ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ನಾಳೆ

| Published : Nov 01 2025, 03:15 AM IST

ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ನಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ನ.2ರಂದು ಕೆ-ಸೆಟ್-2025 ನಡೆಯಲಿದ್ದು, ಅತ್ಯಂತ ವ್ಯವಸ್ಥಿತವಾಗಿ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ರಾಜ್ಯದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್-2025)ಗಳು ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ನ.2ರಂದು ನಡೆಯಲಿದ್ದು, ಅತ್ಯಂತ ವ್ಯವಸ್ಥಿತವಾಗಿ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.

ವಿಜಯಪುರ ನಗರದ 21 ಹಾಗೂ ಗ್ರಾಮೀಣ 01 ಸೇರಿದಂತೆ ಒಟ್ಟು 22 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪತ್ರಿಕೆ-1 ಹಾಗೂ ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ. ವಿಜಯಪುರ ನಗರ ಪರೀಕ್ಷಾ ಕೇಂದ್ರಗಳಲ್ಲಿ 9055 ಹಾಗೂ ಗ್ರಾಮೀಣ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಗೆ 431 ಸೇರಿದಂತೆ ಒಟ್ಟು 9486 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದು, ಕೊಠಡಿ ಮೇಲ್ವಿಚಾರಕರು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯ ಪ್ರವೇಶ ಪತ್ರ ಮತ್ತು ಗುರುತಿನ ಪತ್ರದೊಂದಿಗೆ ಕಡ್ಡಾಯವಾಗಿ ತಾಳೆ ಮಾಡಿಸುವುದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಇರುವ ಆಸನದಲ್ಲಿ ಆಸನವಾಗಿರುವ ಬಗ್ಗೆ ಪರಿಶೀಲನೆ, ನಿಗದಿತ ಅವಧಿಯಲ್ಲಿ ಪ್ರಶ್ನೆಪತ್ರಿಕೆ- ಒಎಂಆರ್‌ ವಿತರಣೆ ಸೇರಿದಂತೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಪರೀಕ್ಷೆಗೆ ಸಂಬಂಧಿಸಿದ ಗೌಪ್ಯ ಸಾಮಗ್ರಿಗಳನ್ನು 08 ಮಾರ್ಗಾಧಿಕಾರಿಗಳ ತಂಡಕ್ಕೆ ಹಸ್ತಾಂತರಿಸಬೇಕು. ಪರೀಕ್ಷೆ ಸಂಬಂಧಿಸಿದ ಗೌಪ್ಯ ಸಾಮಗ್ರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಹಸ್ತಾಂತರಿಸಲು ತ್ರಿಸದಸ್ಯರನ್ನೊಳಗೊಂಡ 08 ಮಾರ್ಗಾಧಿಕಾರಿಗಳ ತಂಡವನ್ನು ನೇಮಕ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ 01 ವೀಕ್ಷಕರಂತೆ ಒಟ್ಟು 22 ವೀಕ್ಷಕರನ್ನು ನೇಮಕ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ 01 ಉಪ ಮುಖ್ಯ ಅಧೀಕ್ಷಕರು, 01 ಪ್ರಶ್ನೆ ಪತ್ರಿಕೆ ಪಾಲಕರು ಮತ್ತು 01 ವಿಶೇಷ ಸ್ಥಾನಿಕ ಜಾಗೃತ ದಳ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರು ಪರೀಕ್ಷಾ ದಿನದಂದು ಪರೀಕ್ಷೆಗೆ ಹಾಜರಾಗುವ ಮತ್ತು ಗೈರಾಗುವ ಅಭ್ಯರ್ಥಿಗಳ ವಿವರವನ್ನು ದಾಖಲಿಸಬೇಕು. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಝರಾಕ್ಸ್ ಅಂಗಡಿಗಳನ್ನು ಬಂದ ಮಾಡಲು ಕ್ರಮ ವಹಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಬೆಳಕಿನ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ, ಸೇರಿದಂತೆ ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಸುಸೂತ್ರವಾಗಿ ಪರೀಕ್ಷೆಗಳು ನಡೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಕೆ.ಹೊಸಮನಿ, ಖಜಾನೆ ಇಲಾಖೆ ಉಪನಿರ್ದೇಶಕ ಹಣಮಂತ ಕಾಲತಿಪ್ಪಿ, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ, ಎಲ್.ಜಿ.ಕುಂಬಾರ, ಕಗ್ಗೊಡ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಕೆ.ಎ.ಉಪ್ಪಾರ ಸೇರಿದಂತೆ ಪರೀಕ್ಷೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.