ಸಾರಾಂಶ
ಶಿವಮೊಗ್ಗದ 'ಅಹರ್ನಿಶಿ' ಪ್ರಕಾಶನ ಪ್ರಕಟಿಸಿರುವ ಉಷಾ ಅವರ 'ಬಾಳಬಟ್ಟೆ' ಕಾದಂಬರಿಯನ್ನು 25 ಸಾವಿರ ರು. ನಗದು ಬಹುಮಾನ, ಫಲಕವನ್ನು ಒಳಗೊಂಡ ಈ ಪ್ರಶಸ್ತಿಗೆ ಆಯ್ಕೆ
ಕನ್ನಡಪ್ರಭ ವಾರ್ತೆ ಮೈಸೂರು
ಸಮತಾ ಅಧ್ಯಯನ ಕೇಂದ್ರವು ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜು. 21ರ ಭಾನುವಾರ ಬೆಳಗ್ಗೆ 10.30ಕ್ಕೆ ಸರಸ್ವತಿಪುರಂ ಕಾಮಾಕ್ಷಿ ಆಸ್ಪತ್ರೆ ಸಮೀಪದ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಆಯೋಜಿಸಿದೆ.ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ. ಎಂ. ಉಷಾ ಅವರಿಗೆ 2024ನೇ ಸಾಲಿನ ಪ್ರಶಸ್ತಿಯನ್ನು ಪುಣೆಯ ಸಿಂಬಯಾಸಿಸ್ ಕಾನೂನು ಕಾಲೇಜು ಡೀನ್ ಡಾ. ಶಶಿಕಲಾ ಗುರುಪುರ ಅವರು ಪ್ರದಾನ ಮಾಡುವರು.
ಶಿವಮೊಗ್ಗದ ''''ಅಹರ್ನಿಶಿ'''' ಪ್ರಕಾಶನ ಪ್ರಕಟಿಸಿರುವ ಉಷಾ ಅವರ ''''ಬಾಳಬಟ್ಟೆ'''' ಕಾದಂಬರಿಯನ್ನು 25 ಸಾವಿರ ರು. ನಗದು ಬಹುಮಾನ, ಫಲಕವನ್ನು ಒಳಗೊಂಡ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ವಿಜಯಾದಬ್ಬೆ ಅವರ ಒಡನಾಡಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಡಾ.ಟಿ. ಸುಬ್ರಹ್ಮಣ್ಯಂ ಅವರು ತಮ್ಮ ಮತ್ತು ವಿಜಯಾ ಅವರ ಒಡನಾಟದ ಕುರಿತು ಮಾತನಾಡುವರು. ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಅವರು ಅಧ್ಯಕ್ಷತೆ ವಹಿಸುತ್ತಾರೆ.
ವಿಜಯಾದಬ್ಬೆ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಕಾವ್ಯ ಮತ್ತು ಲಲಿತ ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.20ಕ್ಕೆ ಸಾಹಿತ್ಯ ಕಮ್ಮಟ
ಕಾವ್ಯ ಮತ್ತು ಲಲಿತ ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರು ಮತ್ತು ಆಸಕ್ತರಿಗಾಗಿ ಜುಲೈ 20ರ ಶನಿವಾರ ಗಂಗೋತ್ರಿ ಬಡಾವಣೆಯ ಯೂತ್ ಹಾಸ್ಟೆಲ್ ನಲ್ಲಿ ಕಾವ್ಯ ಮತ್ತು ಪ್ರಬಂಧ ಕಮ್ಮಟವನ್ನು ಆಯೋಜಿಸಿದೆ.ಅಂದು ಬೆಳಗ್ಗೆ 10ಕ್ಕೆ ಆರಂಭವಾಗುವ ಮೊದಲ ಗೋಷ್ಠಿಯಲ್ಲಿ ಕವಯತ್ರಿಯರಾದ ಎಚ್.ಆರ್. ಸುಜಾತ ಮತ್ತು ಮೌಲ್ಯ ಸ್ವಾಮಿ ಕಾವ್ಯಾನುಸಂಧಾನ ನಡೆಸುವರು.
ನಂತರ ನಡೆಯುವ ಪ್ರಬಂಧ ಕಮ್ಮಟದಲ್ಲಿ ಲೇಖಕ ಡಾ. ರಾಜಪ್ಪ ದಳವಾಯಿ ಅವರು ಸಂಪನ್ಮೂಲ ವ್ಯಕ್ತಿಯಾಗಿರುವರು. ಮಧ್ಯಾಹ್ನ 2 ಕ್ಕೆ ಆರಂಭವಾಗುವ 3 ನೇ ಗೋಷ್ಠಿಯಲ್ಲಿ ಡಾ. ಶಶಿಕಲಾ ಗುರುಪುರ ಅವರು ''''ಸಂವೇದನಾಶೀಲ ಬರಹ-ಕೆಲವು ಆಯಾಮಗಳು'''' ವಿಷಯವಾಗಿ ಶಿಬಿರಾರ್ಥಿಗಳೊಂದಿಗೆ ಸಂವಾದಿಸುವರು.