ಸಾರಾಂಶ
ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಲ್ಲಿ ಗದಗ ಉಪವಿಭಾಗಾಧಿಕಾರಿ ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಂತೆ ವರ್ತಿಸುತ್ತಾ, ಅವಳಿ ನಗರದ ಅಭಿವೃದ್ಧಿಗೆ ಕಂಟಕವಾಗಿದ್ದಾರೆ ಎಂದು ಆರೋಪಿಸಿ ನಗರಸಭೆಯ ಬಿಜೆಪಿ ಸದಸ್ಯರು ಸೋಮವಾರ ಎಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಿ, ಬಾಯಿ ಬಡಿದುಕೊಂಡು ಪ್ರತಿಭಟಿಸಿದರು.
ಎಸಿ ಕಚೇರಿ ಚೇಂಬರ್ ಎದುರು ಕುಳಿತು ಪ್ರತಿಭಟನೆ ಮಾಡಿದರು. ಹಲವು ಗಂಟೆಗಳ ಕಾಲ ಚೇಂಬರ್ ಮುಂದೆ ಪ್ರತಿಭಟನೆ ನಡೆಸಿದರೂ ಎಸಿ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸದಸ್ಯರು ಸ್ಥಳದಲ್ಲಿದ್ದ ಇನ್ನುಳಿದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಅಲ್ಲಿಂದ ಎದ್ದು ರಸ್ತೆ ತಡೆ ನಡೆಸಲು ತೆರಳಿದರು.ಈ ವೇಳೆ ಕಚೇರಿಗೆ ಆಗಮಿಸಿದ ಎಸಿ ಗಂಗಪ್ಪ ಅವರನ್ನೂ ಕಚೇರಿ ಒಳಗೆ ಬಿಡದ ಮಾಜಿ ನಗರಸಭೆ ಅಧ್ಯಕ್ಷೆ ಹಾಗೂ ಸದಸ್ಯರು ಕೆಲಹೊತ್ತು ಧಿಕ್ಕಾರ ಕೂಗುತ್ತಾ ತಡೆದು ನಿಲ್ಲಿಸಿದರು. ಈ ವೇಳೆ ಹಲವಾರು ಸದಸ್ಯರ ಅವರ ಮುಂದೆಯೇ ಬಾಯಿ ಬಡಿದುಕೊಂಡು ಅವಳಿ ನಗರದ ಅಭಿವೃದ್ಧಿ ವಿರೋಧಿ ಅಧಿಕಾರಿ ಎಸಿ ಗಂಗಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆರು ತಿಂಗಳಿನಿಂದ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷ ಹುದ್ದೆ ಖಾಲಿ ಇವೆ. ಅವಳಿ ನಗರದ ಅಭಿವೃದ್ಧಿಗೆ ಆಸಕ್ತಿ ವಹಿಸದೇ, ಅಡ್ಡಿಪಡಿಸುತ್ತಿದ್ದಾರೆ. ಮೇಲಾಗಿ ಸಚಿವ ಎಚ್.ಕೆ. ಪಾಟೀಲ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.ಅಲ್ಲಿಂದ ಎಸಿ ಕಚೇರಿಯ ಮುಖ್ಯದ್ವಾರಕ್ಕೆ ಆಗಮಿಸಿ ಅಲ್ಲಿಯೂ ಕೆಲಕಾಲ ಪ್ರತಿಭಟನೆ ನಡೆಸಿ, ಫೆಬ್ರುವರಿ ಮೊದಲ ವಾರದಲ್ಲೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ, ಅವಳಿ ನಗರದ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು. ಒಂದು ವೇಳೆ ಚುನಾವಣೆ ನಡೆಯದೇ ಹೋದಲ್ಲಿ, ಮುಂಬರುವ ದಿನಗಳಲ್ಲಿ ಎಸಿ ಕಚೇರಿಗೆ ಬೀಗ ಜಡಿಯುವ ಮೂಲಕ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಚುನಾವಣೆ: ನಗರಸಭೆ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್‌ನ ಇಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ, ಸರ್ಕಾರದ ಮೀಸಲಾತಿಯನ್ನೇ ಎತ್ತಿ ಹಿಡಿದು, ಇವರ ಅರ್ಜಿ ತಿರಸ್ಕೃತಗೊಳಿಸಿದೆ. ಹೀಗಾಗಿ ಮೊದಲಿದ್ದ ಮೀಸಲಾತಿಯೇ ಮುಂದುವರಿಯಲಿದ್ದು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಬೇಕಿದೆ. ಹುನ್ನಾರ: ಈಗಾಗಲೇ ಕೋರ್ಟ್ ಆದೇಶ ಮಾಡಿದ್ದರೂ ಅಧಿಕಾರಿಗಳು ಚುನಾವಣೆ ನಡೆಸುತ್ತಿಲ್ಲ. ಜನರಿಂದ ಆಯ್ಕೆಯಾದ ಸದಸ್ಯರು ಜನರ ಕೆಲಸ ಮಾಡಲು ಆಗುತ್ತಿಲ್ಲ. ಬಿಜೆಪಿ ಅವರು ಅಧಿಕಾರ ನಡೆಸಬಾರದು ಎಂದು ಸಚಿವ ಎಚ್.ಕೆ. ಪಾಟೀಲ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಬಿಜೆಪಿ ಅಧಿಕಾರ ನಡೆಸಬಾರದು ಎನ್ನುವುದು ಅವರ ಹುನ್ನಾರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಹೇಳಿದರು.
ಚರ್ಚಿಸಲಾಗಿದೆ: ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಸಂಸದರ ಸಮಯ ಕೇಳಿದ್ದೇವೆ. ಫೆ. 2ನೇ ವಾರದಲ್ಲಿ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗುತ್ತದೆ. ಈ ಕುರಿತು ಈಗಾಗಲೇ ಇಬ್ಬರೊಂದಿಗೂ ಚರ್ಚಿಸಲಾಗಿದೆ ಎಂದು ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಹೇಳಿದರು.