ಪೆರ್ನೆ ಬಿಳಿಯೂರು ಗ್ರಾಮದಲ್ಲಿ ಒಂದು ಕೋಟಿ ನಲ್ವತ್ತನಾಲ್ಕು ಲಕ್ಷ ರು. ವೆಚ್ಚ ಕಾಮಗಾರಿಗಳಿಗೆ ಚಾಲನೆ
ಉಪ್ಪಿನಂಗಡಿ: ಬಿಳಿಯೂರು ಗ್ರಾಮದಲ್ಲಿ ಆದ್ಯತೆ ಮೇರೆಗೆ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಸಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪೆರ್ನೆ ಬಿಳಿಯೂರು ಗ್ರಾಮದಲ್ಲಿ ಒಂದು ಕೋಟಿ ನಲ್ವತ್ತನಾಲ್ಕು ಲಕ್ಷ ರು. ವೆಚ್ಚ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.ಗ್ರಾಮದಲ್ಲಿ ಸಂಪರ್ಕ ರಸ್ತೆ ಹಿಂದೂ ರುದ್ರಭೂಮಿ, ಸ್ವಚ್ಛ ಸಂಕೀರ್ಣ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಂತ ಹಂತವಾಗಿ ಅನುದಾನ ಇನ್ನಷ್ಟು ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ತಾಲೂಕಿನ ಎಲ್ಲ ಗ್ರಾಮಗಳಿಗೂ ಸರ್ಕಾರದ ಎಲ್ಲ ಯೋಜನೆಯನ್ನು ಏಕ ಕಾಲದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಆದ್ಯತೆ ಮೇರೆಗೆ ಕಾಮಗಾರಿ ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯ ಎಂದರು. ಪ್ರತಿ ಗ್ರಾಮಸ್ಥರು ತಮ್ಮ ಕುಂದುಕೊರತೆಗಳ ಕುರಿತು ಗಮನ ತಂದಲ್ಲಿ ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಯೋಜನಾ ಅಧ್ಯಕ್ಷ ಉಮಾನಾಥ ಶೆಟ್ಟಿ, ಪೆರ್ನೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ತೋಯೋಜಾಕ್ಷ ಶೆಟ್ಟಿ, ಮಾಜಿ ಸದಸ್ಯರಾದ ಮಹಮ್ಮದ್ ಫಾರೂಕ್, ತನಿಯಪ್ಪ ಪೂಜಾರಿ, ಸುನಿಲ್ ನೆಲ್ಸನ್ ಪಿಂಟೋ, ಅಬ್ದುಲ್‌ಶಾಫಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸಿಫ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜಾರಾಮ ಕೆ.ಬಿ. ಮತ್ತಿತರರು ಉಪಸ್ಥಿತರಿದ್ದರು.