ಸಾರಾಂಶ
ಜೆಪಿ ನಗರದ ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ನ್ಯಾಯಾಧೀಶೆ ಎಂ ಎಸ್ ಶಶಿಕಲಾ ದಿಢೀರ್ ಭೇಟಿ ನೀಡಿದರು. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗಾಗಿ ಸರ್ಕಾರ ಹಲವಾರು ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ನಿಮ್ಮ ಇಷ್ಟದ ಹಾಗೇ ರುಚಿ, ಶುಚಿ ಇಲ್ಲದ ಆಹಾರ ನೀಡುವುದು ಮೊದಲು ಬಿಡಬೇಕು. ವಿದ್ಯಾರ್ಥಿಗಳಿಗೆ ಶುಚಿ, ರುಚಿಯಾದ ಆಹಾರ ನೀಡಬೇಕು. ಮೊದಲು ನೀವು ಸ್ವಚ್ಚತೆಗೆ ಆದ್ಯತೆ ನೀಡಬೇಕು. ಇಲ್ಲಿರುವ ಎಲ್ಲಾ ವಿದ್ಯಾರ್ಥಿನಿಯರು ನಿಮಗೆ ಮಕ್ಕಳಿದ್ದಂತೆ, ಇಲ್ಲಿಯ ವಿದ್ಯಾರ್ಥಿಗಳನ್ನು ಪೋಷಕರಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಕನ್ನಡಪ್ರಭ ವಾರ್ತೆ ಬೇಲೂರು
ವಿದ್ಯಾರ್ಥಿನಿಲಯಕ್ಕೆ ನ್ಯಾಯಾಧೀಶೆ ಎಂ ಎಸ್ ಶಶಿಕಲಾ ದಿಢೀರ್ ಭೇಟಿ ನೀಡಿ ಕುಂದು ಕೊರತೆಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದರು.ಜೆಪಿ ನಗರದ ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಅಹವಾಲು ಸ್ವೀಕರಿಸಿದ ನ್ಯಾಯಾಧೀಶರು, ಮಕ್ಕಳ ವಿಶ್ರಾಂತಿ ಕೋಣೆ, ದಾಸ್ತಾನು ಕೊಠಡಿ ಹಾಗೂ ಅಡಿಗೆ ಕೋಣೆ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ್ದ ಊಟದ ಸಾಂಬಾರ್ ರುಚಿ ನೋಡಿದರು.
ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗಾಗಿ ಸರ್ಕಾರ ಹಲವಾರು ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ನಿಮ್ಮ ಇಷ್ಟದ ಹಾಗೇ ರುಚಿ,ಶುಚಿ ಇಲ್ಲದ ಆಹಾರ ನೀಡುವುದು ಮೊದಲು ಬಿಡಬೇಕು. ವಿದ್ಯಾರ್ಥಿಗಳಿಗೆ ಶುಚಿ, ರುಚಿಯಾದ ಆಹಾರ ನೀಡಬೇಕು. ಮೊದಲು ನೀವು ಸ್ವಚ್ಚತೆಗೆ ಆದ್ಯತೆ ನೀಡಬೇಕು. ಇಲ್ಲಿರುವ ಎಲ್ಲಾ ವಿದ್ಯಾರ್ಥಿನಿಯರು ನಿಮಗೆ ಮಕ್ಕಳಿದ್ದಂತೆ, ಇಲ್ಲಿಯ ವಿದ್ಯಾರ್ಥಿಗಳನ್ನು ಪೋಷಕರಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಮೇಲಧಿಕಾರಿಗಳಿಗೆ ತಿಳಿಸಿ ಎಚ್ಚರಿಕೆ ನೀಡಬೇಕು. ನೀವೇ ಏಕವಚನದಲ್ಲಿ ಬೈಯ್ದು ಶಿಕ್ಷೆ ಕೊಡಬಾರದು. ಸರ್ಕಾರ ನೀಡುವಂತಹ ಪೋಷಕಾಂಶ ಆಹಾರವನ್ನು ಸರಿಯಾಗಿ ಕೊಡಬೇಕು ಎಂದು ಎಚ್ಚರಿಕೆ ನೀಡಿದರು.ವಿದ್ಯಾರ್ಥಿನಿಯರಿಗೆ ಕಿವಿಮಾತು: ಪೋಷಕರು ತಾವು ಕೂಲಿ ಕೆಲಸ ಮಾಡಿಕೊಂಡು ಮಕ್ಕಳು ಚೆನ್ನಾಗಿ ಓದಲಿ ಎಂದು ನಿಮ್ಮನ್ನು ವಿದ್ಯಾಭ್ಯಾಸಕ್ಕೆ ಕಳಿಸುತ್ತಾರೆ. ಅವರ ಒಳ್ಳೆಯತನ ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳಬಾರದು. ಓದಿನ ಕಡೆಗೆ ಹೆಚ್ಚಿನ ಗಮನ ನೀಡುವ ಮೂಲಕ ನಿಮ್ಮ ಪೋಷಕರ ಕನಸನ್ನು ನನಸು ಮಾಡಬೇಕು. ನಿಮಗೆ ಯಾರಿಂದಲಾದರೂ ತೊಂದರೆಯಾದರೆ ನಮ್ಮ ನ್ಯಾಯಾಲಕ್ಕೆ ನೇರವಾಗಿ ದೂರನ್ನು ನೀಡಿದರೆ ನಿಮ್ಮ ಹೆಸರನ್ನು ಗೌಪ್ಯವಾಗಿಟ್ಟು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ವಿದ್ಯಾರ್ಥಿಗಳು ಹಾಸ್ಟೆಲ್ ಸಮಸ್ಯೆಗಳ ಬಗ್ಗೆ ಬರೆದ ಪತ್ರದ ಮೂಲಕ ಮಾಹಿತಿ ಪಡೆದ ನ್ಯಾಯಾಧೀಶರು ವಾರ್ಡನ್ ವೀಣಾ ಅವರಿಗೆ ಎಚ್ಚರಿಕೆ ನೀಡಿ, ಸರ್ಕಾರ ನೀಡಿರುವ ಚಪಾತಿ ತಯಾರಿ ಯಂತ್ರ ಉತ್ತಮವಾಗಿರದ ಕಾರಣ ಗುಣಮಟ್ಟದ ಆಹಾರ ಮಕ್ಕಳಿಗೆ ಸಿಗುತ್ತಿಲ್ಲ. ಚಪಾತಿ ಯಂತ್ರವನ್ನು ತೆರವು ಮಾಡಿ ಬದಲಿ ಕೊಡುವಂತೆ ಮೇಲಧಿಕಾರಿಗಳಿಗೆ ಸೂಚಿಸುತ್ತೇವೆ. ಅಡುಗೆ ಸಿಬ್ಬಂದಿಯವರಿಗೆ ಸ್ವಚ್ಛತೆ ಜೊತೆಗೆ ಗುಣಮಟ್ಟದ ಆಹಾರ ನೀಡುವಂತೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾ ವಹಿಸಬೇಕು. ಪ್ರತಿನಿತ್ಯ ಆಹಾರ ಗುಣಮಟ್ಟವನ್ನು ವಿದ್ಯಾರ್ಥಿನಿಯರಿಂದ ಪಡೆಯುವಂತೆ ಸೂಚಿಸಿದರಲ್ಲದೆ ಸರಿಯಾದ ರೀತಿಯಲ್ಲಿ ಅಡುಗೆ ಮಾಡದವರ ಮೇಲೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವಂತೆ ತಾಕೀತು ಮಾಡಿದರು.ಈ ಸಂದರ್ಭದಲ್ಲಿ ವಾರ್ಡನ್ ವೀಣಾ, ಎಎಸ್ಐ ಚಂದ್ರು, ಹಮೀಲುದಾರ್ ಪ್ರಕಾಶ್, ಸಿಬ್ಬಂದಿ ಗಿರಿಯಪ್ಪ ಹಾಗೂ ರಮ್ಯ ಹಾಜರಿದ್ದರು.