ಸದ್ಯ ಕೃಷ್ಣಾ ಶಾಂತ, ನಿಂತಿಲ್ಲ ಆತಂಕ

| Published : Aug 11 2024, 01:37 AM IST

ಸಾರಾಂಶ

ಕೃಷ್ಣಾ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಎಲ್ಲವನ್ನೂ ಇದ್ದಲ್ಲಿಯೇ ಬಿಟ್ಟು ಮನೆ ತೊರೆದು ಕಾಳಜಿ ಕೇಂದ್ರಗಳಿಗೆ ಆಶ್ರಯ ಪಡೆದಿದ್ದ ನೆರೆ ಸಂತ್ರಸ್ತರು ಕೃಷ್ಣೆ ಆರ್ಭಟ ಕಡಿಮೆಯಾಗಿರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡಕೃಷ್ಣಾ ನದಿ ಉಕ್ಕಿ ಹರಿದಿದ್ದರಿಂದ ಹಲವಾರು ಗ್ರಾಮಗಳು ಜಲಾವೃತಗೊಂಡವು. ನಾವು ಬದುಕಿ ಬಾಳುತ್ತಿದ್ದ ಮನೆ, ಹೊಲವನ್ನೆಲ್ಲ ತೊರೆಯಬೇಕಾಯಿತು. ಪ್ರವಾಹ ಪರಿಸ್ಥಿತಿ ಉದ್ಭವವಾಗಿದ್ದರಿಂದ ನಾವೆಲ್ಲಾ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಬೇಕಾಯಿತು. ಎಲ್ಲವೂ ಇದ್ದು, ಎಲ್ಲರೂ ಇದ್ದರೂ ಅನಾಥರಂತೆ ಬದುಕುವ ಸ್ಥಿತಿ ಇದೆ. ಈ ಸ್ಥಿತಿ ಯಾರಿಗೂ ಬೇಡ....!

ಹೀಗಂತ ಕೃಷ್ಣಾ ನೆರೆಯಿಂದ ಮನೆ ಬಿಟ್ಟು ಕುಟುಂಬಸಹಿತರಾಗಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದ ಜುಗೂಳ ಗ್ರಾಮದ ನೆರೆ ಸಂತ್ರಸ್ತ ಅಣ್ಣಾಸಾಹೇಬ ಪಾಟೀಲ ಅವರ ನೋವು ತೋಡಿಕೊಂಡರು. ಪಾಟೀಲರಂತೆ ನೂರಾರು ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿವೆ. ಎಲ್ಲ ಕುಟುಂಬಗಳಲ್ಲಿಯೂ ಒಂದೊಂದು ನೋವು, ಸಂಕಟವಿದೆ. ಜತೆಗೆ ಒಂದಿಷ್ಟು ಅಸಮಾಧಾನ ಕೂಡ ಇದೆ. ಕಾರಣ ನೆರೆಯಿಂದ ಇವರನ್ನು ಕಾಪಾಡಲು ಯಾವ ಸರ್ಕಾರಗಳು ಬಂದಿಲ್ಲ. ಹೀಗಾಗಿ ಮಳೆಗಾಲ ಬಂದರೆ ಈ ಗ್ರಾಮಗಳಲ್ಲಿನ ಜನರ ವೇದನೆ, ರೋದನೆ ಎರಡೂ ಶುರುವಾಗಲಿದೆ. ಶಾಶ್ವತ ಸೂರು ಕೊಡಿ ಎಂದು ಪ್ರವಾಹ ಬಂದಾಗಲೊಮ್ಮೆ ಇವರು ಕೂಗು ಹಾಕುತ್ತಾರೆ. ಆದರೆ, ಪ್ರವಾಹ ಇಳಿದೊಡನೆ ನೀರಿನೊಂದಿಗೆ ಆ ಕೂಗು ಹರಿದು ಹೋಗುತ್ತದೆ. ಬೇಸಿಗೆ ಬಂದಾಗ ಕೂಗು ಕೂಡ ಬತ್ತಿ ಹೋಗುತ್ತದೆ. ಹೀಗಾಗಿ ಆ ಆತಂಕ ಇನ್ನೂ ನೆರೆ ಸಂತ್ರಸ್ತರ ಮನದಲ್ಲಿ ಮರೆಮಾಚಿಲ್ಲ.

ಮರಳಿ ಮನೆಯತ್ತ ಸಂತ್ರಸ್ತರು:

ಕೃಷ್ಣಾ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಎಲ್ಲವನ್ನೂ ಇದ್ದಲ್ಲಿಯೇ ಬಿಟ್ಟು ಮನೆ ತೊರೆದು ಕಾಳಜಿ ಕೇಂದ್ರಗಳಿಗೆ ಆಶ್ರಯ ಪಡೆದಿದ್ದ ನೆರೆ ಸಂತ್ರಸ್ತರು ಕೃಷ್ಣೆ ಆರ್ಭಟ ಕಡಿಮೆಯಾಗಿರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹದಿನೈದು ದಿನಗಳಿಂದ ಆತಂಕದಲ್ಲೇ ಕಾಳಜಿ ಕೇಂದ್ರಗಳಲ್ಲಿ ಕಾಲ ಕಳೆಯುತ್ತಿದ್ದ ಸಂಸ್ತಸ್ತರು ಈಗ ಮನೆಗಳತ್ತ ಮುಖ ಮಾಡಿದ್ದಾರೆ.

ಸತತವಾಗಿ ಸುರಿದ ಭಾರೀ ಮಳೆಯಿಂದ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿದ್ದರಿಂದ ಜಿಲ್ಲೆಯ ಕೃಷ್ಣಾ ತೀರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿ ನದಿ ಪಾತ್ರದ ಹಲವು ಗ್ರಾಮಗಳು ಜಲಾವೃತಗೊಂಡಿದ್ದವು. ಕೆಲವೆಡೆ ಸೇತುವೆ ಮುಳುಗಡೆಯಾಗಿ ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡ ಗ್ರಾಮಗಳು ಹಾಗೂ ಜಲಾವೃತಗೊಂಡ ಗ್ರಾಮಗಳ ಜನರು ಮನೆಗಳನ್ನು ತೊರೆದು ಜೀವ ಉಳಿಸಿಕೊಳ್ಳಲು ಜಾನವಾರುಗಳೊಂದಿಗೆ ಗಂಟು-ಮೂಟೆ ಕಟ್ಟಿಕೊಂಡು ಭಾರವಾದ ಹೃದಯದಿಂದ ತಾಲೂಕಾಡಳಿತ ತೆರೆದಿದ್ದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಂಡು ಶಾಂತಳಾಗುವಂತೆ ಕೃಷ್ಣೆಯ ಮೊರೆ ಹೋಗಿದ್ದರು. ಕಾಳಜಿ ಕೇಂದ್ರಗಳನ್ನು ತಾಲೂಕಾಡಳಿತ ಕಾಳಜಿ ಕೇಂದ್ರ ತೆರೆದು ಅನ್ನ, ಹೊದಿಕೆ ಸೇರಿದಂತೆ ಅಗತ್ಯ ವಸ್ತುಗಳ್ನು ನೀಡಿತ್ತು.. ಜಾನುವಾರುಗಳಿಗೂ ಮೇವಿನ ವ್ಯವಸ್ಥೆ ಮಾಡಲಾಗಿತ್ತು.

ಆದರೆ, ಮನೆಯಲ್ಲಿ ಕಾಳು, ಕಡಿ, ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಬಂದವರು, ಕಾಳಜಿ ಕೇಂದ್ರದಲ್ಲಿಯೇ ಊಟ ಮಾಡಿ ಅನಾಥರಂತೆ ಬದುಕು ನಡೆಸಿದ್ದರು. ಯಾವಾಗ ನೀರು ಇಳಿಯುತ್ತದೆ. ಯಾವಾಗ ಮನೆ ಸೇರಿಕೊಳ್ಳುತ್ತೇವೆಯೋ ಎಂದು ಎದುರು ನೋಡುತ್ತಿದ್ದರು. ಸಂತ್ರಸ್ತರ ಮೊರೆಗೆ ಸ್ಪಂದಿಸುವ ರೀತಿಯಲ್ಲಿ ಕೃಷ್ಣೆ ಈಗ ಶಾಂತಳಾಗಿ ತನ್ನ ಮೂಲ ಒಡಲು ಸೇರಿಕೊಂಡಿದ್ದಾಳೆ. ಹೀಗಾಗಿ, ಸಂತ್ರಸ್ತರಲ್ಲಿ ದೊಡ್ಡ ಗಂಡಾಂತರದಿಂದ ಪಾರಾದ ಅನುಭವ ಮೂಡಿದ್ದು, ಸಂತಸದಿಂದ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

------------

ಕೋಟ್.....

ಕೃಷ್ಣಾ ನದಿ ಉಕ್ಕಿ ಹರಿದಿದ್ದರಿಂದ ಹಲವಾರು ಗ್ರಾಮಗಳು ಜಲಾವೃತಗೊಂಡು, ನಾವೆಲ್ಲಾ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದೆವು. ಎಲ್ಲವೂ ಇದ್ದರೂ ಅನಾಥರಂತೆ ಬದುಕುವ ಸ್ಥಿತಿ ಇದೆ. ಈ ಸ್ಥಿತಿ ಯಾರಿಗೂ ಬೇಡ. ಕಳೆದ ಹದಿನೈದು ದಿನಗಳಿಂದ ಕಾಳಜಿ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆಯಿದ್ದರೂ ಮನೆಯಂತೆ ಆಗವುದಿಲ್ಲ. ಆದರೂ ಕೃಷ್ಣೆ ನಮ್ಮ ಮೇಲೆ ಮತ್ತೆ ಕರುಣೆ ತೋರಿದ್ದಾಳೆ. ನದಿ ನೀರು ಇಳಿದಿದ್ದು, ಮನೆಗಳಿಗೆ ಹೊರಟಿದ್ದೇವೆ. ಮನೆ ಪರಿಸ್ಥಿತಿ, ಮನೆಯಲ್ಲಿನ ವಸ್ತುಗಳ ಸ್ಥಿತಿ ಏನಾಗಿದೆಯೋ ನೋಡಬೇಕು.

-ಅಣ್ಣಾಸಾಹೇಬ ಪಾಟೀಲ

ನೆರೆ ಸಂತ್ರಸ್ತ ಜುಗೂಳ

ಪ್ರತಿ ಬಾರಿ ಕೃಷ್ಣೆಗೆ ನೆರೆ ಬಂದಾಗ ನದಿ ತೀರದಲ್ಲಿನ ಹಳ್ಳಿಗಳಲ್ಲಿಯ ಸ್ಥಿತಿ ತೀರಾ ಚಿಂತಾಜನಕವಾಗುತ್ತದೆ. ಹೀಗೆ, ನೆರೆ ಬಂದಾಗ ಕಾಳಜಿ ಕೇಂದ್ರಗಳನ್ನು ತೆರೆದು ಆರೈಕೆ ಮಾಡುವ ಬದಲು ಸರ್ಕಾರ, ಜಿಲ್ಲಾಡಳಿತ, ಅಧಿಕಾರಿಗಳು, ಜನಪ್ರತಿನಿಧಿಗಳು ನಮಗೆ ಶಾಶ್ವತ ಪರಿಹಾರ ಕಲ್ಪಿಸಿದರೆ ಈ ತೊಂದರೆಯೇ ಇರುವುದಿಲ್ಲ.

-ವಿಶ್ವನಾಥ ಪಾಟೀಲ, ನೆರೆ ಸಂತ್ರಸ್ತ ಕೃಷ್ಣಾ ಕಿತ್ತೂರ

------

ಪೊಟೊಶಿರ್ಷಿಕೆ(10-ಕಾಗವಾಡ-1)