ಅಶೋಕನ ವಿಚಾರಗಳು ಸ್ವರ್ಗ ಪ್ರಾಪ್ತಿ ಉದ್ದೇಶ ಹೊಂದಿದ್ದವು

| Published : Dec 26 2024, 01:05 AM IST

ಸಾರಾಂಶ

ಅಶೋಕನು ತನ್ನ ಸಾಮ್ರಾಜ್ಯದ ಕಟ್ಟ ಕಡೆ ವ್ಯಕ್ತಿಗೂ ಬೌದ್ಧ ಧರ್ಮದ ಸಾರವು ತಲುಪಬೇಕೆಂಬ ಉದ್ದೇಶದಿಂದ ಬುದ್ಧನ ತತ್ವ ಮತ್ತು ಆದರ್ಶಗಳನ್ನು ಶಿಲಾಶಾಸನಗಳ ಮೂಲಕ ಪ್ರಕಟಿಸಿದನು.

ಕನ್ನಡಪ್ರಭ ವಾರ್ತೆ ಮುಧೋಳ

ಮೌರ್ಯ ಸಾಮ್ರಾಜ್ಯದ ಅರಸರ ಚಕ್ರವರ್ತಿ ಅಶೋಕನು ತನ್ನ ಆಡಳಿತಾವಧಿಯಲ್ಲಿ ಬೌದ್ಧ ಧರ್ಮವನ್ನು ರಾಜ್ಯ ಧರ್ಮವನ್ನಾಗಿಸಿಕೊಂಡು ಆ ಧರ್ಮದ ಬೆಳವಣಿಗೆಗೆ ಶ್ರಮಿಸಿದನು ಎಂದು ಜಮಖಂಡಿ ಬಿಎಲ್‌ಡಿಇ ಸ್ನಾತಕೋತ್ತರ ಕೇಂದ್ರದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ ಪಾಟೀಲ ಹೇಳಿದರು.

ಸ್ಥಳೀಯ ಎಸ್.ಆರ್.ಕಂಠಿ ಕಾಲೇಜಿನ ಇತಿಹಾಸ ವಿಭಾಗದಿಂದ ನಡೆದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅಶೋಕನ ಧಮ್ಮ ವಿಷಯದ ಕುರಿತು ಮಾತನಾಡಿದ ಅವರು, ಅಶೋಕನು ತನ್ನ ಸಾಮ್ರಾಜ್ಯದ ಕಟ್ಟ ಕಡೆ ವ್ಯಕ್ತಿಗೂ ಬೌದ್ಧ ಧರ್ಮದ ಸಾರವು ತಲುಪಬೇಕೆಂಬ ಉದ್ದೇಶದಿಂದ ಬುದ್ಧನ ತತ್ವ ಮತ್ತು ಆದರ್ಶಗಳನ್ನು ಶಿಲಾಶಾಸನಗಳ ಮೂಲಕ ಪ್ರಕಟಿಸಿದನು. ಹೀಗಾಗಿ ಭಾರತದ ಇತಿಹಾಸದಲ್ಲಿ ಅಶೋಕನನ್ನು ಶಿಲಾಶಾಸನಗಳ ಪಿತಾಮಹನೆಂದು ಕರೆಯಲಾಗುತ್ತದೆ ಎಂದರು.

ಚಕ್ರವರ್ತಿ ಅಶೋಕ ಒಬ್ಬ ಧರ್ಮ ಸಹಿಷ್ಣುಯಾಗಿದ್ದು ತಾನು ಸ್ವೀಕರಿಸಿದ ಬೌದ್ಧ ಧರ್ಮವನ್ನು ಜನರು ಪಾಲಿಸಲೇಬೇಕೆಂಬ ಕಟ್ಟಳೆಗಳನ್ನು ವಿಧಿಸಲಿಲ್ಲ. ಬದಲಾಗಿ ಸಾರ್ವಜನಿಕರು ತಮಗೆ ಇಷ್ಟವಾದ ಧರ್ಮ ಅನುಸರಿಸಬಹುದಾಗಿತ್ತು. ಬುದ್ಧನ ತತ್ವಗಳು ಪುನರ್‌ ಜನ್ಮದ ಕಲ್ಪನೆ ಹಿನ್ನೆಲೆ ನಿರ್ವಾಣ ಸಾಧನೆ ಉದ್ದೇಶವನ್ನು ಹೊಂದಿದ್ದರೆ, ಅಶೋಕನ ವಿಚಾರಗಳು ಎಲ್ಲ ಧರ್ಮೀಯರಿಗೂ ಸ್ವರ್ಗ ಪ್ರಾಪ್ತಿಯಾಗಬೇಕೆನ್ನುವ ಉದ್ದೇಶವನ್ನು ಹೊಂದಿದ್ದವು. ಬುದ್ಧನ ಅಹಿಂಸಾ ಮಾರ್ಗದ ಜೊತೆಗೆ ತನ್ನ ಉದಾತ್ತ ಹಾಗೂ ಆದರ್ಶ ಚಿಂತನೆಗಳನ್ನು ಶಿಲಾಶಾಸನಗಳ ಮೂಲಕವಾಗಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದನು ಎಂದರು.

ತನ್ನ ಆಡಳಿತಾವಧಿಯಲ್ಲಿ ಬೌದ್ಧ ಧರ್ಮವನ್ನು ರಾಜ್ಯಧರ್ಮವನ್ನಾಗಿಸಿಕೊಂಡನಲ್ಲದೆ, ಅನೇಕ ಬೌದ್ಧ ಸ್ತೂಪಗಳನ್ನು, ಅಜೀವಿಕರಿಗಾಗಿ ನಿರ್ಮಿಸಲಾದ ಶಿಲಾಗುಹೆಗನ್ನು ಮತ್ತು ಚೈತ್ಯಾಲಯಗಳನ್ನು ನಿರ್ಮಿಸಿದನು. ಬೌದ್ಧ ಸ್ತೂಪಗಳ ಮೇಲೆ ಬುದ್ಧನ ಜೀವನದ ಕುರಿತು ದಾಖಲೆಗಳನ್ನೊದಗಿಸುವ ಜಾಥಕ ಕಥೆಗಳ ಉಬ್ಬು ಶಿಲ್ಪಗಳನ್ನು ಕೆತ್ತಿಸಿದನು. ಇವೆಲ್ಲಗಳು ಬೌದ್ಧ ವಾಸ್ತುಶಿಲ್ಪಕ್ಕೆ ಅಶೋಕನು ನೀಡಿದ ಕೊಡುಗೆಯನ್ನು ತಿಳಿಸುವುದಲ್ಲದೆ, ಅಶೋಕನ ಧರ್ಮದ ಕುರಿತಾದ ಇತಿಹಾಸವನ್ನು ದಾಖಲಿಸು ಆಕಾರಗಳಾಗಿವೆ ಎಂದು ಹೇಳಿದರು.

ಐಕ್ಯೂಸಿ ಸಂಯೋಜಕ ಪ್ರೊ.ಅಜ್ಜಪ್ಪ ಕಡೂರ ಅಧ್ಯಕ್ಷತೆವಹಿಸಿ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್.ಜರಕುಂಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಸುನೀಲ ಕುಸ್ತಿ ಅತಿಥಿಗಳನ್ನು ಪರಿಚಯಿಸಿ, ವಂದಿಸಿದರು, ದುರ್ಗಪ್ಪ ಲಚ್ಚವ್ವಗೋಳ ಪ್ರಾರ್ಥನೆ ಹೇಳಿದರು.