ಖಾಸಗಿ ವೈದ್ಯನ ಮೇಲೆ ಹಲ್ಲೆ, ಹಣ ದೋಚಿ ಪರಾರಿ

| Published : May 10 2024, 01:34 AM IST

ಸಾರಾಂಶ

ರಾವೂರ ಗ್ರಾಮದ ಖಾಸಗಿ ವೈದ್ಯರೊಬ್ಬರ ಮೇಲೆ ಸ್ಥಳೀಯ ಇಬ್ಬರು ಹಲ್ಲೆ ನಡೆಸಿ, ಹಣ ದೋಚಿ, ಪ್ರತಿ ತಿಂಗಳು ಹಫ್ತಾ ನೀಡುವಂತೆ ಎಚ್ಚರಿಸಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಶಹಾಬಾದ

ರಾವೂರ ಗ್ರಾಮದ ಖಾಸಗಿ ವೈದ್ಯರೊಬ್ಬರ ಮೇಲೆ ಸ್ಥಳೀಯ ಇಬ್ಬರು ಹಲ್ಲೆ ನಡೆಸಿ, ಹಣ ದೋಚಿ, ಪ್ರತಿ ತಿಂಗಳು ಹಫ್ತಾ ನೀಡುವಂತೆ ಎಚ್ಚರಿಸಿರುವ ಘಟನೆ ನಡೆದಿದ್ದು, ಈ ಕುರಿತು ವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ರಾವೂರ ಗ್ರಾಮದಲ್ಲಿ ಕಳೆದ 7-8 ವರ್ಷದಿಂದ ಪಶ್ಚಿಮ ಬಂಗಾಳ 24 ಪರಗಣ ಜಿಲ್ಲೆಯ ಶಂಕರ ತಂ. ನಾರಾಯಣ ಮಂಡಲ ಎಂಬುವವರು ಖಾಸಗಿ ವೈದ್ಯ ವೃತ್ತಿ ಮಾಡಿಕೊಂಡಿದ್ದಾರೆ.

ಮಂಗಳವಾರ ರಾತ್ರಿ ಸುಮಾರು 10.30ಕ್ಕೆ ರಾವೂರನ ಮೌಲಾ ಗಫೂರ ಆಡಕಿ, ಮೋಹ್ಸಿನ್ ಛೋಟುಮಿಯ್ಯಾ ಆಡಕಿ ಅವರು ವೈದ್ಯರ ಮನೆಗೆ ಆಗಮಿಸಿ, ಮೌಲಾನಿಗೆ ಬಿಪಿ ಪರೀಕ್ಷಿಸುವಂತೆ ಮನವಿ ಮಾಡಿದ್ದಾರೆ. ವೈದ್ಯರು ಬಿಪಿ ಸಾಮಾನ್ಯವಾಗಿದೆ ಎಂದು ಹೇಳಿ ಕಳುಹಿಸಿದ್ದಾರೆ. ನಂತರ ಮತ್ತೆ ತಿರುಗಿ ಬಂದು ಹೊಟ್ಟೆ ನೋವೆಂದು ಹೇಳಿದ್ದರಿಂದ ಈಗಾಗಲೇ ಅವರು ಕಲಬುರಗಿಯ ಉನ್ನತ ಮಟ್ಟದ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರಿಂದ ಅಲ್ಲಿಗೆ ಹೋಗೆ ಚಿಕಿತ್ಸೆ ಪಡೆಯಲು ಸಲಹೆ ನೀಡಿದ್ದಾರೆ.

ಕೂಡಲೇ ಇಬ್ಬರು ವೈದ್ಯರ ಮನೆಯ ಬಾಗಿಲು ಮುಚ್ಚಿ, ಬಾಯಿಗೆ ಬಟ್ಟೆ ತುರುಕಿ ತುಟಿ, ಬೆನ್ನು, ಭುಜ, ಹೊಟ್ಟೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಜೇಬಿನಲ್ಲಿದ್ದ 13 ಸಾವಿರ ರೂ. ಕಿತ್ತುಕೊಂಡು, ರಾವೂರನಲ್ಲಿ ಇರಬೇಕಾದರೆ ಪ್ರತಿ ತಿಂಗಳು ಹಫ್ತಾ ನೀಡವಂತೆ ಬೆದರಿಸಿ, ಇಲ್ಲದೆ ಹೋದಲ್ಲಿ ರಾವೂರ ಗ್ರಾಮ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ವೈದ್ಯ ಶಂಕರ ಸ್ಥಳೀಯರಾದ ಡಾ.ಗುಂಡಣ್ಣ ಬಾಳಿ ಅವರ ಸಹಕಾರದೊಂದಿಗೆ ವಾಡಿ ಠಾಣೆಗೆ ದೂರ ಸಲ್ಲಿಸಿ, ಸೂಕ್ತ ರಕ್ಷಣೆಗೆ ಮನವಿ ಮಾಡಿದ್ದಾರೆ.