ಅಷ್ಟಾವರಣಗಳು ಮನುಷ್ಯನ ಬದುಕಿಗೆ ಪ್ರೇರಣೆ

| Published : Oct 06 2024, 01:27 AM IST

ಸಾರಾಂಶ

ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದವೆಂಬ ಅಷ್ಟಾವರಣಗಳು ಮನುಷ್ಯನ ಬದುಕಿಗೆ ಪ್ರೇರಣೆಯಾಗಿವೆ ಎಂದು ಕಡೂರಿನ ಡಾ. ಮಂಜುನಾಥ್ ತಿಳಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದವೆಂಬ ಅಷ್ಟಾವರಣಗಳು ಮನುಷ್ಯನ ಬದುಕಿಗೆ ಪ್ರೇರಣೆಯಾಗಿವೆ ಎಂದು ಕಡೂರಿನ ಡಾ. ಮಂಜುನಾಥ್ ತಿಳಿಸಿದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅಲ್ಲಮ ಪ್ರಭು ಸಂಶೋಧನಾ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾದ ವಚನಕಮ್ಮಟದ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಲಕ್ಷಾಂತರ ಜನರ ಬದುಕು ಅನ್ನಮಯ, ಜ್ಞಾನಮಯವಾಗಲು ಶರಣರ ಅನುಭವದ ಬದುಕು ಕಾರಣ. ದೈವದ ಜತೆಗೆ ಕನ್ನಡವು ಮಾತನಾಡುತ್ತಿದೆ ಎಂದು ಶರಣರು ತೋರಿಸಿದ್ದಾರೆ. ದಯವೇ ಧರ್ಮದ ಮೂಲವೆಂದು ಬಸವಣ್ಣ ಸಾರಿದರೆಂದರು.

ಈ ಬ್ರಹ್ಮಾಂಡ ಅಷ್ಟಾವರಣದಿಂದ ನಿಂತಿದೆ. ಅದರಲ್ಲಿ ಮೊದಲನೆಯದು ಗುರು. ಸುಜ್ಞಾನದ ಜತೆಗೆ ಬರುವ ಅರಿವನ್ನು ಗುರುವೆಂದು ಕರೆಯುತ್ತಾರೆ. ಶರಣ ಪರಂಪರೆಯಲ್ಲಿ ಗುರುವಿಗೆ ಶ್ರೇಷ್ಠವಾದ ಸ್ಥಾನವಿದೆ. ಬಸವಣ್ಣನವರನ್ನು ವಿಶ್ವಗುರು ಎಂದು ಕರೆಯುತ್ತೇವೆ. ಹಾಲಿನೊಳಗೆ ತುಪ್ಪವನ್ನು ಶೋಧಿಸುವಂತೆ ನಮ್ಮೊಳಗೆ ದೇವರನ್ನು ಕಾಣಬೇಕು. ಇಷ್ಟಲಿಂಗ ಎನ್ನವುದು ಆಚಾರದ ಪ್ರತೀಕ. ಅರಿವಿನ ಕುರುಹು. ಯೋಗ್ಯವಾದ ಸಮರ್ಥನಾದ ಶರಣರ ವಿಚಾರಗಳನ್ನು ಅರಿತಂತಹ ವ್ಯಕ್ತಿಯಿಂದ ಇಷ್ಟಲಿಂಗವನ್ನು ಪಡೆಯಬೇಕು ಎಂದು ತಿಳಿಸಿದರು.

ವಚನ ಕಮ್ಮಟ ಕಲಿಕಾ ಶಿಬಿರದ ಗೋಷ್ಠಿಯಲ್ಲಿ ಮಾತನಾಡಿದ ಲತಾ , ಶರಣ ಸಂಸ್ಕೃತಿಯಲ್ಲಿ ಶರಣರ ಬಗ್ಗೆ ಅರಿತಾಗ ಗುರುವಿನ ಮಹತ್ವ ಅರಿವಾಗುತ್ತದೆ. ಬಸವಾದಿ ಶರಣರ ಪ್ರಕಾರ ಅರಿವೇ ಗುರು, ಅಂಧಕಾರವನ್ನು ಹೋಗಲಾಡಿಸುವವನೆ ಗುರು ಎಂದು ತಿಳಿಸಿದರು.

ಲಿಂಗದ ಬಗ್ಗೆ ಮಾತನಾಡಿದ ಕೊಟ್ರೇಶ್ ಎಸ್. ಉಪ್ಪಾರ, ಲಿಂಗದಲ್ಲಿ ಹಲವಾರು ಪ್ರಭೇದಗಳಿವೆ. ಆದರೆ ಬಸವಾದಿ ಶರಣರು ನಮಗೆ ಇಷ್ಟಲಿಂಗವನ್ನು ನೀಡಿದರು. ದೇವರಿಂದಲೇ ದೂರವಿದ್ದ ಎಷ್ಟೋ ಜನರ ಕೈಗೆ ಬಸವಣ್ಣನವರು ಇಷ್ಠ ಲಿಂಗವನ್ನು ಕೊಟ್ಟರು. ದೈವೀ ಪರಿಕಲ್ಪನೆ ರೂಪವೇ ಇಷ್ಟ ಲಿಂಗ. ಇಷ್ಟ ಲಿಂಗ ದೇವರಲ್ಲ, ದೇವರೆಡೆಗೆ ಸಾಗುವ ಒಂದು ಸಾಧನ. ಏಕದೇವರ ಆರಾಧನೆಯನ್ನು ತಿಳಿಸುವುದು, ದೇವರು ಮತ್ತು ಭಕ್ತ ಆತ್ಮ ಮತ್ತು ಪರಮಾತ್ಮನ ನೇರ ಸಂಪರ್ಕವನ್ನು ಕೊಡುವುದೇ ಇಷ್ಟಲಿಂಗ ಎಂದರು.

ಉಳವಿಯ ಶ್ರೀ ಚೆನ್ನಬಸವೇಶ್ವರ ಮಹಾಮಠದ ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳು ಮಾತನಾಡಿ, ಯಾವುದು ಈ ಜಗತ್ತಿನ ಸೃಷ್ಟಿಗೆ ಕಾರಣವೊ ಅದೇ ಲಿಂಗ ಎಂದು ತಿಳಿಸಿದರು. ಜಂಗಮದ ಬಗ್ಗೆ ಶ್ರೀ ಮರುಳಶಂಕರ ದೇವರ ಗುರುಪೀಠದ ಶ್ರೀ ಸಿದ್ಧಬಸವ ಕಬೀರಸ್ವಾಮಿಗಳು ಮಾತನಾಡಿ, ಸಂತಸದ ವಸಂತಗಾಳಿಯಂತೆ ಜಂಗಮ ಇರಬೇಕು ಎಂದು ತಿಳಿಸಿದರು.

ಬಾಯಲ್ಲಿ ಬಸವತತ್ವ ಇಟ್ಟುಕೊಂಡು ಎದೆಯಲ್ಲಿ ಕತ್ತಿ ಹಿಡಿದ ಜಂಗಮರೇ ಈ ದಿನ ಎಲ್ಲಾ ಕಡೆ ಕಾಣಸಿಗುತ್ತಾರೆ. ತಮ್ಮ ಹೊಟ್ಟೆ ಹೊರೆಯುವುದಕ್ಕಾಗಿ ಮುಗ್ಧ ಜನರನ್ನು ಸುಲಿಯುವವನನ್ನು ಜಂಗಮ ಎಂದು ಕರೆಯಲು ಸಾಧ್ಯವಿಲ್ಲ. ನಿಜವಾದ ಜಂಗಮ ಪ್ರಾಪಂಚಿಕ ಜನರಲ್ಲಿ ಏನನ್ನು ಬೇಡುವುದಿಲ್ಲ. ಯಾರು ನಿರಾಕಾರ ತತ್ವನ್ನು ರೂಡಿಸಿಕೊಂಡಿರುತ್ತಾರೋ ಅಂತವರನ್ನು ನಾವು ಜಂಗಮ ಎಂದು ಕರೆಯಬೇಕು ಎಂದು ತಿಳಿಸಿದರು. ಕುಂಬಾರ ಗುಂಡಯ್ಯ ಶ್ರೀಗಳು, ಬಸವ ನಾಗೀದೇವ ಶ್ರೀಗಳು, ಮುರುಘರಾಜೇಂದ್ರ ಸ್ವಾಮಿಗಳು ಉಪಸ್ಥಿತರಿದ್ದರು. ಬಸವ ಟಿವಿ ವಾಹಿನಿಯ ಶ್ರೀ ಕೃಷ್ಣಪ್ಪ ರವರು ಕಾರ್ಯಕ್ರಮ ನಡೆಸಿಕೊಟ್ಟರು. ಜಮುರಾ ಕಲಾವಿದರು ಪ್ರಾರ್ಥಿಸಿ, ಶ್ರೀ ಮಠದ ವಟುಗಳಾದ ಲಂಕೇಶ್ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಟಿ.ಪಿ. ಜ್ಞಾನಮೂರ್ತಿ ವಂದಿಸಿದರು.