ಸಾರಾಂಶ
ಗೋಕರ್ಣ: ಖಗೋಳವೆಂಬ ಕನ್ನಡಿಯಿಂದ ನಮ್ಮ ಬದುಕಿನ ಅಂತರಂಗ ಹಾಗೂ ಬಹಿರಂಗವನ್ನು ನೋಡಿಕೊಳ್ಳಲು ಅವಕಾಶವಿದೆ. ಇದನ್ನು ನಮ್ಮ ಪೂರ್ವಜರು ಸಹಸ್ರ ಸಹಸ್ರ ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು ಶನಿವಾರ ''''ಕಾಲ'''' ಪ್ರವಚನ ಸರಣಿಯಲ್ಲಿ ಆಶೀರ್ವಚನ ನೀಡಿದರು. ಕನ್ನಡಿಯನ್ನು ನಮ್ಮನ್ನು ನಾವು ನೋಡಿಕೊಂಡ ಹಾಗೆ ಅಥವಾ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಅಂತರಂಗ ಮತ್ತು ಬಹಿರಂಗವನ್ನು ಬಿಂಬಿಸುವ ಕನ್ನಡಿ ಅಂತರಿಕ್ಷ. ಅಂತರಿಕ್ಷವೆಂಬ ಕನ್ನಡಿಯಲ್ಲಿ ನಮ್ಮ ಬದುಕನ್ನು ನಾವು ನೋಡಿಕೊಳ್ಳಬಹುದು ಎಂದು ನಮ್ಮ ಪೂರ್ವಜರು ಸಹಸ್ರ ಸಹಸ್ರ ವರ್ಷಗಳ ಹಿಂದೆಯೇ ತೋರಿಸಿಕೊಟ್ಟಿದ್ದಾರೆ. ಖಗೋಳವೆಂಬ ಕನ್ನಡಿಯಿಂದ ಇಡೀ ಬದುಕನ್ನು ನೋಡಿಕೊಳ್ಳಬಹುದು ಎಂದು ವಿಶ್ಲೇಷಿಸಿದರು.ವಿಶಾಲ ಆಕಾಶದಲ್ಲಿ ನಮ್ಮ ಬದುಕು ಎಲ್ಲಿದೆ ಎಂದು ತಿಳಿದುಕೊಳ್ಳಲು ಅವಕಾಶವಿದೆ. ಜಾತಕದಲ್ಲಿ ''''ಲಗ್ನ''''ವನ್ನು ಚೆನ್ನಾಗಿ ಅರ್ಥೈಸಿಕೊಂಡರೆ ಇಡೀ ಬದುಕನ್ನು ತಿಳಿದುಕೊಳ್ಳಬಹುದು. ಆಕಾಶ ಮತ್ತು ಭೂಮಿ ಸಂಧಿಸುವ ತಾಣವೇ ಲಗ್ನ. ಒಂದಕ್ಕೊಂದು ತಾಗುವುದನ್ನು, ಸೇರುವುದನ್ನು ಅದು ಬಿಂಬಿಸುತ್ತದೆ. ಭೂಮಿಯ ಸುತ್ತ ಇರುವ ಆಕಾಶವನ್ನು ಸರಿಯಾಗಿ ಹನ್ನೆರಡು ಪಾಲು ಮಾಡಿದರೆ ಒಂದೊಂದೂ ರಾಶಿ ಎನಿಸಿಕೊಳ್ಳುತ್ತದೆ ಎಂದು ಬಣ್ಣಿಸಿದರು.
ನಾವು ಹುಟ್ಟುವ ಸಮಯದಲ್ಲಿ ಪೂರ್ವದ ತುದಿಯಲ್ಲಿ ಆಕಾಶದ ಯಾವ ಭಾಗ ಸೇರುತ್ತದೆಯೋ ಅದು ನಿಮ್ಮ ಲಗ್ನ ಎನಿಸಿಕೊಳ್ಳುತ್ತದೆ. ಆ ರಾಶಿಯ ಅಧಿಪತಿ ಆಯಾ ವ್ಯಕ್ತಿಯ ಬದುಕನ್ನು ಬಿಂಬಿಸುತ್ತದೆ. ಹೀಗೆ ನಮ್ಮ ಬದುಕಿನ ಪ್ರತಿಬಿಂಬವನ್ನು ನೋಡಿಕೊಳ್ಳಬೇಕು ಎಂದರೆ, ಜನ್ಮದಿನಾಂಕ, ಸ್ಥಳ ಮತ್ತು ಸಮಯವನ್ನು ನಿಖರವಾಗಿ ತಿಳಿದಿರಬೇಕು. ಆ ರಾಶಿಯ ಗ್ರಹ ಆ ಜಾತಕದ ವ್ಯಕ್ತಿಯೇ ಆಗಿರುತ್ತಾನೆ. ದ್ವಾದಶ ರಾಶಿಗಳಂತೆ ದ್ವಾದಶ ಭಾವಗಳೂ ಇರುತ್ತವೆ. ಲಗ್ನ ಒಂದನೇ ಭಾವವಾದರೆ, ಮುಂದಿನ ರಾಶಿಗಳು ಕ್ರಮವಾಗಿ 2ರಿಂದ ಹನ್ನೆರಡನೇ ರಾಶಿಯನ್ನು ಬಿಂಬಿಸುತ್ತವೆ. ದೇಹ- ಆರೋಗ್ಯವನ್ನು ಲಗ್ನ ಅಥವಾ ಮೊದಲ ಭಾವ ಬಿಂಬಿಸುತ್ತದೆ. ಮಾತು- ವಿದ್ಯೆ- ಕುಟುಂಬ- ಧನವನ್ನು ಎರಡನೇ ಭಾವ, ಧೈರ್ಯ, ದುರ್ಬುದ್ಧಿ, ಸಹೋದರರನ್ನು ಮೂರನೇ ಭಾವ ಸೂಚಿಸುತ್ತದೆ. ಚತುರ್ಥಭಾವ ಮುಖ್ಯವಾಗಿ ತಾಯಿ, ಸೋದರಮಾವ, ಜಾಗ, ಸುಖ, ವಾಹನ, ಪಶು, ಸ್ನೇಹಿತನನ್ನು ಸೂಚಿಸುತ್ತದೆ ಎಂದು ವಿವರಿಸಿದರು.ಪ್ರಜ್ಞೆ, ಬುದ್ಧಿ, ವಿವೇಕಶಕ್ತಿ, ಮೇಧಶಕ್ತಿ, ವಿವೇಚನೆ, ಸಲಹೆಗಾರರು, ಮಕ್ಕಳು, ಹಳೆ ಜನ್ಮದ ಪುಣ್ಯವನ್ನು ಪಂಚಮ ಭಾವ ಸೂಚಿಸುತ್ತದೆ. ಷಷ್ಠಭಾವವು ಕಳ್ಳ, ಶತ್ರು, ರೋಗ, ವಿಘ್ನ, ಘಾಸಿಯನ್ನು ಬಿಂಬಿಸುತ್ತದೆ. ವಿವಾಹ, ಪತ್ನಿ, ಸ್ತ್ರೀ, ಯುದ್ಧ, ಬಾಂಧವ್ಯ, ಬೇರ್ಪಡಿಕೆ, ಏಳನೇ ಭಾವದಿಂದ ತಿಳಿಯುತ್ತದೆ. ಎಂಟನೇ ಭಾವದಿಂದ ಮರಣ, ವಿಘ್ನ, ನಾಶ, ವಿಪತ್ತು, ಅಪವಾದ, ಮಠ, ಕೆಲ ಕಾಯಿಲೆಗಳು ಮತ್ತಿತರ ಅಂಶಗಳನ್ನು ತಿಳಿದುಕೊಳ್ಳಬಹುದು. ಭಾಗ್ಯ, ಧರ್ಮ, ದಯೆ, ಪುಣ್ಯ, ತಪಸ್ಸು, ತಂದೆ, ದಾನ, ಉಪಾಸನೆ, ಅನುಷ್ಠಾನ, ಸೌಶೀಲ್ಯಗಳು ಒಂಬತ್ತನೇ ಭಾವದಿಂದ ತಿಳಿಯುತ್ತದೆ. 9ನೇ ಮನೆಯ ಅಧಿಪತಿ ಯಾವ ಮನೆಯಲ್ಲಿರುತ್ತಾನೋ ಅದರಿಂದ ನಮ್ಮ ಹಿಂದಿನ ಜನ್ಮವನ್ನು ತಿಳಿದುಕೊಳ್ಳಬಹುದು ಎಂದರು.
ದೇವಸ್ಥಾನ, ಛತ್ರ, ಕರ್ಮ, ಆಜ್ಞಾಶಕ್ತಿಯನ್ನು 10ನೇ ಮನೆಯಿಂದ ಚಿಂತನೆ ಮಾಡಬಹುದು. 11ನೇ ಮನೆಯಿಂದ ನಮ್ಮ ಆಶೋತ್ತರಗಳ ಈಡೇರಿಕೆಯನ್ನು ತಿಳಿಯಬಹುದು. ಎಲ್ಲ ಲಾಭಗಳು, ಹಿರಿಯಣ್ಣ ಹನ್ನೊಂದನೇ ಭಾವದಿಂದ ನಿರ್ಧರಿಸಲ್ಪಟ್ಟರೆ, ಪಾಪ ನಷ್ಟಗಳು, ಸ್ಥಾನಭ್ರಂಶ ಮತ್ತಿತರ ಅಂಶಗಳನ್ನು ಹನ್ನೆರಡನೇ ಮನೆಯಿಂದ ನಿರ್ಧರಿಸಲ್ಪಡುತ್ತದೆ ಎಂದು ವಿವರಿಸಿದರು.ಗೋವಿಶ್ವ ಮತ್ತು ಗೋಸೇವಾ ಆ್ಯಪನ್ನು ಹಿರಿಯ ಲೆಕ್ಕಪರಿಶೋಧಕ ಮತ್ತು ಗೋಸೇವಕ ರಾಮಕೃಷ್ಣ ಕಲ್ಲಬ್ಬೆ ಬಿಡುಗಡೆ ಮಾಡಿದರು. ಗೋವು ವಿಶ್ವದ ತಾಯಿ. ಗಾವೋ ವಿಶ್ವಸ್ಯ ಮಾತರಃ ಎಂಬ ಭಾವವನ್ನು ಇರಿಸಿಕೊಂಡು ಗೋವಿಶ್ವದ ಪರಿಕಲ್ಪನೆ ರೂಪಿಸಲಾಗಿದೆ. ವಿಶ್ವವಿದ್ಯಾಪೀಠದ ಮಧ್ಯೆ ಇರುವ ಗೋಸನ್ನಿಧಿಯ ಕಾರಣದಿಂದ ಗೋವಿಶ್ವ ಎಂದು ಹೆಸರಿಸಲಾಗಿದೆ. ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಶುದ್ಧ ದೇಸಿ ಹಾಲು ಸಿಗಬೇಕು ಎಂಬ ಕಾರಣಕ್ಕೆ ಗೋವಿಶ್ವ ಅಭಿವೃದ್ಧಿಪಡಿಸಲಾಗಿದೆ ಎಂದು ಇಂದು ಅನಾವರಣಗೊಂಡ ಗೋವಿಶ್ವದ ಬಗ್ಗೆ ವಿವರಿಸಿದರು.
ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೆ. ವಿಷ್ಣು ರಚಿಸಿದ ಮಾಂಡೂಕ್ಯೂಪನಿಷತ್‍ನ ಕನ್ನಡ ಭಾವಾರ್ಥ ಕೃತಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ನಡೆಯಿತು. ಶ್ರೀಮಠದ ಜಾಲತಾಣಿಗರಿಂದ ಸರ್ವಸೇವೆ ಮತ್ತು ಗೋಫಲ ಟ್ರಸ್ಟ್ ವತಿಯಿಂದ ಪಾದುಕಾಪೂಜೆ ಸೇವೆ ನೆರವೇರಿಸಲಾಯಿತು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಆಡಳಿತ ಖಂಡದ ಸಂಯೋಜಕ ಹಾರಕೆರೆ ನಾರಾಯಣ ಭಟ್, ಸಂಘಟನಾ ಖಂಡದ ಶ್ರೀಸಂಯೋಜಕ ಡಾ.ವೈ.ವಿ. ಕೃಷ್ಣಮೂರ್ತಿ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಶ್ರೀಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.