ಸಾರಾಂಶ
ಕನ್ನಡಪ್ರಭ ವಾರ್ತೆ ಸವಣೂರು
ಸರ್ಕಾರದ ಶೇ. 5ರಷ್ಟು ಮೀಸಲಾತಿಯನ್ನು ಅಂಗವಿಕಲರಿಗೆ ಒದಗಿಸಿ ಸ್ವಾವಲಂಬಿ ಜೀವನ ನಡೆಸಲು ಅಧಿಕಾರಿಗಳು ಸಹಕಾರ ನೀಡಬೇಕೆಂದು ತಹಸೀಲ್ದಾರ ಭರತರಾಜ ಕೆಎನ್ ತಿಳಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂಗವಿಕಲರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಸಭೆ ವಿವಿಧ ಇಲಾಖೆ ಅಧಿಕಾರಿಗಳ ಗೈರು ಹಾಗೂ ವಿಳಂಬದ ಆಗಮನದಿಂದಾಗಿ ಮಧ್ಯಾಹ್ನ 12 ಗಂಟೆಗೆ ಆರಂಭಗೊಂಡಿತು. ಸಭೆಯ ಅಂತ್ಯದವರೆಗೂ ಅಧಿಕಾರಿಗಳ ಹಾಜರಾತಿ ಕಂಡು ಬಂತು.
ಆರೋಗ್ಯ ಇಲಾಖೆ ವತಿಯಿಂದ ನೀಡಲ್ಪಡುವ ಯುಡಿಐಡಿ ಕಾರ್ಡ್‌ನ್ನು ತ್ವರಿತವಾಗಿ ವಿತರಿಸಬೇಕು. ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲುಬು-ಕೀಲುಗಳ ತಜ್ಞರ ಕೊರತೆುಂದಾಗಿ ಸಾಕಷ್ಟು ತೊಂದರೆ ಉಂಟಾಗಿದೆ.
ಆದ್ದರಿಂದ ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ನೇಮಿಸಿ ಯುಡಿಐಡಿ ಶಿಬಿರವನ್ನು ಏರ್ಪಡಿಸಿ ಅಂಗವಿಕಲರಿಗೆ ಅನುಕೂಲ ಕಲ್ಪಿಸಕೊಡಬೇಕೆಂದು ಯು.ಆರ್.ಡಬ್ಲ್ಯೂ ಈರಯ್ಯ ಹಿರೇಮಠ ಆಗ್ರಹಿಸಿದರು.
ಎಂ.ಆರ್. ಡಬ್ಲೂ ಶಿವು ಯರೇಸಿಮಿ ಮಾತನಾಡಿ, ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿರುವುದರಿಂದ ಸಾಕಷ್ಟು ಮಹಿಳೆಯರು ಪ್ರಯಾಣಿಸುವುದರಿಂದ ಅಂಗವಿಕಲರು ಬಸ್ ಹತ್ತಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಎದುರಾಗಿದೆ.
ಸಾರಿಗೆ ಇಲಾಖೆ ಅಂಗವಿಕಲರಿಗೆ ಪ್ರಯಾಣಿಸುವ ಆಸನದಲ್ಲಿ ಅನ್ಯರಿಗೆ ಅವಕಾಶ ನೀಡದೆ ಅಂಗವಿಕಲರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಬೇಕು. ಸವಣೂರು ಬಸ್ ನಿಲ್ದಾಣದಲ್ಲಿ ಅಂಗವಿಕಲರಿಗಾಗಿ ಮೀಸಲಿರುವ ವಿಶ್ರಾಂತಿ ಕೊಠಡಿ ಅನ್ಯರಿಗೆ ಮಾತ್ರ ಅನುಕೂಲವಾಗುತ್ತಿದೆ ಕೂಡಲೇ ಘಟಕ ವ್ಯವಸ್ಥಾಪಕರು ಕ್ರಮ ವಹಿಸಿ ಅಂಗವಿಕಲರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಬಸ್ ನಿಲ್ದಾಣದಲ್ಲಿ ಅಂಗವಿಕಲರಿಗೆ ಮೂಲಭೂತ ಸೌಕರ್ಯಗಳು ಸೇರಿದಂತೆ ವಿಶೇಷ ಶೌಚಾಲಯ ನಿರ್ಮಿಸಬೇಕು. ಪಟ್ಟಣದ ಕಂದಾಯ ಇಲಾಖೆಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಲು ನಿರ್ಮಿಸಿದ ಜಾರು ಹಾದಿ ಅವೈಜ್ಞಾನಿಕವಾಗಿರುವುದರಿಂದ ಎಲ್ಲ ಅಂಗವಿಕಲರು ಸರಾಗವಾಗಿ ಚಲಿಸಲು ಸುಗಮವಾದ ಜಾರು ಹಾದಿಯನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಸಾರಿಗೆ ಇಲಾಖೆಯಿಂದ ನೀಡಲ್ಪಡುವ ರಿಯಾಯಿತಿ ಬಸ್ ಪಾಸ್ ನವೀಕರಣ ಸಂದರ್ಭದಲ್ಲಿ ಬಾಂಡ್ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಅಂಗವಿಕರಿಗೆ ₹300 ಹೊರೆಯಾಗುತ್ತಿರುವುದರಿಂದ ಅದನ್ನು ರದ್ದುಪಡಿಸಿ ಪಡಿತರ ಚೀಟಿ ಹಾಗೂ ಇತರೆ ಗುರುತಿನ ಮತ್ತು ವಿಳಾಸ ಪತ್ರ ಪಡೆದು ಬಸ್ ಪಾಸ್ ನೀಡುವ ವ್ಯವಸ್ಥೆ ಮಾಡಬೇಕೆಂದು ಅಂಗವಿಕಲರು ಒತ್ತಾಯಿಸಿದರು.
ಪಟ್ಟಣದ ಪುರಸಭೆ ಸಾಕಷ್ಟು ದೂರ ಇರುವುದರಿಂದ ಆಟೋ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಹಳೆಯ ಪುರಸಭೆಯಲ್ಲಿ ಒಂದು ಕೊಠಡಿ ನೀಡಿ ಅಂಗವಿಕಲರ ಪುನರ್ವಸತಿ ಕೇಂದ್ರ ತೆರೆಯಲು ಅನುಕೂಲ ಮಾಡಿಕೊಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಗಣೇಶ ಸವಣೂರು, ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ, ಪೊಲೀಸ್ ಅಧಿಕಾರಿ ಶಂಕರಗೌಡ ಪೋಲಿಸಗೌಡ್ರು ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ಅನೇಕ ಅಂಗವಿಕಲರು ಉಪಸ್ಥಿತರಿದ್ದರು.