ಬಣಜಿಗ ಸಮಾಜ ಭವನ ನಿರ್ಮಾಣಕ್ಕೆ ಸಹಾಯ, ಸಹಕಾರ

| Published : Jun 24 2024, 01:37 AM IST

ಸಾರಾಂಶ

ಭವಿಷ್ಯದ ದಿನಗಳಲ್ಲಿ ಬಣಜಿಗ ಸಮಾಜಕ್ಕೆ ಅಗತ್ಯವಿರುವ ಬಣಜಿಗ ಸಮಾಜ ಭವನ ನಿರ್ಮಿಸಲು ಮುಂದಾದಲ್ಲಿ ತಮ್ಮಿಂದಾದ ಸಹಾಯ-ಸಹಕಾರ ನೀಡುವೆ ಎಂದು ಪುಣೆಯ ಬಸವ ಕೇಂದ್ರದ ಸಂಶೋಧಕ ಡಾ.ಶಶಿಧರ ಪಟ್ಟಣ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಭವಿಷ್ಯದ ದಿನಗಳಲ್ಲಿ ಬಣಜಿಗ ಸಮಾಜಕ್ಕೆ ಅಗತ್ಯವಿರುವ ಬಣಜಿಗ ಸಮಾಜ ಭವನ ನಿರ್ಮಿಸಲು ಮುಂದಾದಲ್ಲಿ ತಮ್ಮಿಂದಾದ ಸಹಾಯ-ಸಹಕಾರ ನೀಡುವೆ ಎಂದು ಪುಣೆಯ ಬಸವ ಕೇಂದ್ರದ ಸಂಶೋಧಕ ಡಾ.ಶಶಿಧರ ಪಟ್ಟಣ ಭರವಸೆ ನೀಡಿದರು.ಇಲ್ಲಿನ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ 17ನೇ ವಾರ್ಷಿಕೋತ್ಸವ ಆಚರಣೆ ಮತ್ತು ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.85 ಮತ್ತು ಶೇ.90ಕ್ಕೂ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಬಣಜಿಗ ಬಾಂಧವರಲ್ಲಿ ಅಧ್ಯಯನ ಶೀಲತೆ ಕ್ಷೀಣಿಸುತ್ತಿದ್ದು, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಅಧ್ಯಯನ ಪ್ರವೃತ್ತಿ ಮುಂದುವರೆಸಿಕೊಂಡು ಹೋಗುವುದು ಅತೀ ಅವಶ್ಯಕ ಎಂದರು.ನಮ್ಮ ಮುಂದಿನ ಪೀಳಿಗೆಗೆ ನಾವು ಲಿಂಗ ಧಾರಣೆ ಮತ್ತು ಪೂಜೆಯ ಮಹತ್ವವನ್ನು ಹೇಳಿಕೊಡಬೇಕು. ಪ್ರತಿವರ್ಷ ನಿಮ್ಮ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ವಚನ ಗಾಯನ ಸ್ಪರ್ಧೆ ಏರ್ಪಡಿಸುವಂತೆ ಹಾಗೂ ನಿಮ್ಮ ಮಕ್ಕಳಿಗೆ ಲಿಂಗ ದೀಕ್ಷೆಯನ್ನು ಕೊಡಿಸುವಂತೆ ಮನವಿ ಮಾಡಿದರು.

ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಚೇರಮನ್ ವಿಶ್ವನಾಥ ಕಡಕೋಳ ಮಾತನಾಡಿ, ಬಣಜಿಗರು ಆದಿಯಾಗಿ ಎಲ್ಲರೂ ಶಿಕ್ಷಣ ಹೊಂದುವುದು ಇಂದಿನ ಅಗತ್ಯವಾಗಿದೆ ಎಂದರು.ಬಣಜಿಗ ಭವನ ನಿರ್ಮಾಣಕ್ಕೆ ತಾಲೂಕು ಘಟಕ ಕಳೆದ ಹಲವು ವರ್ಷಗಳಿಂದ ಯೋಚನೆ ನಡೆಸಿದ್ದು, ದಾನಿಗಳಿಂದ ಕನಿಷ್ಠ 20 ಗುಂಟೆ ನಿವೇಶನ ದೊರೆತಲ್ಲಿ ನಿರ್ಮಿಸಲು ಸನ್ನದ್ಧರಿರುವುದಾಗಿ ಸಭೆಗೆ ಮಾಹಿತಿ ನೀಡಿದರು.ವರ್ತಕ ಬಾಬುಗೌಡ ಪಾಟೀಲ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿ, ಉದ್ಘಾಟನಾ ಪರ ಮಾತುಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚೆನ್ನಪ್ಪ ಕೌಜಲಗಿ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಒಟ್ಟು 37 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ, ಪ್ರೋತ್ಸಾಹಿಸಲಾಯಿತು. ವೇದಿಕೆಯಲ್ಲಿ ಸಂಘದ ಮಹಿಳಾ ಘಟಕ ಅಧ್ಯಕ್ಷ ಮಹಾದೇವಿ ಉಪ್ಪಿನ ಉಪಸ್ಥಿತರಿದ್ದರು. ಪೂರ್ಣಿಮಾ ತಾಂವಶಿ ಮತ್ತು ಸುಹಾಸಿನಿ ನಂದಿ ನಿರೂಪಿಸಿದರು. ಪದ್ಮಾ ಕೌಜಲಗಿ ವಂದಿಸಿದರು.