜಿಎಂಐಟಿ ಕಾಲೇಜಿನಿಂದ ಬಸ್ಸು ಶೆಲ್ಟರ್ ಮಾಡಿಸಿ, ದುಡ್ಡು ಹೊಡೆದವನು ಅವನು. ಬಸವರಾಜ ಭೈರತಿ ಅಂತಾ ಮಂತ್ರಿಯೊಬ್ಬನಿದ್ದ. ಅವನು ಬೆಳಗ್ಗೆ ದಾವಣಗೆರೆಗೆ ಬಂದು, ದುಡ್ಡು ವಸೂಲಿ ಮಾಡುತ್ತಿದ್ದ. ಆಮೇಲೆ ಇಬ್ಬರೂ ಹಂಚಿಕೊಳ್ಳುತ್ತಿದ್ದರು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಸೋತ ಮೇಲೆ ಅವನೇನೋ ಗಂಟನ್ನು ಕಳೆದುಕೊಂಡವನಂತೆ ಅಲ್ಲಿ ಅಲ್ಲಿ ಅಳುತ್ತಿದ್ದಾನೆ. ಎಲೆಕ್ಷನ್ ಅಂದ ಮೇಲೆ ಸೋಲು, ಗೆಲುವು ಸಾಮಾನ್ಯವೆಂಬುದನ್ನು ಅವನು ಅರಿಯಬೇಕು. ಅವನು ಮತ್ತು ಅವರಪ್ಪನನ್ನು ಭೀಮಸಮುದ್ರದಿಂದ ದಾವಣಗೆರೆಗೆ ಕರಕೊಂಡು ಬಂದಿದ್ದು ಯಾರೆಂಬುದನ್ನೇ ಅವನು ಮರೆತಿದ್ದಾನೆ ಎಂದು ಸಿದ್ದೇಶ್ವರ ವಿರುದ್ಧ ಶಾಸಕ ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

- - -

ಬಾಕ್ಸ್‌ * ನನ್ನ ಸೊಸೆ ಗೆದ್ದಿದ್ದು ಹೇಗೆಂದು ಕೇಸ್ ಹಾಕ್ಸಿದ್ದಾನೆ ದಾವಣಗೆರೆ: ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸೊಸೆ ಡಾ.ಪ್ರಭಾ ಗೆದ್ದಿರುವುದು ಹೆಂಗೆಂದು ಕೇಸ್ ಹಾಕಿಸಿದ್ದಾನೆ. ಒಂದು ಮತದಲ್ಲಿ ಗೆದ್ದರೂ ಗೆಲುವು ಅನ್ನೋದನ್ನು ಅವನು (ಡಾ.ಸಿದ್ದೇಶ್ವರ) ತಿಳಿಯಲಿ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ಅವನು ಮತ್ತು ಅವನಪ್ಪ ಹೆಂಗೆ ಗೆದ್ದಿದ್ದಾರೆಂಬುದು ನಮಗೂ ಗೊತ್ತು. ಎಲೆಕ್ಷನ್‌ಗೆ ದುಡ್ಡಿಲ್ಲ ಅಂತಾ ದುಡ್ಡು ಇಸ್ಕೊಂಡು ಬಂದಿರುವುದೂ ಗೊತ್ತು. ಅದನ್ನೂ ಹೇಳಬೇಕಾ? ಮಾಜಿ ಸಂಸದನ ಕೆಲವು ಗೂಂಡಾಗಳು, ಪೈಲ್ವಾನರನ್ನು ಜೊತೆಗಿಟ್ಟುಕೊಂಡು ಓಡಾಡುತ್ತಿದ್ದಾನೆ ಎಂದು ಟೀಕಿಸಿದರು.

ಗೂಂಡಾಗಳನ್ನೂ ಅವನು ಸಾಕಿಕೊಂಡಿದ್ದಾನೆ. ಅವನು ಏನಾದರೂ ಮಾತನಾಡಬೇಕೆಂದರೆ ಎಚ್ಚರಿಕೆಯಿಂದ ಮಾತನಾಡಲಿ. ಒಂದು ಕಡೆ ಯಡಿಯೂರಪ್ಪ, ವಿಜಯೇಂದ್ರಗೆ ಬೈಯುತ್ತಾನೆ. ಮತ್ತೊಂದು ಕಡೆ ಬೈದೇ ಇಲ್ಲ ಅಂತಾನೆ. ಅಲ್ಲೊಂದು, ಇಲ್ಲೊಂದು ಮಾತನಾಡುತ್ತಾನೆ. ಅವನು ಮಾತನಾಡಿರುವ ಪತ್ರಿಕೆ ತುಣುಕುಗಳು ನನ್ನ ಬಳಿ ಇವೆ ಎಂದು ಅವರು ತಿಳಿಸಿದರು.

ನೀವು (ಮಾಧ್ಯಮದವರು) ತೋರಿಸಿ. ಈಗಾಗಲೇ ದಾವಣಗೆರೆಯಲ್ಲಿ ಬಿಜೆಪಿಯನ್ನು ಎರಡು ಮಾಡಿದ್ದಾನೆ. ಮುಂದೆ ನಾಲ್ಕು ಮಾಡುತ್ತಾನೆ. ಸೋತ ಮೇಲೆ ಮನೆಯಲ್ಲಿ ಕುಳಿತುಕೊಳ್ಳಬೇಕು. ನಾವು ಗೆದ್ದಿರುವುದು ಹೆಂಗೆ ಅಂತಾ ಕೇಸ್ ಹಾಕಿಸಿದ್ದಾನೆ ದೊಡ್ಡ ಮನುಷ್ಯ. ಅವನು ಮಾಡಿದಂತಹ ಕೆಲಸಗಲನ್ನು ನಾವು ಮಾಡುವುದಿಲ್ಲ ಎಂದರು.

- - - -31ಕೆಡಿವಿಜಿ5, 6:

ಡಾ.ಶಾಮನೂರು ಶಿವಶಂಕರಪ್ಪ