ಕರ್ನಾಟಕ ರಾಜ್ಯದ ಶೇ.35ರಷ್ಟು ಪಾಲು ಅರಣ್ಯ ಪ್ರದೇಶ ಹೊಂದಿರಬೇಕು ಎಂಬ ನಿಯಮವಿದ್ದರೂ ಪ್ರಸ್ತುತ ರಾಜ್ಯದಲ್ಲಿ ಶೇ.21ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ ಎಂದು ಖಾನಾಪುರ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಕಳವಳ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಖಾನಾಪುರ
ಕರ್ನಾಟಕ ರಾಜ್ಯದ ಶೇ.35ರಷ್ಟು ಪಾಲು ಅರಣ್ಯ ಪ್ರದೇಶ ಹೊಂದಿರಬೇಕು ಎಂಬ ನಿಯಮವಿದ್ದರೂ ಪ್ರಸ್ತುತ ರಾಜ್ಯದಲ್ಲಿ ಶೇ.21ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ ಎಂದು ಖಾನಾಪುರ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಮರಾಠಾ ಮಂಡಳ ಪ್ರೌಢಶಾಲೆಯ ಸಭಾಗೃಹದಲ್ಲಿ ಸೋಮವಾರ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಸ್ಥಳೀಯ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಮರಾಠಾ ಮಂಡಳ ಪ್ರೌಢಶಾಲೆ ಮತ್ತು ಇನ್ನರವ್ಹೀಲ್ ಕ್ಲಪ್ ಆಫ್ ಖಾನಾಪುರ ಸಹಯೋಗದಲ್ಲಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಮುಂದಿನ ಪೀಳಿಗೆಯ ಸುಭದ್ರ ಭವಿಷ್ಯಕ್ಕಾಗಿ ನಾವೆಲ್ಲರೂ ಸೇರಿ ನಮ್ಮ ಮನೆಗಳ ಸುತ್ತ-ಮುತ್ತ, ಶಾಲೆಗಳ ಆವರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡಮರಗಳನ್ನು ನೆಟ್ಟು ಹಸಿರು ವನಸಿರಿ ಅಭಿವೃದ್ಧಿಗೊಳಿಸುವ ಪಣವನ್ನು ತೊಡಬೇಕಾಗಿದೆ ಎಂದರು.ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯ ಪ್ರಯೋಜಕತ್ವವನ್ನು ವಹಿಸಿಕೊಳ್ಳಲು ಅರಣ್ಯ ಇಲಾಖೆಗೆ ಹೆಮ್ಮೆ ಎನಿಸಿದೆ. ಖಾನಾಪುರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವನ್ಯಜೀವಿಗಳು ಹಾಗೂ ಅರಣ್ಯ ಪ್ರದೇಶದ ಮಹತ್ವವನ್ನು ಬಿಂಬಿಸುವ ಉತ್ತಮ ಚಿತ್ರಗಳನ್ನು ಬಿಡಿಸಿದ್ದಾರೆ. ತಮ್ಮ ಚಿತ್ರಗಳ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಬಿಂಬಿಸಿದ್ದಾರೆ. ವಿದ್ಯಾರ್ಥಿಗಳು ಮನಸಿಟ್ಟು ಬಿಡಿಸಿದ ಚಿತ್ರಗಳನ್ನು ಗಮನಿಸಿದಾಗ ಅವರಲ್ಲಿರುವ ಚಿತ್ರಕಲೆಯ ಬಗೆಗಿನ ಆಸಕ್ತಿ ಹಾಗೂ ವಿಷಯಜ್ಞಾನದ ಬಗ್ಗೆ ತಿಳಿದು ಸಂತೋಷ ಉಂಟಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ತಮಗೆ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಭೀಮಗಡ ವಲಯ ಅರಣ್ಯ ಅಧಿಕಾರಿ ಸಯ್ಯದ್ ನದಾಫ ಮಾತನಾಡಿ, ಸರ್ಕಾರ 2011ರಲ್ಲಿ ಲೋಂಡಾ ಹಾಗೂ ಖಾನಾಪುರ ಅರಣ್ಯ ವಿಭಾಗಗಳನ್ನು ವಿಂಗಡಿಸಿ ಭೀಮಗಡ ವನ್ಯಜೀವಿ ವಲಯವನ್ನಾಗಿ ಘೋಷಿಸಿದೆ. ಈ ಅರಣ್ಯದಲ್ಲಿ ಏಷಿಯಾ ಖಂಡದಲ್ಲೇ ಅಪರೂಪ ಎನ್ನಿಸಿರುವ ತೊಗಲುಬಾವಲಿಗಳು, ಇವುಗಳ ಜೊತೆ ಹುಲಿ, ಚಿರತೆ, ಕರಿ ಚಿರತೆ, ಕರಡಿ, ಜಿಂಕೆ, ಸಾರಂಗ, ಕಾಡಾನೆ, ಕಾಡುಕೋಣ ಮತ್ತಿತರ ಅಪರೂಪದ ವನ್ಯಜೀವಿಗಳು ವಾಸವಾಗಿವೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ವನ್ಯಜೀವಿಗಳ ರಕ್ಷಣೆಯೂ ಅಷ್ಟೇ ಮಹತ್ವದ್ದಾಗಿದ್ದು, ಖಾನಾಪುರದ ಕಾಡು ಮತ್ತು ಕಾಡುಪ್ರಾಣಿಗಳನ್ನು ಸಂರಕ್ಷಿಸುವ ಬಗ್ಗೆ ಮತ್ತು ಅವುಗಳ ಅಗತ್ಯತೆಯ ಬಗ್ಗೆ ಎಲ್ಲರೂ ಅರಿಯಬೇಕಿದೆ ಎಂದು ಪ್ರತಿಪಾದಿಸಿದರು.ಕಣಕುಂಬಿ ವಲಯ ಅರಣ್ಯ ಅಧಿಕಾರಿ ದೇವೇಂದ್ರ ಮಾನೆ ಮಾತನಾಡಿ, ಅಭಿವೃದ್ಧಿಪರ ಎಂದು ಬಿಂಬಿಸುತ್ತಿರುವ ಮಹಾನಗರಗಳು ಇಂದು ಪರಿಸರ ನಾಶ, ಪರಿಸರ ಮಾಲಿನ್ಯದಿಂದಾಗಿ ಕಲುಷಿತಗೊಂಡಿವೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತಿತರ ಮಹಾನಗರಗಳಲ್ಲಿ ಶುದ್ಧ ಆಮ್ಲಜನಕ ಪಡೆಯುವುದು ವಿರಳ ಎನಿಸಿಬಿಟ್ಟಿದೆ. ಶುದ್ಧ ಗಾಳಿ, ಪರಿಶುದ್ಧವಾದ ನೀರು ಮತ್ತು ಆಹ್ಲಾದಕರ ವಾತಾವರಣವನ್ನು ಹೊಂದಿರುವ ಖಾನಾಪುರದಲ್ಲಿ ನೆಲೆಸಿರುವ ನಾವೆಲ್ಲರೂ ಪುಣ್ಯವಂತರು. ಅಸಂಖ್ಯಾತ ನದಿಗಳ ಉಗಮಸ್ಥಾನವಾದ ಪಶ್ಚಿಮ ಘಟ್ಟದ ಅಪರೂಪದ ಕಾಡಿನ ಮಹತ್ವದ ಬಗ್ಗೆ ಕನ್ನಡಪ್ರಭ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯ ಉದ್ದೇಶವನ್ನು ಪ್ರತಿಯೊಬ್ಬರೂ ಅರಿತಾಗ ಮಾತ್ರ ಈ ಕಾರ್ಯಕ್ರಮ ಆಯೋಜಿದ್ದಕ್ಕೆ ಸಾರ್ಥಕವಾಗುತ್ತದೆ. ನಮ್ಮ ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಿಸಬೇಕು. ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಮಹತ್ವವನ್ನು ಮನಗಂಡು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಚಿತ್ರಕಲಾ ಸ್ಪರ್ಧೆಯ ವಿಜೇತರು8ನೇ ತರಗತಿ: ಪೂನಮ ಯಡಾಲ್ (ಶಾಂತಿನಿಕೇತನ ಪಬ್ಲಿಕ್ ಸ್ಕೂಲ್) ಪ್ರಥಮಪ್ರತೀಕ ಗಾವಡೆ (ಸರ್ವೋದಯ ವಿದ್ಯಾಲಯ) ದ್ವಿತೀಯಸಾಹಿಲ್ ದೇಸಾಯಿ (ಮರಾಠಾ ಮಂಡಲ ಹೈಸ್ಕೂಲ್) ತೃತೀಯ.
9ನೇ ತರಗತಿ: ಕೃತಿಕಾ ಚೌಗುಲೆ (ಸಿದ್ಧಿವಿನಾಯಕ ಪ್ರೌಢಶಾಲೆ) ಪ್ರಥಮಪ್ರಾಜಕ್ತಾ ಪಾಟೀಲ (ಶಾಂತಿನಿಕೇತನ ಪಬ್ಲಿಕ್ ಸ್ಕೂಲ್) ದ್ವಿತೀಯ
ಋತು ಪೂಜಾರಿ (ಶಾಂತಿನಿಕೇತನ ಪಬ್ಲಿಕ್ ಸ್ಕೂಲ್) ತೃತೀಯ10ನೇ ತರಗತಿ: ಸಾಯಿನಾಥ ಪಾರೇಕರ (ಸರ್ಕಾರಿ ಪ್ರೌಢಶಾಲೆ) ಪ್ರಥಮ
ಸೋನಾಲಿ ಕೋಲಕಾರ (ಸರ್ಕಾರಿ ಪ್ರೌಢಶಾಲೆ) ದ್ವಿತೀಯಪ್ರತಿಜ್ಞಾ ಚೌಗುಲೆ (ಮರಾಠಾ ಮಂಡಳ ಹೈಸ್ಕೂಲ್) ತೃತೀಯ200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
ಪಟ್ಟಣದ ಮರಾಠಾ ಮಂಡಳ ಪ್ರೌಢಶಾಲೆಯಲ್ಲಿ ಸೋಮವಾರ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಸ್ಥಳೀಯ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಮರಾಠಾ ಮಂಡಳ ಪ್ರೌಢಶಾಲೆ ಮತ್ತು ಇನ್ನರವ್ಹೀಲ್ ಕ್ಲಪ್ ಆಫ್ ಖಾನಾಪುರ ಸಹಯೋಗದಲ್ಲಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮರಾಠಾ ಮಂಡಳ ಪ್ರೌಢಶಾಲೆ, ತಾರಾರಾಣಿ ಪ್ರೌಢಶಾಲೆ, ಸರ್ವೋದಯ ಪ್ರೌಢಶಾಲೆ, ಸಿದ್ಧಿ ವಿನಾಯಕ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಹಾಗೂ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ಗಳಿಂದ 8, 9 ಮತ್ತು 10ನೇ ತರಗತಿಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸಿದರು.ಮರಾಠಾ ಮಂಡಳ ಪ್ರೌಢಶಾಲೆ ಆವರಣದ ವಿಶಾಲವಾದ ಹುಲ್ಲಹಾಸಿನ ಮೇಲೆ ಬೆಳಗ್ಗೆ 11.30ಕ್ಕೆ ಆರಂಭವಾದ ಸ್ಪರ್ಧೆ 1.30ಕ್ಕೆ ಕೊನೆಗೊಂಡಿತು. ಹುಲ್ಲಿನ ಹಾಸಿಗೆಯ ಮೇಲೆ ಕುಳಿತು ಮಕ್ಕಳು ಚಿತ್ರವನ್ನು ಬಿಡಿಸಿದರು. ಸ್ಪರ್ಧೆಯ ಯಶಸ್ಸಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ, ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಪ್ಪ, ಸಂಪನ್ಯೂಲ ವ್ಯಕ್ತಿ ಬಸವರಾಜ ಜನಕಟ್ಟಿ, ನಿವೃತ್ತ ಅರಣ್ಯಾಧಿಕಾರಿ ಮಲ್ಲೇಶಪ್ಪ ಬೆನಕಟ್ಟಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ದೇಶಪಾಂಡೆ, ಮರಾಠಾ ಮಂಡಳ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೆ.ವಿ ಕುಲಕರ್ಣಿ, ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ವರ್ಷಾ ದೇಸಾಯಿ, ಖಜಾಂಚಿ ರೂಪಾ ಕುಲಕರ್ಣಿ, ಕಾರ್ಯದರ್ಶಿ ಸವಿತಾ ಕಲ್ಯಾಣಿ, ಸದಸ್ಯರಾದ ಪ್ರಿಯಾ ಸುಳಕರ, ಪ್ರಿಯಾ ಹುಬ್ಬಳಿಕರ, ಸಾಧನಾ ಪಾಟೀಲ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರು ಚಿತ್ರಕಲಾ ಸ್ಪರ್ಧೆಯ ಯಶಸ್ಸಿಗೆ ಶ್ರಮಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಕರ್ನಾಟಕದ ಅರಣ್ಯ ಮತ್ತು ಕರ್ನಾಟಕದ ವನ್ಯಜೀವಿ ವಿಷಯಾಧಾರಿತ ಚಿತ್ರಗಳನ್ನು ಬಿಡಿಸಿದರು. ಸ್ಪರ್ಧೆ ಸಂಪನ್ನಗೊಂಡ ಬಳಿಕ ಖಾನಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಆರ್‌ಎಫ್‌ಒಗಳಾದ ಶ್ರೀಕಾಂತ ಪಾಟೀಲ, ಸಯ್ಯದ್ ನದಾಫ, ದೇವೇಂದ್ರ ಮಾನೆ ಅವರನ್ನೊಳಗೊಂಡ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಚಿತ್ರಕಲಾ ಸ್ಪರ್ಧೆಯ ಮೌಲ್ಯಮಾಪನವನ್ನು ನಡೆಸಿತು. ವಿದ್ಯಾರ್ಥಿಗಳು ರಚಿಸಿದ ಚಿತ್ರಗಳನ್ನು ಕೂಲಂಕುಷವಾಗಿ ಅಳೆದು-ತೂಗಿ ಪರಿಶೀಲಿದ ತರುವಾಯ 8, 9 ಮತ್ತು 10ನೇ ತರಗತಿಯ ವಿಭಾಗಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ಚಿತ್ರಗಳನ್ನು ಆಯ್ಕೆ ಮಾಡಿಕೊಟ್ಟರು.ಸಂಜೆ ಮರಾಠಾ ಮಂಡಳ ಪ್ರೌಢಶಾಲೆಯ ಸಭಾಗೃಹದಲ್ಲಿ ಸಂಪನ್ನಗೊಂಡ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ತೀರ್ಪುಗಾರರ ಆಯ್ಕೆಯಂತೆ ವಿಜೇತರ ಹೆಸರುಗಳನ್ನು ಘೋಷಿಸಿ ವಿಜೇತರಿಗೆ ಕನ್ನಡಪ್ರಭ ದಿನಪತ್ರಿಕೆ ವತಿಯಿಂದ ಪ್ರಮಾಣ ಪತ್ರ ಹಾಗೂ ಪ್ರಾಯೋಜಕರಿಂದ ನೀಡಲಾದ ಬಹುಮಾನಗಳನ್ನು ವಿತರಿಸಲಾಯಿತು. ಮರಾಠಾ ಮಂಡಳ ಶಾಲೆಯ ಮುಖ್ಯಾಧ್ಯಾಪಕ ಕೆ.ವಿ ಕುಲಕರ್ಣಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್.ಎಂ.ಮುತಗಿ, ದೇಮಣ್ಣ ಮೆಳವಂಕಿ, ತುಕಾರಾಮ ಪತ್ರಿ ಸೇರಿದಂತೆ ಪಟ್ಟಣದ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಪ್ರಸನ್ನ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.ಒಟ್ಟು ವಿಸ್ತೀರ್ಣದ ಶೇ.70ರಷ್ಟು ಆಮ್ಲಜನಕ ಕಾರ್ಖಾನೆಯನ್ನು ಹೊಂದಿರುವ ಖಾನಾಪುರ ತಾಲೂಕಿನಲ್ಲಿ ಪ್ರಾಕೃತಿಕ ವೈಭವ ಮತ್ತು ಇಲ್ಲಿಯ ವನ್ಯಜೀವಿಗಳನ್ನು ಚಿತ್ರರೂಪದಲ್ಲಿ ಬಿಂಬಿಸುವ ಕೆಲಸಕ್ಕೆ ಕನ್ನಡಪ್ರಭ ದಿನಪತ್ರಿಕೆಯವರು ಕೈ ಹಾಕಿ ಯಶಸ್ವಿಯಾಗಿದ್ದಾರೆ. ಪತ್ರಿಕೆ ನೀಡಿದ ಕರೆಗೆ ಓಗೊಟ್ಟ ನೂರಾರು ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಹೊಸ ಆಲೋಚನೆಯ ಮೂಲಕ ಅರಣ್ಯ ಇಲಾಖೆಯ ಜೊತೆ ಕೈಜೋಡಿಸಿದ ಪತ್ರಿಕೆಗೆ ಧನ್ಯವಾದ.-ಸುನೀತಾ ನಿಂಬರಗಿ,
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ.ಖಾನಾಪುರದಲ್ಲಿ ಕನ್ನಡಪ್ರಭ ದಿನಪತ್ರಿಕೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಯೋಜಕರಲ್ಲಿ ಒಬ್ಬರಾಗಿ ಪಾಲ್ಗೊಂಡಿದ್ದು ಖುಷಿ ತಂದಿದೆ. ಪರಿಸರ, ಅರಣ್ಯ, ವನ್ಯಜೀವಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಿರುವ ಈ ಚಿತ್ರಕಲಾ ಸ್ಪರ್ಧೆಯಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣವಾಗಿದೆ.-ಸವಿತಾ ಕಲ್ಯಾಣಿ,
ಇನ್ನರವ್ಹೀಲ್ ಕ್ಲಬ್ ಕಾರ್ಯದರ್ಶಿ.