ಕೊಟ್ಟಮಾತಿನಂತೆ ತುಂಗಭದ್ರಾ ಜಲಾಶಯಕ್ಕಿಂದು ಸಿಎಂ ಬಾಗಿನ

| Published : Sep 22 2024, 01:57 AM IST

ಕೊಟ್ಟಮಾತಿನಂತೆ ತುಂಗಭದ್ರಾ ಜಲಾಶಯಕ್ಕಿಂದು ಸಿಎಂ ಬಾಗಿನ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದಾಗ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಸೆ. 22 ರಂದು ಬೆಳಗ್ಗೆ 11.15ಕ್ಕೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.

ಮತ್ತೆ ಬಂದು ನಾನು ಬಾಗಿನ ಅರ್ಪಿಸಿಯೇ ಅರ್ಪಿಸುತ್ತೇನೆ ಎಂದಿದ್ದ ಸಿದ್ದರಾಮಯ್ಯಕನ್ನಡಪ್ರಭ ವಾರ್ತೆ ಕೊಪ್ಪಳ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದಾಗ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಸೆ. 22 ರಂದು ಬೆಳಗ್ಗೆ 11.15ಕ್ಕೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.

ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ಬಾಗಿನ ಅರ್ಪಣೆ ಮಾಡಲು ಮುಂದಾಗಿದ್ದು, ನಿಗದಿತ ದಿನಾಂಕವನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ದುರಂತ ಎಂದರೇ ಕ್ರಸ್ಟ್ ಗೇಟ್ ಮುರಿದು ನೀರು ಪೋಲಾಯಿತು. ಬಾಗಿನ ಅರ್ಪಣೆ ಮಾಡಲು ಬರಬೇಕಾಗಿದ್ದ ಸಿಎಂ ಸಿದ್ದರಾಮಯ್ಯ ದುರಸ್ತಿ ಕಾರ್ಯ ಪರಿಶೀಲನೆ ಮಾಡಲು ಬರುವಂತಾಗಿತ್ತು.

ಕ್ರಸ್ಟ್ ಗೇಟ್ ಪರಿಶೀಲನೆ ಮಾಡಲು ಆಗಮಿಸಿದಾಗ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಮುರಿದಿರುವ ಕ್ರಸ್ಟ್ ಗೇಟ್ ಸರಿಪಡಿಸಲಾಗುತ್ತದೆ. ಮತ್ತೆ ಮಳೆ ಬಂದೇ ಬರುತ್ತದೆ. ಜಲಾಶಯವೂ ಮತ್ತೆ ಭರ್ತಿಯಾಗಿಯೇ ಆಗುತ್ತದೆ. ನಾನು ಮತ್ತೆ ಬಂದು ಬಾಗಿನ ಅರ್ಪಣೆ ಮಾಡುತ್ತೇನೆ ಎಂದಿದ್ದರು. ಈಗ ಅದರಂತೆ ಸೆ. 22ರಂದು ಆಗಮಿಸಿ, ಬಾಗಿನ ಅರ್ಪಣೆ ಮಾಡಲಿದ್ದಾರೆ.ಕ್ರಸ್ಟ್ ದುರಸ್ತಿಗೆ ಶ್ರಮಿಸಿದವರಿಗೆ ಅಭಿನಂದನಾ ಕಾರ್ಯಕ್ರಮ:

ತುಂಗಭದ್ರಾ ಜಲಾಶಯದ ಕೊಚ್ಚಿ ಹೋದ ಕ್ರೆಸ್ಟ್ ಗೇಟ್-19ಕ್ಕೆ ಸ್ಟಾಪ್‌ ಲಾಗ್‌ ಗೇಟ್‌ ಅನ್ನು ಕೇವಲ ಒಂದು ವಾರದೊಳಗೆ ನಿರ್ಮಿಸಿ, ಅಳವಡಿಸಿದ ಅಧಿಕಾರಿಗಳು, ತಂತ್ರಜ್ಞರು, ಸಿಬ್ಬಂದಿ ಹಾಗೂ ಗೇಟ್ ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭವನ್ನು ಸೆ. 22ರಂದು ಬೆಳಗ್ಗೆ 11.55ಕ್ಕೆ ಮುನಿರಾಬಾದ್ ಹೈಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿದೆ.

ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ, ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ, ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಎನ್.ಎಸ್. ಬೋಸರಾಜು, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಹನುಮಗೌಡ ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕರಾದ ಹಂಪನಗೌಡ ಬಾದರ್ಲಿ, ಜೆ.ಎನ್. ಗಣೇಶ, ಆರ್. ಬಸನಗೌಡ ತುರುವಿಹಾಳ, ಬಸನಗೌಡ ದದ್ದಲ್ ಉಪಸ್ಥಿತರಿರುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು. ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ್, ಈ. ತುಕಾರಾಂ, ಡಾ. ಪ್ರಭಾ ಮಲ್ಲಿಕಾರ್ಜುನ, ಜಿ.ಕುಮಾರ್ ನಾಯಕ ಮೊದಲಾದವರು ಭಾಗವಹಿಸುವರು.ಮುನಿರಾಬಾದನಲ್ಲಿ ಹಬ್ಬದ ವಾತವಾರಣ:

ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲು ಮುನಿರಾಬಾದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಈ ಹಿನ್ನೆಲೆ ಮುನಿರಾಬಾದನಲ್ಲಿ ಹಬ್ಬದ ವಾತವಾರಣ ಕಂಡು ಬರುತ್ತಿದೆ. ಗ್ರಾಮದ ಮುಖ್ಯ ಬೀದಿಗಳನ್ನು ತಳೀರು ತೋರಣಗಳಿಂದ ಸಿಂಗರಿಸಲಾಗಿದೆ. ಗ್ರಾಮದ ವೃತ್ತಗಳಲ್ಲಿ ಬ್ಯಾನರ್ ಮತ್ತು ಫ್ಲೆಕ್ಸ್‌ ಅಳವಡಿಸಲಾಗಿದೆ.

ಸಿದ್ಧತೆ ವೀಕ್ಷಿಸಿದ ಸಚಿವ:

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ನಿರ್ಮಿಸಲಾಗುತ್ತಿರುವ ವೇದಿಕೆ ಪರಿಶೀಲಿಸಿ, ಸಿದ್ಧತೆ ಬಗ್ಗೆ ಶನಿವಾರ ಸಂಜೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ನಾಳೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು, ಕಿತ್ತುಹೋದ ತುಂಗಭದ್ರಾ ಜಲಾಶಯದ ಗೇಟ ನಂ.19ನ್ನು ಒಂದು ವಾರದಲ್ಲಿ ದುರಸ್ತಿ ಮಾಡಿದ ತಂತ್ರಜ್ಞರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಿದ್ದಾರೆ ಎಂದರು.

ತುಂಗಭದ್ರಾ ಜಲಾಶಯದ ಗೇಟುಗಳನ್ನು ಬದಲಿಸುವ ವಿಷಯ ಮೂರು ರಾಜ್ಯಗಳಿಗೆ ಸಂಬಂಧಪಟ್ಟ ವಿಷಯ. ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ನೀರಾವರಿ ಸಚಿವರು ಹಾಗೂ ಅಧಿಕಾರಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಈ ಸಂದರ್ಭ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ನಳಿನ್ ಕುಮಾರ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಸಿದ್ದಿ, ಕೆ.ಎನ್.ಎನ್.ಎಲ್. ಎಂ.ಡಿ. ರಾಜೇಶ ಅಮ್ಮೀನ್ ಭಾವಿ, ಮುಖ್ಯ ಅಭಿಯಂತರ ಹನುಮಂತಪ್ಪ ದಾಸರ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಜಿಪಂ ಮಾಜಿ ಅಧ್ಯಕ್ಷ ಜನಾರ್ದನ್ ಹುಲಿಗಿ, ತಾಪಂ ಮಾಜಿ ಅಧ್ಯಕ್ಷ ಬಾಲಚಂದ್ರ, ಅಮರೇಶ ಕರಡಿ ಇತರರಿದ್ದರು.